Telangana Election 2023: ಬಿಆರ್‌ಎಸ್ ಪಕ್ಷ ಸೇರಿದ ಟಿಡಿಪಿ ಮಾಜಿ ಅಧ್ಯಕ್ಷ- ದುರಂತ ನಾಯಕನಾಗುವತ್ತ ಚಂದ್ರಬಾಬು ನಾಯ್ಡು
ಹೈದರಾಬಾದ್, ನವೆಂಬರ್ 04: ಮೊನ್ನೆ ತಾನೇ ಜೈಲಿನಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ಅವರಿಗೆ ಮತ್ತೊಂದು ಆಘಾತವಾಗಿದೆ. ತೆಲಂಗಾಣ ಟಿಡಿಪಿ ಮಾಜಿ ಮುಖ್ಯಸ್ಥ ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ತೆಲಂಗಾಣ ಘಟಕದ ಮಾಜಿ ಅಧ್ಯಕ್ಷ ಕಸನಿ ಜ್ಞಾನೇಶ್ವರ್ ಅವರು ಬಿಆರ್‌ಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನವೆಂಬರ್ 30 ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನವೇ ಈ ಬೆಳವಣಿಗೆ ನಡೆದಿರುವುದು ಚಂದ್ರಬಾಬು ನಾಯ್ಡು ಅವರಿಗೆ ಆಘಾತವನ್ನು ಉಂಟುಮಾಡಿದೆ.

ಕಸನಿ ಜ್ಞಾನೇಶ್ವರ್ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸಮ್ಮುಖದಲ್ಲಿ ಶುಕ್ರವಾರ ಬಿಆರ್‌ಎಸ್‌ಗೆ ಸೇರ್ಪಡೆಗೊಂಡರು.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರವನ್ನು ಟಿಡಿಪಿ ತೆಗೆದುಕೊಂಡಿದೆ. ಆ ನಂತರ ಜ್ಞಾನೇಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.
ಜ್ಞಾನೇಶ್ವರ್ ಅವರನ್ನು ಬಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ ಅವರು ಪಕ್ಷಕ್ಕೆ ಸ್ವಾಗತಿಸಿದರು. ಪಕ್ಷದ ಹೆಸರು ಮತ್ತು ಚಿಹ್ನೆ ಹೊಂದಿರುವ ಗುಲಾಬಿ ಸ್ಕಾರ್ಫ್ ಅನ್ನು ನೀಡಿದರು.
ಜ್ಞಾನೇಶ್ವರ್ ಹಾಗೂ ಅವರ ಬೆಂಬಲಿಗರಿಗೆ ಉತ್ತಮ ಭವಿಷ್ಯವಿದೆ ಎಂದು ಕೆಸಿಆರ್ ಹೇಳಿದರು. ಜ್ಞಾನೇಶ್ವರ್ ಅವರಿಗೆ ಸ್ಥಾನ ಮತ್ತು ಗೌರವ ನೀಡುವುದಾಗಿ ಕೆಸಿಆರ್ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಟಿಡಿಪಿ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು. ಅಕ್ಟೋಬರ್ 30 ರಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರು. ಇದಕ್ಕೂ ಒಂದು ದಿನ ಮೊದಲು ಜ್ಞಾನೇಶ್ವರ್ ಅವರು ರಾಜ್ಯ ಘಟಕದ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಈ ಮೂಲಕ ತೆಲಂಗಾಣದಲ್ಲಿ ಟಿಡಿಪಿ ಭಾರೀ ಆಘಾತವನ್ನು ಅನುಭವಿಸಿತು.
ಉನ್ನತ ನಾಯಕತ್ವದ ನಿರ್ಧಾರದಿಂದ ತಾವು ಮತ್ತು ತೆಲಂಗಾಣದ ಪಕ್ಷದ ಕಾರ್ಯಕರ್ತರು ಸಂಪೂರ್ಣ ನಿರಾಶೆಗೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ನಿರ್ಧಾರ ಕೈಗೊಂಡಿರುವುದಾಗಿ ಜ್ಞಾನೇಶ್ವರ್ ಹೇಳಿದ್ದಾರೆ.
'ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಸಂಪೂರ್ಣ ತಯಾರಿ ನಡೆಸಿದ್ದೆವು. ಚುನಾವಣೆಯಲ್ಲಿ ಪಕ್ಷ ಏಕೆ ಸ್ಪರ್ಧಿಸುತ್ತಿಲ್ಲ ಎಂಬುದಕ್ಕೆ (ಟಿಡಿಪಿಯ ಉನ್ನತ ನಾಯಕತ್ವದಿಂದ) ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಕ್ಷದಲ್ಲಿ ಇರುವ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಜ್ಞಾನೇಶ್ವರ್ ನಿರ್ಗಮನದ ನಂತರ ಟಿಡಿಪಿ ತೆಲಂಗಾಣ ಘಟಕವು ಅನಾಥವಾಗಿದೆ. ಈ ವರೆಗೂ ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಲಾಗಿಲ್ಲ.
ಕಳೆದ ಮೂರು ಚುನಾವಣೆಗಳಲ್ಲಿ ತೆಲಂಗಾಣದಲ್ಲಿ ಪಕ್ಷದ ಮತಗಳ ಪ್ರಮಾಣ ಸತತವಾಗಿ ಕುಗ್ಗಿದೆ. 2009 ರಲ್ಲಿ ಅದು ಶೇಕಡಾ 20.8 ರಷ್ಟು ( 39 ವಿಧಾನಸಭಾ ಸ್ಥಾನಗಳು ) ಮತ ಗಳಿಸುವ ಮೂಲಕ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. 2014 ರಲ್ಲಿ ಶೇಕಡಾ 14.6 ರಷ್ಟು ( 15 ವಿಧಾನಸಭಾ ಸ್ಥಾನಗಳು ) ಮತಗಳನ್ನು ಗಳಿಸಿತ್ತು. 2018 ರಲ್ಲಿ ಶೇ 3.5 ಮತಗಳನ್ನು ( 2 ವಿಧಾನಸಭಾ ಸ್ಥಾನ ) ಗಳಿಸುವಲ್ಲಿ ಯಶಸ್ವಿಯಾಯಿತು.
2018 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ, ಟಿಡಿಪಿಯು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಜೊತೆಗೆ ಚುನಾವಣಾ ಪೂರ್ವ ಒಪ್ಪಂದವನ್ನು ಹೊಂದಿತ್ತು.
ಮತ್ತೊಂದೆಡೆ, ಆಂಧ್ರಪ್ರದೇಶದಲ್ಲಿ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ನಟ-ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷ (ಜೆಎಸ್ಪಿ), ತೆಲಂಗಾಣ ವಿಧಾನಸಭೆ ಚುನಾವಣೆಗೆ 32 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.












Click it and Unblock the Notifications