Tamil Nadu vs Karnataka: ಭಾಷೆ - ದ್ರಾವಿಡ ಅಸ್ಮಿತೆ: ತಮಿಳುನಾಡು - ಕರ್ನಾಟಕದ ರಾಜಕಾರಣಕ್ಕೂ ಇರುವ ವ್ಯತ್ಯಾಸ
Tamil Nadu vs Karnataka: ತಮಿಳುನಾಡಿನಲ್ಲಿ ದ್ರಾವಿಡ ಅಸ್ಮಿತೆ ಎನ್ನುವುದು ಶತಮಾನಗಳಿಂದಲೂ ಭದ್ರವಾಗಿ ನೆಲೆಯೂರಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಮಿತೆಯಂತೆಯೇ ತಮಿಳುನಾಡಿನಲ್ಲಿ ದ್ರಾವಿಡ ಹಾಗೂ ತಮಿಳು ಭಾಷಾ ಅಸ್ಮಿತೆಯು ತೀವ್ರವಾಗಿದೆ. ತಮಿಳು ಭಾಷೆಯ ವಿಷಯದಲ್ಲಿ ಹಾಗೂ ಹಿಂದಿ ಹೇರಿಕೆಯ ವಿರುದ್ಧವಾಗಿ ಧ್ವನಿ ಎತ್ತುವಲ್ಲಿ ತಮಿಳಿಗರು ಮುಂಚೂಣಿಯಲ್ಲಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಆ ರಾಜ್ಯದಲ್ಲಿನ ದ್ರಾವಿಡ ಅಸ್ಮಿತೆಯ ವಿಚಾರದಲ್ಲಿ ನಡೆದ ಚಳವಳಿಗಳು - ಅಭಿಯಾನಗಳು. ತಮಿಳುನಾಡಿನ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ದ್ರಾವಿಡ ಚಳವಳಿಯ ಪ್ರಭಾವ ತೀವ್ರವಾಗಿದೆ. 20ನೇ ಶತಮಾನದ ಪ್ರಾರಂಭದಲ್ಲಿ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರಿಂದ ಆರಂಭವಾದ ಈ ಚಳವಳಿ, ತಮಿಳು ಸಮಾಜದ ಮೇಲೆ ಇಂದಿಗೂ ಪ್ರಭಾವ ಬೀರುತ್ತಿದೆ. ತಮಿಳುನಾಡು ರಾಜಕೀಯಕ್ಕೂ ಕರ್ನಾಟಕದ ರಾಜಕಾರಣಕ್ಕೂ ಇರುವ ವ್ಯತ್ಯಾಸ ಈ ಲೇಖನದಲ್ಲಿದೆ.
ದೇಶದಲ್ಲಿ ರಾಜಕೀಯಕ್ಕೂ ತಮಿಳುನಾಡಿನ ರಾಜಕೀಯಕ್ಕೂ ಹಲವು ವ್ಯತ್ಯಾಸಗಳಿವೆ. ಅದರಲ್ಲೂ ಕರ್ನಾಟಕದ ರಾಜಕೀಯಕ್ಕೂ ತಮಿಳುನಾಡು ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭಾಷೆ - ಪ್ರಾದೇಶಿಕ ವಿಚಾರಗಳೇ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆ ಆಗುವುದು ಇದೆ. ತ್ರಿಭಾಷ ಸೂತ್ರದ ವಿಚಾರದ ನಂತರ ಸ್ವಾತಂತ್ಯವಾಗಿ ಕಾಂಗ್ರೆಸ್ ಪಕ್ಷಕ್ಕೂ ಇಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ಬಿಜೆಪಿಯಂತೂ ಒಮ್ಮೆಯೂ ಈ ತಮಿಳುನಾಡಿನಲ್ಲಿ ಅಧಿಕಾರಕ್ಕೇರಿಲ್ಲ. ಸತತವಾಗಿ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಅಧಿಕಾರಕ್ಕೆ ಬರುತ್ತಿವೆ. ಸಿ. ಎನ್. ಅಣ್ಣಾದೊರೈ ಹಾಗೂ ಕೆ. ಕಾಮರಾಜನ್ ಅವರಂತಹ ರಾಜಕಾರಣಿಗಳ ಪ್ರಭಾವವು ತಮಿಳುನಾಡಿನ ಮೇಲೆ ತೀವ್ರವಾಗಿ ಆಗಿದೆ.

ಮುಂದುವರಿದು ತಮಿಳುನಾಡಿನ ದಿವಂಗತ, ರಾಜಕೀಯ ಮತ್ಸದಿಗಳಾದ ಎಂ. ಕರುಣಾನಿಧಿ ಹಾಗೂ ಜೈ ಜಯಲಲಿತಾ ಅವರು ತಮಿಳುನಾಡು - ತಮಿಳು ಹಾಗೂ ಪ್ರಾದೇಶಿಕ ವಿಚಾರಗಳಲ್ಲಿ ರಾಜಿಯೇ ಆಗಲಿಲ್ಲ. ತಮಿಳುನಾಡಿನ ರಾಜಕೀಯದ ಮತ್ತೊಂದು ಅಚ್ಚರಿ ಎಂದರೆ ಆ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ರಾಜಕೀಯ ವಿಚಾರವಿರಲಿ. ಎಲ್ಲಾ ಪಕ್ಷದ ನಾಯಕರು ಒಂದಾಗಿ ನಿಲ್ಲುತ್ತಾರೆ. ಅದು ತಮಿಳುನಾಡಿನಲ್ಲಾದರೂ ಸರಿ - ಲೋಕಸಭೆಯಲ್ಲಾದರೂ ಸರಿ. ಈ ಮಾದರಿಯ ಒಗ್ಗಟ್ಟು ಕರ್ನಾಟಕದ ರಾಜಕಾರಣಿಗಳಲ್ಲಿ ವಿರಳಾತಿ ವಿರಳ ಎನ್ನುವಂತಾಗಿದೆ.
Tamil Nadu vs Karnataka: ಹಿಂದಿ ವಿರುದ್ಧ ಅಭಿಯಾನ
ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ದಶಕಗಳಿಂದಲೂ ಅಭಿಯಾನಗಳು ನಡೆಯುತ್ತಿವೆ. ದೇಶದಲ್ಲಿ ತ್ರಿಭಾಷಾ ಸೂತ್ರ (ತಮಿಳು - ಇಂಗ್ಲಿಷ್ ಹಾಗೂ ಹಿಂದಿ) ಅಳವಡಿಸಿಕೊಳ್ಳದ ಕೆಲವೇ ಕೆಲವು ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದಾಗಿದೆ. ತಮಿಳುನಾಡಿನಲ್ಲಿ ಇಂದಿಗೂ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿಲ್ಲ. ಅಲ್ಲದೆ ರಾಷ್ಟ್ರೀಯ ಭಾಷಾ ನೀತಿಗೂ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ, ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಅಭಿಯಾನ ನಡೆಯುತ್ತಿದ್ದರೂ. ರಾಜ್ಯ ಕಾಂಗ್ರೆಸ್ ಸರ್ಕಾರವು ದೃಢ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.
ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ರಾಷ್ಟ್ರೀಯ ಪಕ್ಷಗಳು
ತಮಿಳುನಾಡು ಹಾಗೂ ಕರ್ನಾಟಕದ ರಾಜಕೀಯದಲ್ಲಿ ಬಹುದೊಡ್ಡ ವ್ಯತ್ಯಾಸವೆಂದರೆ ಅದು ಪ್ರಾದೇಶಿಕ ಪಕ್ಷಗಳದ್ದು. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಬಲವಾಗಿವೆ. ಆದರೆ ಕರ್ನಾಟಕದ ರಾಜಕೀಯದಲ್ಲಿ ಇದು ತೀರ ಭಿನ್ನವಾಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿದ್ದರೂ ಸ್ವಾತಂತ್ರ್ಯವಾಗಿ ಅಧಿಕಾರಕ್ಕೇರುವುದಕ್ಕೆ ಸಾಧ್ಯವಾಗುತ್ತಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ - ಎಐಎಡಿಎಂಕೆ ಸೇರಿದಂತೆ 15ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ಇವೆ.
ಜನರು ಪ್ರಾದೇಶಿಕ ಪಕ್ಷವನ್ನು ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರವಲ್ಲ, ಲೋಕಸಭೆ ಚುನಾವಣೆಗಳಲ್ಲೂ ಬೆಂಬಲಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮಿಳುನಾಡಿನ ಅಸ್ಮಿತೆ ಉಳಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುತ್ತಿದೆ. ಇಲ್ಲಿ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ರಾಷ್ಟ್ರೀಯ ಪಕ್ಷಗಳು ಇರುವಂತೆ ಆಗಿದೆ. ಆದರೆ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳದ್ದೇ ಪ್ರಭಾವ ಹೆಚ್ಚಾಗಿದೆ.














Click it and Unblock the Notifications