ದಲಿತರಿಗೆ ಪ್ರವೇಶ ನಿರಾಕರಿಸಿದ ದೇವಸ್ಥಾನಕ್ಕೆ ಬೀಗ ಜಡಿದ ಸರ್ಕಾರ- ಎಲ್ಲಿ ತಿಳಿಯಿರಿ
ಚೆನ್ನೈ, ಜೂನ್ 08: ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ದೇವಸ್ಥಾನಕ್ಕೆ ತಮಿಳುನಾಡು ಸರ್ಕಾರ ಬುಧವಾರ ಬೀಗ ಜಡಿದಿದೆ. ಈ ದೇವಾಲಯಕ್ಕೆ ದಲಿತರು ಪ್ರವೇಶಿಸಬಾರದು ಎಂದು ಪ್ರಬಲ ಜಾತಿಯವರು ಆಜ್ಞೆ ಮಾಡಿದ್ದರು. ಈ ಕುರಿತು ಶಾಂತಿ ಮಾತುಕತೆಗಳು ನಡೆದಿದ್ದವು. ಆದರೂ, ದಲಿತರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ತಮಿಳು ನಾಡು ಸರ್ಕಾರ ದೇವಸ್ಥಾನವನ್ನು ಸೀಲ್ ಮಾಡಿದೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಜಿಲ್ಲೆಯ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್ ದೇವಸ್ಥಾನದೊಳಗೆ ಗ್ರಾಮದಲ್ಲಿ ಬಹುಸಂಖ್ಯಾತರಾಗಿರುವ ವನ್ನಿಯಾರ್‌ಗಳು ತಮ್ಮನ್ನು ಪ್ರವೇಶಿಸಲು ಬಿಡುತ್ತಿಲ್ಲ ಎಂದು ಎಸ್‌ಸಿ ಸಮುದಾಯದ ಸದಸ್ಯರು ಆರೋಪಿಸಿದ ನಂತರ ವಿವಾದ ಭುಗಿಲೆದ್ದಿದೆ. ದಲಿತರು ದೇವಾಲಯಕ್ಕೆ ಪ್ರವೇಶಿಸುವುದನ್ನು ಖಾತ್ರಿಪಡಿಸುವ ಮೂಲಕ ಶಾಂತಿಯನ್ನು ತರಲು ಜಿಲ್ಲಾಡಳಿತ ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಇದೆಲ್ಲವೂ ವ್ಯರ್ಥವಾಗಿದೆ.

ದೇವಸ್ಥಾನವು ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಗ್ರಾಮದಲ್ಲಿರುವ ವನ್ನಿಯಾರ್‌ಗಳು ದೇವಸ್ಥಾನದ ದೈನಂದಿನ ವ್ಯವಹಾರಗಳನ್ನು ನಿಯಂತ್ರಿಸುತ್ತಾರೆ. ದಲಿತರು ಹೊರಗಿನಿಂದ ದೇವರನ್ನು ಪೂಜಿಸಬಹುದು. ಆದರೆ ದೇವಾಲಯಕ್ಕೆ ಪ್ರವೇಶಿಸಬಾರದು ಎಂಬ ತಮ್ಮ ನಿಲುವಿನಲ್ಲಿ ವನ್ನಿಯಾರ್‌ಗಳು ಅಚಲವಾಗಿದ್ದರಿಂದ ಶಾಂತಿ ಮಾತುಕತೆ ವಿಫಲವಾಯಿತು.
ಮೇ ತಿಂಗಳ ಕೊನೆಯ ಸುತ್ತಿನ ಮಾತುಕತೆಯ ಸಮಯದಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾದ ಕಾರಣ, ವಿಲ್ಲುಪುರಂ ಕಂದಾಯ ವಿಭಾಗೀಯ ಅಧಿಕಾರಿ ಎಸ್ ರವಿಚಂದ್ರನ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಬೆಳಿಗ್ಗೆ ಗ್ರಾಮಕ್ಕೆ ಬಂದು ದೇವಾಲಯವನ್ನು ಸೀಲ್ ಮಾಡಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದನ್ನು ತಡೆಯಲು ದೇವಾಲಯವನ್ನು ಮುಚ್ಚಲಾಗಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 145 (1) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
ಶಾಂತಿ ಭಂಗದಂತಹ ಚಟುವಟಿಕೆ ಕಂಡುಬಂದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ ಎಂದು ತಿಳಿದುಬಂದಿದೆ. ಎಪ್ರಿಲ್‌ನಲ್ಲಿ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ ದಲಿತರ ಮೇಲೆ ವನ್ನಿಯಾರ್‌ಗಳು ಹಲ್ಲೆ ನಡೆಸಿದಾಗ ಎರಡು ಸಮುದಾಯಗಳ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು.

ವಿಲ್ಲುಪುರಂ ಸಂಸದ ಡಿ.ರವಿಕುಮಾರ್ ಅವರು ಪ್ರತಿ ಸಮುದಾಯದವರ ಆರಾಧನೆಯ ಹಕ್ಕನ್ನು ಗೌರವಿಸಿ ಅನುಷ್ಠಾನಗೊಳಿಸುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದರು.
'ದೇವಸ್ಥಾನಕ್ಕೆ ಟ್ರಸ್ಟಿಗಳನ್ನು ನೇಮಿಸಲು ಮತ್ತು ಅದರ ದೈನಂದಿನ ವ್ಯವಹಾರಗಳನ್ನು ವಹಿಸಿಕೊಳ್ಳಲು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ದೇವಾಲಯದ ಒಳಗೆ ಹೋಗಲು ಮತ್ತು ಪೂಜೆ ಮಾಡಲು ಅನುಮತಿಸುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರ ಸಹಾಯವನ್ನು ದಲಿತರು ಕೋರಿದ್ದಾರೆ. ಅವರ ಬೇಡಿಕೆಗಳನ್ನು ಸರ್ಕಾರ ಜಾರಿಗೊಳಿಸಬೇಕು' ಎಂದು ಒತ್ತಾಯಿಸಿದ್ದಾರೆ.












Click it and Unblock the Notifications