Telangana Assembly Election 2023: ನಟ ಪವನ್ ಕಲ್ಯಾಣ್‌ರನ್ನು ಭೇಟಿ ಮಾಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ-ಕಾರಣವೇನು?
ಹೈದರಾಬಾದ್, ಅಕ್ಟೋಬರ್ 18: ನವೆಂಬರ್‌ನಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಅಬ್ಬರದ ಪ್ರಚಾರ ಆರಂಭಿಸಿವೆ. ಆಡಳಿತಾರೂಢ ಬಿಆರ್‌ಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಎರಡೂ ಪಕ್ಷಗಳಿಗೆ ಪೈಪೋಟಿ ನೀಡಲು ಬಿಜೆಪಿಯೂ ಸಹ ಕಸರತ್ತಿನಲ್ಲಿ ತೊಡಗಿದೆ. ಇದರ ಭಾಗವಾಗಿ ಬಿಜೆಪಿ ನಾಯಕರು ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರನ್ನು ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಹಾಗೂ ರಾಜ್ಯಸಭಾ ಸದಸ್ಯ ಕೆ ಲಕ್ಷ್ಮಣ್ ಅವರು ಬುಧವಾರ ಭೇಟಿಯಾಗಿದ್ದಾರೆ. ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಮೈತ್ರಿ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪವನ್ ಕಲ್ಯಾಣ್ ಅವರ ಹೈದರಾಬಾದ್ ಕಚೇರಿಯಲ್ಲಿ ಸಭೆ ನಡೆದಿದೆ. ಇದೇ ವೇಳೆ, ಹೇಳಿಕೆ ನೀಡಿರುವ ಜನಸೇನಾ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಮುಂದುವರಿಯಲಿದೆ ಎಂದು ತಿಳಿಸಿದೆ.
ತೆಲಂಗಾಣ ವಿಧಾನಸಭೆ ಚುನಾವಣೆ ಕುರಿತು ಮಾತನಾಡಿರುವ ಪವನ್ ಕಲ್ಯಾಣ್, ಜನಸೇನಾ ಪಕ್ಷವು ತೆಲಂಗಾಣದಲ್ಲಿ ಕನಿಷ್ಠ 30 ಸ್ಥಾನಗಳಲ್ಲಿ ಸ್ಪರ್ಧಿಸಬೇಕು. ಇಲ್ಲದಿದ್ದರೆ ಪಕ್ಷದ ಕಾರ್ಯಕರ್ತರ ನೈತಿಕತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯ ಉನ್ನತ ನಾಯಕರ ಕೋರಿಕೆಯ ಮೇರೆಗೆ ಈ ಹಿಂದೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಜನಸೇನಾ ಸ್ಪರ್ಧಿಸಿರಲಿಲ್ಲ. ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಜನಸೇನಾ ಶ್ರಮಿಸಿತು ಎಂದು ಅವರು ತಿಳಿಸಿದ್ದಾರೆ.
ಒಂದು ಅಥವಾ ಎರಡು ದಿನಗಳಲ್ಲಿ ಮೈತ್ರಿ ಬಗ್ಗೆ ನಿರ್ಧಾರವನ್ನು ಅಂತಿಮಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ತೆಲಂಗಾಣದ ಕುಕಟ್‌ಪಲ್ಲಿ, ಎಲ್‌ಬಿ ನಗರ, ನಾಗರ್‌ಕರ್ನೂಲ್, ವೈರಾ, ಖಮ್ಮಂ, ಮುನುಗೋಡು, ಕುತುಬುಲ್ಲಾಪುರ, ಸೆರಿಲಿಂಗಂಪಲ್ಲಿ, ಪಟಂಚೇರು, ಸನತ್ ನಗರ, ಕೊತಗುಡೆಂ, ಉಪ್ಪಲ್, ಅಶ್ವರಾವ್‌ಪೇಟೆ, ಪಾಲಕುರ್ತಿ, ನರಸಂಪೇಟ್ ಸೇರಿದಂತೆ 32 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಈ ತಿಂಗಳ ಆರಂಭದಲ್ಲಿ ಜನಸೇನೆ ತಿಳಿಸಿದೆ.
ಸ್ಟೇಷನ್ ಘನಪುರ, ಹುಸ್ನಾಬಾದ್, ರಾಮ ಗುಂಡಂ, ಜಗಿತ್ಯಾಲ, ನಕಿರೇಕಲ್, ಹುಜೂರ್ ನಗರ, ಮಂಥನಿ, ಕೊಡದ, ಸತ್ತುಪಲ್ಲಿ, ವಾರಂಗಲ್ ಪಶ್ಚಿಮ, ವಾರಂಗಲ್ ಪೂರ್ವ, ಮಲ್ಕಾಜಿಗಿರಿ, ಖಾನಾಪುರ, ಮೇಡ್ಚಲ್, ಪಾಲೇರು, ಇಲ್ಲಾಂಡು, ಮಧಿರಾ ವಿಧಾನಸಭೆ ಕ್ಷೇತ್ರಗಳಲ್ಲಿ ಜನಸೇನಾ ಸ್ಪರ್ಧಿಸಲಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.












Click it and Unblock the Notifications