ಇನ್ಮುಂದೆ ಇರಲ್ಲ ತಿರುಪತಿ ಲಡ್ಡುಗಳಲ್ಲಿ ನಂದಿನಿ ತುಪ್ಪದ ರುಚಿ!
ನಂದಿನಿ ತುಪ್ಪದ ರುಚಿಯನ್ನು ಇನ್ಮುಂದೆ ತಿರುಪತಿ ಲಡ್ಡುಗಳಲ್ಲಿ ಸವಿಯಲು ಸಾಧ್ಯವಿಲ್ಲ. ಯಾಕೆಂದರೆ ಬೆಲೆ ಏರಿಕೆಯಿಂದಾಗಿ ತಿರುಪತಿ ಲಡ್ಡುಗಳಲ್ಲಿ ನಂದಿನಿ ತುಪ್ಪದ ಬಳಕೆಯನ್ನು ಕೈಬಿಡಲಾಗಿದೆ. ತಿರುಪತಿ ಲಡ್ಡು ತಯಾರಿಸಲು ಬಳಸಲಾಗುತ್ತಿದ್ದ ತುಪ್ಪನ್ನು ಸದ್ಯ ಬದಲಾಯಿಸಲಾಗಿದೆ.
ಸುಮಾರು 50 ವರ್ಷಗಳ ನಂತರ ತಿರುಪತಿ ತಿರುಮಲ ಟ್ರಸ್ಟ್ (ಟಿಟಿಡಿ) ತನ್ನ ಪ್ರಸಿದ್ಧ ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತುಪ್ಪವನ್ನು ಖರೀದಿಸುತ್ತಿಲ್ಲ. ಕೆಎಂಎಫ್ ಹೇಳಿದ ಬೆಲೆಯನ್ನು ಟಿಟಿಡಿಗೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತುಪ್ಪವನ್ನು ಪಡೆಯಲು ಮತ್ತೊಂದು ಕಂಪನಿಯೊಂದಿಗೆ ಮುಂದಾಗಿದೆ ಟಿಟಿಡಿ.

ಕೆಎಂಎಫ್ ತುಪ್ಪದಿಂದ ಲಡ್ಡುಗಳು ರುಚಿಯಾಗಿವೆ ಎಂದು ಟಿಟಿಡಿ ಹಲವು ಬಾರಿ ಹೇಳಿದ್ದರೂ ಅದರೊಂದಿಗೆ ಇದ್ದ ಒಪ್ಪಂದ ಮುಕ್ತಾಯವಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಭಾನುವಾರ ಹೇಳಿದರು.
"ಆಗಸ್ಟ್ 1 ರಿಂದ ಹಾಲಿನ ಸಂಗ್ರಹಣೆ ಬೆಲೆ ಹೆಚ್ಚಾಗುವುದರಿಂದ ನಾವು ತುಪ್ಪಕ್ಕೆ ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದೇವೆ. ಆದರೆ ಟಿಟಿಡಿ ಇ-ಪ್ರೊಕ್ಯೂರ್‌ಮೆಂಟ್ ಸೈಟ್ ಮೂಲಕ ಕಡಿಮೆ ಬೆಲೆಯನ್ನು ನಮೂದಿಸಿದ ಕಂಪನಿಯಿಂದ ತುಪ್ಪ ಖರೀದಿ ಮಾಡಲು ಮುಂದಾಗಿದೆ. ಅದರ ಗುಣಮಟ್ಟದಿಂದಾಗಿ ಕೆಎಂಎಫ್ ತುಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ.

ಯಾವುದೇ ಕಂಪನಿಯು ಕಡಿಮೆ ಬೆಲೆಗೆ ಬಿಡ್ ಮಾಡಿದರೆ, ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ ಎಂದು ನನಗೆ ತಿಳಿದಿದೆ. ಆದಾಗ್ಯೂ, ಲಡ್ಡುಗಳನ್ನು ರುಚಿಯಾಗಿ ಮಾಡುವಲ್ಲಿ ನಂದಿನಿ ತುಪ್ಪವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸ್ಪಷ್ಟವಾಗಿದೆ" ಎಂದು ಭೀಮಾ ನಾಯಕ್ ಅವರು ಹೇಳಿದರು.
ಭಾರತದ ಶ್ರೀಮಂತ ದೇಗುಲಗಳಲ್ಲೊಂದಾದ ತಿರುಪತಿಯ ದರ್ಶನಕ್ಕೆ ದೇಶ-ವಿದೇಶದಿಂದ ಭಕ್ತರು ಬರ್ತಾರೆ. ತಿಮ್ಮಪ್ಪನ ಸನ್ನಿಧಿ ಎಷ್ಟು ವೈಶಿಷ್ಯ ಹೊಂದಿದ್ಯೋ ಅಷ್ಟೇ ಏಳುಕೊಂಡಲವಾಡನ ದರ್ಶನ ಪಡೆದ ಬಳಿಕ ಕೊಡೋ ಲಡ್ಡು ಕೂಡ ವಿಶ್ವದಾದ್ಯಂತ ಪ್ರಸಿದ್ಧ. ತಿರುಪತಿಯಲ್ಲಿ ಪೂಜೆ, ದರ್ಶನ ಪಡೆದ ಬಳಿಕ ಲಡ್ಡು ನೀಡಲಾಗುತ್ತೆ. ಪೂಜೆಯ ಬಳಿಕ ಭಕ್ತರು ಸರತಿ ಸಾಲಲ್ಲಿ ನಿಂತು ತಿರುಪತಿ ಲಡ್ಡು ಪಡೆಯುತ್ತಾರೆ.

ತಿಮ್ಮಪ್ಪನ ಸನ್ನಿಧಿಗೆ ತೆರಳಿದ ಬಳಿಕ ಲಡ್ಡು ಪಡೆದರೆ ಸಾರ್ಥಕ ಭಾವವೂ ಮೂಡುತ್ತೆ. ತಿಮ್ಮಪ್ಪನ ದರ್ಶನದ ಬಳಿಕ ಪ್ರಸಾದ ರೂಪದಲ್ಲಿ ನೀಡೋ ಲಡ್ಡುಗಳಿಗೆ ಭಕ್ತಗಣ ಕ್ಯೂ ನಿಂತಿರುತ್ತೆ. ಲಡ್ಡು ಪಡೆಯಲು 29 ಹೆಚ್ಚು ಕೌಂಟರ್ಗಳಿದ್ದು ಪ್ರತಿದಿನವೂ ಭಕ್ತರಿಂದ ತುಂಬಿತುಳುಕ್ತಾ ಇರುತ್ತೆ.
ತಿರುಪತಿಯಲ್ಲಿ ದಿನವೊಂದಕ್ಕೆ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಲಡ್ಡುಗಳು ತಯಾರಾಗಿ ವಿತರಿಸಲ್ಪಡುತ್ತದೆ. ದರ್ಶನಕ್ಕೆ ಬಂದ ಭಕ್ತರು ಕ್ಯೂ ನಿಂತು ಲಡ್ಡು ಕೊಂಡೊಯ್ಯುತ್ತಾರೆ. ಒಂದೂವರೆ ಲಕ್ಷ ಲಡ್ಡುಗಳಲ್ಲಿ ಸರಾಸರಿ ಓರ್ವ ಭಕ್ತನೇ ಸರಾಸರಿ 4 ಲಡ್ಡು ಕೊಂಡೊಯ್ಯುತ್ತಾನೆ ಎಂದು ಅಂದಾಜಿಸಲಾಗಿದೆ.












Click it and Unblock the Notifications