ಭಾರೀ ಮಳೆಗೆ ನಲುಗಿದ ತಮಿಳುನಾಡು: ಮೂವರು ಸಾವು, ಮುಂದುವರಿದ ಭಾರೀ ಪ್ರವಾಹ
ಚೆನೈ, ಡಿಸೆಂಬರ್ 19: ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಡಿಸೆಂಬರ್ 18ರಂದು ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜ್ಯದ ದಕ್ಷಿಣದ ಜಿಲ್ಲೆಗಳಾದ ತೂತುಕುಡಿ, ತಿರುನಲ್ವೇಲಿ, ತೆಂಕಶಿ ಮತ್ತು ಕನ್ಯಾಕುಮಾರಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಿಚುವಾಂಗ್ ಚಂಡಮಾರುತದ ಅಪ್ಪಳಿಸಿ ಹೋದ ಬಳಿಕ ಕೆಲ ದಿನಗಳಿಂದ ತಮಿಳುನಾಡಿನಲ್ಲಿ ನಿರಂತರ ಮಳೆಯಾಗುತ್ತಿದೆ. ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಮನೆಗಳು, ರಸ್ತೆಗಳು ಹಾಗೂ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿದೆ. ಭಾರೀ ಮಳೆಯಿಂದ ಸಂಭವಿಸಿದ ಅವಘಡದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ತೂತುಕುಡಿ, ತಿರುನಲ್ವೇಲಿ, ತೆಂಕಶಿ ಮತ್ತು ಕನ್ಯಾಕುಮಾರಿ ಭಾಗದಲ್ಲಿ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರನ್ನು ಸ್ಥಳಾಂತರಿಸಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದ್ದಾರೆ. ಮಳೆಯಿಂದಾಗಿ ವಿದ್ಯುತ್ ಸಂಪರ್ಕ, ಮೊಬೈಲ್ ಫೋನ್ ಸಂಪರ್ಕ ಕಡಿತಗೊಂಡಿದೆ, ಅಲ್ಲದೇ ರಸ್ತೆಗಳು ಜಲಾವೃತಗೊಂಡ ಪರಿಣಾಮ ಸಾರ್ವಜನಿಕ ಸಾರಿಗೆ ಕೂಡ ಅಸ್ತವ್ಯಸ್ತಗೊಂಡಿದ್ದು, ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.
ವರುಣನ ಅಬ್ಬರಕ್ಕೆ ನಾಲ್ಕು ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಪ್ರದೇಶದ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಜೋರಾದ ಪ್ರವಾಹಕ್ಕೆ ನೂರಾರು ವಾಹನಗಳು ಕೊಚ್ಚಿ ಹೋಗಿವೆ. ಈಗಾಗಲೇ ಭಾರೀ ಮಳೆಗೆ ಮೂವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ತಮಿಳುನಾಡು ರಾಜ್ಯ ಸರ್ಕಾರವು ಈವರೆಗೆ ಅಧೀಕೃತವಾಗಿ ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ.
ಈಗಾಗಲೇ ಭಾರತೀಯ ಸೇನಾಪಡೆ ಮತ್ತು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಮಿಳುನಾಡು ಸರ್ಕಾರ ಹೆಚ್ಚುವರಿಯಾಗಿ ಸೇನೆ ಮತ್ತು ವಾಯುಪಡೆಯ ಸಹಾಯಕ್ಕೆ ಮನವಿ ಮಾಡಿದೆ. ಭಾರತೀಯ ಸೇನೆಯು ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದು, ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗುತ್ತಿದೆ.

ರಾಜ್ಯದಲ್ಲಿ ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಈಗಾಗಲೇ ದೆಹಲಿಗೆ ತೆರಳಿದ್ದು, ಇಂದು ರಾತ್ರಿ ಪ್ರಧಾನಿಗಳನ್ನು ಭೇಟಿಯಾಗಲಿದ್ದಾರೆ. ಇನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮಂಗಳವಾರ ರಾಜಭವನದಲ್ಲಿ ರಕ್ಷಣಾ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ತುರ್ತು ಸಭೆ ಕರೆದಿದ್ದು, ಜನರ ರಕ್ಷಣೆಯ ಕ್ರಮಗಳ ಬಗ್ಗೆ ಸೂಚನೆ ನೀಡಲಿದ್ದಾರೆ.
ಇನ್ನು ಸೋಮವಾರ ಸತತ ಕಾರ್ಯಾಚರಣೆ ನಡೆಸಿ 1,039 ಮಕ್ಕಳು ಸೇರಿದಂತೆ 7,434 ಜನರನ್ನು ಪ್ರವಾಹ ಪೀಡಿತ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಜೊತೆಗೆ ಪ್ರವಾಹ ಪೀಡಿತ ಸ್ಥಳಗಳಲ್ಲಿ ಆಹಾರ ಪೊಟ್ಟಣಗಳನ್ನು ನೀಡಲು ಸಹ ಸಿದ್ಧತೆ ನಡೆಸಲಾಗುತ್ತಿದೆ. ಇನ್ನು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮಳೆಯ ಮುಂದುವರಿಯಲಿದ್ದು, ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications