Get Updates
Get notified of breaking news, exclusive insights, and must-see stories!

ದಕ್ಷಿಣ ಭಾರತದ ರಾಜ್ಯಗಳಿಗೆ ಎದುರಾಯ್ತಾ ಮಹಾ ಕಂಟಕ?

ಹೊಸದಿಲ್ಲಿ: ಲೋಕಸಭಾ ಸ್ಥಾನಗಳ ಮರು ವಿಂಗಡಣೆ ಮಾತಿಗೆ ದಕ್ಷಿಣ ಭಾರತದಿಂದ ವಿರೋಧ ವ್ಯಕ್ತವಾಗುತ್ತಿದೆ. 2026ರ ನಂತರ ಲೋಕಸಭಾ ಸ್ಥಾನಗಳ ಮರು ವಿಂಗಡಣೆಗೆ ಕೇಂದ್ರ ಸರ್ಕಾರ ಮುಂದಾಗುತ್ತೆ ಎನ್ನಲಾಗಿದ್ದು, ಇದರಿಂದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಲೋಕಸಭಾ ಸ್ಥಾನಗಳು ಸಿಗಲಿವೆ. ಪರಿಣಾಮ ದಕ್ಷಿಣ ಭಾರತದ ರಾಜ್ಯಗಳ ಶಕ್ತಿ ಕುಂದಲಿದೆ ಎಂದು ಕೆ.ಟಿ.ರಾಮರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಲೋಕಸಭೆ ಸ್ಥಾನ ಮರುವಿಂಗಡಣೆ ಅಥವಾ ಮರು ಹಂಚಿಕೆಗೆ ಹತ್ತಾರು ವರ್ಷದಿಂದ ಒತ್ತಾಯ ಕೇಳಿಬಂದಿದೆ. ಆದರೆ ದಕ್ಷಿಣದ ರಾಜ್ಯಗಳು ಇದನ್ನ ವಿರೋಧಿಸುತ್ತಾ ಬಂದಿವೆ. ಕಾರಣ ಏನೆಂದರೆ ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನು ವಿಂಗಡಣೆ ಮಾಡಿದರೆ, ಭವಿಷ್ಯದಲ್ಲಿ ದಕ್ಷಿಣ ಭಾರತದ ಲೋಕಸಭಾ ಸ್ಥಾನಗಳ ಸಂಖ್ಯೆ ಕುಗ್ಗಿ ಹೋಗಲಿದೆ. ನಂತರ ದಕ್ಷಿಣ ಭಾರತದ ರಾಜ್ಯಗಳು ಪ್ರತಿಯೊಂದಕ್ಕೂ ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಆರೋಪ ಕೇಳಿಬಂದಿತ್ತು. ಇಂತಹ ಆರೋಪಕ್ಕ ಪುಷ್ಟಿ ನೀಡುವಂತೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಗಂಭೀರ ಮಾತುಗಳನ್ನ ಆಡಿದ್ದಾರೆ.

Telangana Minister KTR

ಎಚ್ಚೆತ್ತುಕೊಳ್ಳದ್ದಿದ್ದರೆ ಸಂಕಷ್ಟ ಗ್ಯಾರಂಟಿ!

ತೆಲಂಗಾಣ ಐಟಿ ಸಚಿವರೂ ಆಗಿರುವ ಕೆ.ಟಿ.ರಾಮರಾವ್, ಈ ವಿಚಾರದಲ್ಲಿ ದಕ್ಷಿಣ ಭಾರತದ ಎಲ್ಲಾ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಕರೆನೀಡಿದ್ದಾರೆ. ಏಕೆಂದರೆ 2026ರ ನಂತರ ಲೋಕಸಭಾ ಸ್ಥಾನಗಳನ್ನು ಪುನರ್ ವಿಂಗಡಣೆ ಮಾಡಿ, ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಸ್ಥಾನ ನೀಡಿದರೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಅನ್ಯಾಯ ಆಗದಂತೆ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನ ವಿಂಗಡಿಸಿದ್ದೇ ಆದರೆ ಭವಿಷ್ಯದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಕಷ್ಟ ಗ್ಯಾರಂಟಿ ಎಂದಿದ್ದಾರೆ.

ದೇಶದ ಆರ್ಥಿಕ ಬಲ ದಕ್ಷಿಣದ ರಾಜ್ಯಗಳು

ದೇಶದ ಜನಸಂಖ್ಯೆಯ ಕೇವಲ 18% ರಷ್ಟು ಪ್ರಮಾಣ ಹೊಂದಿರುವ ದಕ್ಷಿಣ ರಾಜ್ಯಗಳು ದೇಶದ ಒಟ್ಟು ದೇಶೀಯ ಉತ್ಪನ್ನ ಅಂದರೆ GDPಯ 35% ರಷ್ಟನ್ನು ಕೊಡುಗೆ ನೀಡುತ್ತಿವೆ. ರಾಷ್ಟ್ರದ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ದಕ್ಷಿಣ ಭಾರತದ ರಾಜ್ಯಗಳನ್ನು ಕೇಂದ್ರ ನಿರ್ಲಕ್ಷಿಸಬಾರದು ಎಂದು ಮುನ್ನೆಚ್ಚರಿಕೆ ಮಾತುಗಳನ್ನ ಆಡಿದ್ದಾರೆ. ಈ ಹಿಂದೆ ಅಂದರೆ ಹಲವು ದಶಕಗಳ ಹಿಂದೆ ಲೋಕಸಭಾ ಸ್ಥಾನಗಳ ಪುನರ್ ವಿಂಗಣೆಗೆ ಒತ್ತಾಯ ಕೇಳಿಬಂದಾಗ ಇದೇ ರೀತಿ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟು ಪ್ರದರ್ಶಿಸಿದ್ದವು. ಆಗ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳ ಆಗ್ರಹಕ್ಕೆ ಮಣಿದಿತ್ತು.

Telangana Minister KTR

ಕರ್ನಾಟಕಕ್ಕೂ ಇದರಿಂದ ಭಾರಿ ಅನ್ಯಾಯ

ಹಾಗೇ ಮತ್ತೊಂದು ಕಡೆ ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದ ರೀತಿಯಲ್ಲೇ ನಮ್ಮ ರಾಜ್ಯ ಕರ್ನಾಟಕ ಕೂಡ ಲೋಕಸಭಾ ಸ್ಥಾನಗಳ ಮರು ವಿಂಗಡಣೆ ಪರಿಣಾಮ ಸಾಕಷ್ಟು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಏಕೆಂದರೆ ಕರ್ನಾಟಕದಲ್ಲಿ ಈಗ 28 ಲೋಕಸಭಾ ಸ್ಥಾನ ಇವೆ. ಭವಿಷ್ಯದಲ್ಲಿ ಅಂದರೆ 2026ರ ನಂತರ ಲೋಕಸಭಾ ಸ್ಥಾನಗಳ ಮರು ವಿಂಗಡಣೆ ಮಾಡಿದರೆ ಕರ್ನಾಟಕಕ್ಕಿಂತ ಉತ್ತರ ಭಾರತದ ರಾಜ್ಯಗಳು ಹೆಚ್ಚಿನ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಉತ್ತರ ಭಾರತದಲ್ಲಿ ಜನಸಂಖ್ಯೆ ಸ್ಫೋಟ!

ಅಂದಹಾಗೆ ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಉತ್ತರ ಭಾರತದಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣ ಜೋರಾಗಿದೆ. ಇದೇ ಕಾರಣಕ್ಕೆ ಉತ್ತರ ಭಾರತದ ರಾಜ್ಯಗಳು ಪರದಾಡುತ್ತಿವೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವ ಸಂದರ್ಭದಲ್ಲಿ ಭಾರತದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡುತ್ತಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗಬಾರದು ಎಂಬ ಕೂಗು ಕೇಳಿಬರುತ್ತಿದೆ. ಇದರ ಜೊತೆಗೆ ಲೋಕಸಭಾ ಸ್ಥಾನಗಳ ಮರುಹಂಚಿಕೆ ನಡೆದರೆ ದಕ್ಷಿಣ ಭಾರತದ ರಾಜ್ಯಗಳ ವಿನಾಶಕ್ಕೆ ಕೊನೆಯ ಮೊಳೆ ಹೊಡದಂತೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಒಟ್ನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮತ್ತೊಮ್ಮೆ ಒಗ್ಗಟ್ಟಿನಿಂದ ಹೋರಾಡುವ ಪರಿಸ್ಥಿತಿ ಎದುರಾಗುತ್ತಿದೆ. ಲೋಕಸಭಾ ಸ್ಥಾನಗಳ ವಿಚಾರದಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗದಂತೆ ತಡೆಯಲು ತೆಲಂಗಾಣ ಸಚಿವರು ಕರೆ ನೀಡಿದ್ದಾರೆ. ಆದರೆ ಈ ಬಗ್ಗೆ ಈವರೆಗೂ ದಕ್ಷಿಣ ಭಾರತದ ಯಾವುದೇ ರಾಜಕೀಯ ಪಕ್ಷವು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮುಂದೆ ಈ ವಿಚಾರ ಯಾವ ರೀತಿಯ ತಿರುವು ಪಡೆಯಲಿದೆಯೋ ಕಾದು ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+