ಟಾಟಾ ಗ್ರೂಪ್‌ನಿಂದ ಹೊಸೂರು ಘಟಕಕ್ಕೆ 45 ಸಾವಿರ ಉದ್ಯೋಗಿಗಳ ನೇಮಕ
ನವದೆಹಲಿ, ನವೆಂಬರ್ 01; ಟಾಟಾ ಗ್ರೂಪ್ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಹೊಸೂರಿನಲ್ಲಿರುವ ಐ-ಪೋನ್ ಬಿಡಿ ಭಾಗಗಳ ಉತ್ಪಾದನೆ ಘಟಕಕ್ಕೆ ಈ ನೇಮಕಾತಿ ನಡೆಸಲು ಚಿಂತನೆ ನಡೆಸಿದೆ.
ಸದ್ಯದ ಮಾಹಿತಿ ಪ್ರಕಾರ ಟಾಟಾ ಗ್ರೂಪ್ ಹೊಸೂರು ಘಟಕಕ್ಕಾಗಿಯೇ 45 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಲಿದೆ. ಟಾಟಾ ಮತ್ತು ಆಪಲ್‌ಗೆ ಜಂಟಿಯಾಗಿ ಐ-ಫೋನ್ ಘಟಕದ ನೇಮಕಾತಿ ನಡೆಸಲಿವೆ.
ಮುಂದಿನ 18 ರಿಂದ 24 ತಿಂಗಳಿನಲ್ಲಿ ಈ ನೇಮಕಾತಿ ನಡೆಯಲಿದೆ. ನೇಮಕಾತಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಸಹ ಆದ್ಯತೆ ದೊರೆಯಲಿದೆ ಎಂದು ತಿಳಿದುಬಂದಿದೆ. ಘಟಕದಲ್ಲಿ ಈಗಾಗಲೇ ಉತ್ಪಾದನಾ ಲೈನ್ ತಯಾರಾಗಿದೆ.

ಈಗಾಗಲೇ ಕಂಪನಿಯಲ್ಲಿ ಸುಮಾರು 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಮಹಿಳೆಯರೇ ಅಧಿಕವಾಗಿದ್ದಾರೆ. ಆದ್ದರಿಂದ ಮುಂದಿನ ನೇಮಕಾತಿಯಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ.
ಟಾಟಾ ಮತ್ತು ಆಪಲ್ ಸಂಸ್ಥೆ ಜಂಟಿಯಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದ್ದು, ದಿನಾಂಕವನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಸುಮಾರು 500 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣ ಮಾಡಲಾಗಿದೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಸೂರಿನಲ್ಲಿ ತಮಿಳುನಾಡು ಸರ್ಕಾರದಿಂದ ಭೂಮಿ ಪಡೆದು ಟಾಟಾ ಗ್ರೂಪ್ ಘಟಕ ನಿರ್ಮಾಣ ಮಾಡಿದೆ. ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರು ಸುಮಾರು 16 ಸಾವಿರ ರೂ. ವೇತನ ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ಈ ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರು ಆಹಾರ, ವಾಸ್ತವ್ಯವನ್ನು ಕ್ಯಾಂಪಸ್‌ನಲ್ಲಿಯೇ ಪಡೆಯಬಹುದಾಗಿದೆ. ನೇಮಕವಾದ ಮಹಿಳೆಯರಿಗೆ ಟಾಟಾ ಗ್ರೂಪ್ ತರಬೇತಿಯನ್ನು ನೀಡಲಿದೆ.
ವಿಸ್ಟ್ರಾನ್ ಜೊತೆ ಟಾಟಾ ಗ್ರೂಪ್ ಮಾತುಕತೆ ನಡೆಸುತ್ತಿದ್ದು, ಇನ್ನೂ ಹಲವಾರು ಬೇಡಿಕೆಗಳು ಕಂಪನಿಗೆ ಸಿಗುವ ನಿರೀಕ್ಷೆ ಇದೆ. ಚೀನಾ, ಅಮೆರಿಕ ನಡುವಿನ ಬಿಕ್ಕಟ್ಟಿನ ಕಾರಣ ಹಲವು ಕಂಪನಿಗಳು ಟಾಟಾ, ಆಪಲ್ ಕಡೆಗೆ ನೋಡುತ್ತಿದ್ದು, ಹೊಸ ಒಪ್ಪಂದಗಳು ಆಗುವ ಸಾಧ್ಯತೆ ಇದೆ.
ಆಪಲ್ ಚೀನಾದಲ್ಲಿರುವ ತನ್ನ ಘಟಕವನ್ನು ಮುಚ್ಚಿ ಭಾರತದಲ್ಲಿಯೇ ಘಟಕ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ದೊಡ್ಡ ಕಂಪನಿಗಳ ಘಟಕದ ಪರಿಣಾಮ ಸಾವಿರಾರು ಜನರಗೆ ಕೆಲಸ ಸಿಗಲಿದೆ.












Click it and Unblock the Notifications