ತೆಲಂಗಾಣ: ಚುನಾವಣೆಗು ಮುನ್ನ ಸಿಎಂ ಕೆಸಿಆರ್‌ಗೆ ಆಘಾತ, ಕಾಂಗ್ರೆಸ್ ಸೇರಿದ ಪ್ರಮುಖ 35 ನಾಯಕರು!
ಹೈದರಾಬಾದ್ , ಜೂನ್. 27: ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್‌ಗೆ ಪಕ್ಷದ ನಾಯಕರು ಆಘಾತ ನೀಡಿದ್ದಾರೆ. ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡಿ ರಾಷ್ಟ್ರ ರಾಜಕೀಯದಲ್ಲಿ ಮೋಡಿ ಮಾಡಬೇಕು ಎನ್ನುತ್ತಿರುವವರಿಗೆ ರಾಜ್ಯದಲ್ಲಿಯೇ ತಮ್ಮ ಪಕ್ಷದ ನಾಯಕರು "ಕೈ" ಕೊಟ್ಟಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೂ ಮುನ್ನ ಭಾರತ್ ರಾಷ್ಟ್ರ ಸಮಿತಿಯ 35 ಪ್ರಮುಖ ನಾಯಕರು ಕಾಂಗ್ರೆಸ್ ಸೇರಿದ್ದಾರೆ.
ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ಸೇರಿದಂತೆ ಸಿಎಂ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ದ 35 ಮುಖಂಡರು ಸೋಮವಾರ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಭಾರತ್ ರಾಷ್ಟ್ರ ಸಮಿತಿ ಮುಖಂಡರು ಔಪಚಾರಿಕವಾಗಿ ಕೈ ಹಿಡಿದಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಮತ್ತು ಅದರ ತೆಲಂಗಾಣ ಘಟಕದ ಕಾಂಗ್ರೆಸ್ ಮುಖ್ಯಸ್ಥ ಎ ರೇವಂತ್ ರೆಡ್ಡಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು. ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಖಮ್ಮಂನ ಮಾಜಿ ಲೋಕಸಭಾ ಸಂಸದರಾಗಿದ್ದರೆ, ಕೃಷ್ಣರಾವ್ ಮಾಜಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಸಚಿವರಾಗಿದ್ದು, ಐದು ಬಾರಿ ಶಾಸಕರಾಗಿದ್ದಾರೆ.
ಆರು ಬಾರಿಯ ಮಾಜಿ ಶಾಸಕ ಗುರುನಾಥರೆಡ್ಡಿ, ಮಾಜಿ ಶಾಸಕ ಹಾಗೂ ಜಿಲ್ಲಾ ಪರಿಷತ್ ಅಧ್ಯಕ್ಷ ಕೋರಂ ಕನಕಯ್ಯ, ಮಾಜಿ ಶಾಸಕ ಪಾಯಂ ವೆಂಕಟೇಶ್ವರಲು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿಬಿ) ಮಾಜಿ ಅಧ್ಯಕ್ಷ ಮೂವಮೆಂಟ್ ವಿಜಯ ಬೇಬಿ, ಹಾಲಿ ಡಿಸಿಸಿಬಿ ಅಧ್ಯಕ್ಷ ತುಳ್ಳೂರಿ, ಬ್ರಹ್ಮಯ್ಯ, ಎಸ್‌ಸಿ ನಿಗಮದ ಮಾಜಿ ಅಧ್ಯಕ್ಷ ಪಿಡಮರ್ತಿ ರವಿ, ಮಾರ್ಕ್‌ಫೆಡ್ ರಾಜ್ಯ ಉಪಾಧ್ಯಕ್ಷ ಬೊರ್ರಾ ರಾಜಶೇಖರ್ ಮತ್ತು ಪುರಸಭೆ ಅಧ್ಯಕ್ಷ ವಾರ್ಯ ಮತ್ತು ಮಂಡಲ ಪ್ರಜಾ ಪರಿಷತ್ ಅಧ್ಯಕ್ಷ ಎಸ್.ಜೈಪಾಲ್ ಸೇರಿದಂತೆ ಇತರ ಹಿರಿಯ ಬಿಆರ್‌ಎಸ್ ಮುಖಂಡರು ಹಸ್ತಕ್ಕೆ ಹಸ್ತ ಮೀಲಾಯಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ನಲ್ಲಿ, "ತೆಲಂಗಾಣದ ಮೂಲಕ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಪಕ್ಷದ ನಿರೀಕ್ಷೆಗಳಿಗೆ ದೊಡ್ಡ ಉತ್ತೇಜನ ಸಿಗುತ್ತಿದ್ದು, ಹೆಚ್ಚು ಹೆಚ್ಚು ಜನರು ಪ್ರೀತಿ ಮತ್ತು ಸಮೃದ್ಧಿಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯಲು ನಮ್ಮೊಂದಿಗೆ ಒಗ್ಗೂಡುತ್ತಿದ್ದಾರೆ" ಎಂದು ಹೇಳಿದೆ.
"ಇಂದು ತೆಲಂಗಾಣದ ಹಿರಿಯ ನಾಯಕರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಐಸಿಸಿ ತೆಲಂಗಾಣ ಉಸ್ತುವಾರಿ ಮಾಣಿಕ್ರಾವ್ ಠಾಕ್ರೆ, ತೆಲಂಗಾಣ ಪಿಸಿಸಿ ಅಧ್ಯಕ್ಷ ವೇವಂತರೆಡ್ಡಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು" ಎಂದು ಪಕ್ಷ ಹೇಳಿದೆ.
ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ತೆಲಂಗಾಣದಲ್ಲಿ ಕಳೆದ ಸುಮಾರು ಒಂದು ದಶಕದಿಂದ ಅಧಿಕಾರದಲ್ಲಿರುವ ಬಿಆರ್‌ಎಸ್‌ನಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ.
ಏಪ್ರಿಲ್‌ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಜೂಪಲ್ಲಿ ಕೃಷ್ಣರಾವ್ ಅವರನ್ನು ಬಿಆರ್‌ಎಸ್‌ನಿಂದ ಅಮಾನತುಗೊಳಿಸಲಾಗಿತ್ತು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದವು. ಕೊನೆಗೂ ಇಬ್ಬರು ಕಾಂಗ್ರೆಸ್ ಪಾಲಾಗಿದ್ದಾರೆ.
ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮೂರನೇ ಅವಧಿಗೆ ಸಿಎಂ ಆಗಲು ಬಯಸುತ್ತಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಯಾಗಿರುವ ಕೆಸಿಆರ್ 2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯಾಗಲು ಪ್ರಮುಖ ವ್ಯಕ್ತಿಯಾಗಿದ್ದಾರೆ. 2018 ರ ಚುನಾವಣೆಯಲ್ಲಿ, ಅವರ ಪಕ್ಷವು ತೆಲಂಗಾಣ ಅಸೆಂಬ್ಲಿಯಲ್ಲಿ ಬಹುಮತ ಗಳಿಸಿತ್ತು. ಅಸ್ಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಕೇವಲ ಏಳು ಸ್ಥಾನಗಳೊಂದಿಗೆ ದೂರದ ಮೂರನೇ ಸ್ಥಾನದಲ್ಲಿದೆ. ಕೇವಲ ಒಂದೇ ಒಂದು ಸ್ಥಾನವನ್ನು ಗೆದ್ದಿರುವ ಬಿಜೆಪಿ ರಾಜ್ಯದಲ್ಲಿ ತನ್ನ ಹೆಜ್ಜೆಗುರುತು ವಿಸ್ತರಿಸಲು ಪ್ರಯತ್ನಿಸುತ್ತಿದೆ.h












Click it and Unblock the Notifications