ತಮಿಳುನಾಡು ಚುನಾವಣೆಗೆ ಕ್ಷಣಗಣನೆ: ನಾಳೆ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ, ಯುವ ಮತದಾರರ ಒಲವು ಯಾರತ್ತ?
ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ತಮಿಳುನಾಡು ವಿಧಾನಸಭೆಯ ಎಲ್ಲ 234 ಕ್ಷೇತ್ರಗಳಿಗೆ ನಾಳೆ (ಏಪ್ರಿಲ್ 23) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ದಶಕಗಳಿಂದ ಕಂಡುಬರುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ ಈ ಬಾರಿ ನಟ ವಿಜಯ್ ಅವರ ಪ್ರವೇಶ ಹೊಸ ಆಯಾಮ ನೀಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬೆನ್ನಲ್ಲೇ ಈಗ ಎಲ್ಲರ ಗಮನ ಮತಗಟ್ಟೆಗಳತ್ತ ನೆಟ್ಟಿದೆ. ಆಡಳಿತಾರೂಢ ಡಿಎಂಕೆ ತನ್ನ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದ್ದರೆ, ಎಐಎಡಿಎಂಕೆ ಮರಳಿ ಗದ್ದುಗೆ ಹಿಡಿಯಲು ಹವಣಿಸುತ್ತಿದೆ.
ವಿಜಯ್ ಕಡೆಗೆ ಯುವ ಮತದಾರರ ಒಲವು
ಈ ಚುನಾವಣೆಯು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ವಿರೋಧ ಪಕ್ಷವಾದ ಎಐಎಡಿಎಂಕೆ ನಡುವಿನ ನೇರ ಹಣಾಹಣಿಯಂತೆ ಮೇಲ್ನೋಟಕ್ಕೆ ಕಂಡರೂ, ನಟ ವಿಜಯ್ ಅವರ ರಾಜಕೀಯ ಪ್ರವೇಶವು ಹೊಸ ಸಂಚಲನ ಮೂಡಿಸಿದೆ. ಪ್ರಮುಖವಾಗಿ ನಗರ ಪ್ರದೇಶದ ಯುವ ಮತದಾರರು ಮತ್ತು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರ ಮೇಲೆ ವಿಜಯ್ ಅವರ ಪ್ರಭಾವ ಎಷ್ಟಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಡಿಎಂಕೆ ತನ್ನ ಸಮಾಜ ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ನ್ಯಾಯದ ಅಜೆಂಡಾವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದರೆ, ಎಐಎಡಿಎಂಕೆ ಆಡಳಿತ ವಿರೋಧಿ ಅಲೆ ಮತ್ತು ಕೇಂದ್ರದ ಮೈತ್ರಿ ಪಕ್ಷಗಳ ಬೆಂಬಲದ ಮೇಲೆ ವಿಶ್ವಾಸ ಇಟ್ಟಿದೆ.

ಆಕರ್ಷಕ ಚುನಾವಣಾ ಭರವಸೆಗಳು
ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳು ಮತದಾರರನ್ನು ಸೆಳೆಯಲು ಭರಪೂರ ಕೊಡುಗೆಗಳನ್ನು ಘೋಷಿಸಿವೆ. ಆಡಳಿತಾರೂಢ ಡಿಎಂಕೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಮುಂದುವರಿಕೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ಭರವಸೆ ನೀಡಿದೆ. ಮತ್ತೊಂದೆಡೆ ಎಐಎಡಿಎಂಕೆ ನೇರ ನಗದು ವರ್ಗಾವಣೆ, ಅಗತ್ಯ ವಸ್ತುಗಳ ಮೇಲಿನ ಸಬ್ಸಿಡಿ ಮತ್ತು ಕಾನೂನು ಸುವ್ಯವಸ್ಥೆಯ ಸುಧಾರಣೆಯ ವಾಗ್ದಾನ ಮಾಡಿದೆ. ಈ ನಡುವೆ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಯುವಜನತೆಗೆ ಉದ್ಯೋಗದ ಭರವಸೆಯೊಂದಿಗೆ ನಟ ವಿಜಯ್ ಕಣಕ್ಕಿಳಿದಿದ್ದು, ಅತಂತ್ರ ಅಥವಾ ಜಿದ್ದಾಜಿದ್ದಿನ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಇವರ ಮತ ಹಂಚಿಕೆ ನಿರ್ಣಾಯಕವಾಗುವ ಸಾಧ್ಯತೆಯಿದೆ.
ತಮಿಳುನಾಡಿನ ರಾಜಕಾರಣದಲ್ಲಿ ಯಾವಾಗಲೂ ಮಹಿಳೆಯರು ಮತ್ತು ಯುವ ಮತದಾರರು ಕಿಂಗ್ ಮೇಕರ್‌ಗಳಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯೂ ಮಹಿಳಾ ಮತದಾರರನ್ನು ಸೆಳೆಯಲು ಗ್ಯಾಸ್ ಸಿಲಿಂಡರ್ ಸಬ್ಸಿಡಿ ಮತ್ತು ಆರ್ಥಿಕ ನೆರವಿನಂತಹ ಯೋಜನೆಗಳನ್ನು ಪಕ್ಷಗಳು ಘೋಷಿಸಿವೆ. ಇನ್ನು ಹೊಸ ಮತದಾರರನ್ನು ಸೆಳೆಯಲು ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಪ್ರಚಾರವನ್ನು ಅತೀ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ನಾಳೆಯ ಮತದಾನದ ಪ್ರಮಾಣ ಹೆಚ್ಚಾದಷ್ಟು ಫಲಿತಾಂಶದಲ್ಲಿ ಅಚ್ಚರಿಗಳು ಕಾದಿರಬಹುದು ಎನ್ನಲಾಗುತ್ತಿದೆ. ಮಹಿಳೆಯರ ಬೆಂಬಲ ಯಾರಿಗೆ ಸಿಗಲಿದೆ? ನಟ ವಿಜಯ್ ಸಿನಿಮಾರಂಗದಂತೆ ರಾಜಕೀಯದಲ್ಲೂ ಮಿಂಚುತ್ತಾರಾ? ಎಂಬ ಪ್ರಶ್ನೆಗೆ ಮೇ ತಿಂಗಳಲ್ಲಿ ಉತ್ತರ ಸಿಗಲಿದೆ.
234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ನಡೆಯಲಿರುವ ಮಹಾ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಸಂಜೆ 6 ಗಂಟೆಗೆ ಅಧಿಕೃತವಾಗಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಚುನಾವಣಾ ಆಯೋಗವು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಚುನಾವಣಾ ನಿಯಮಗಳ ಪ್ರಕಾರ, ಮತದಾನದ 48 ಗಂಟೆಗಳ ಮೊದಲು ಮೌನ ಅವಧಿ ಆರಂಭವಾಗುತ್ತದೆ. ಈ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಬಹಿರಂಗ ಸಭೆ, ಮೆರವಣಿಗೆ ಅಥವಾ ಪ್ರಚಾರ ನಡೆಸುವಂತಿಲ್ಲ. ಅಲ್ಲದೆ, ಮಾಧ್ಯಮಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತುಗಳನ್ನು ನೀಡುವುದನ್ನೂ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವ ಅಭ್ಯರ್ಥಿಗಳಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಎಚ್ಚರಿಕೆಯನ್ನು ಚುನಾವಣಾ ಆಯೋಗ ನೀಡಿದೆ.
ಮತದಾನ ನಡೆಯುವ ಕ್ಷೇತ್ರಗಳಲ್ಲಿ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಮತ್ತು ನಾಯಕರು ತಕ್ಷಣವೇ ಆಯಾ ಕ್ಷೇತ್ರಗಳಿಂದ ನಿರ್ಗಮಿಸಬೇಕು ಎಂದು ಸೂಚಿಸಲಾಗಿದೆ. ಹೋಟೆಲ್‌ಗಳು, ಕಲ್ಯಾಣ ಮಂಟಪಗಳು ಮತ್ತು ಗೆಸ್ಟ್ ಹೌಸ್‌ಗಳಲ್ಲಿ ತಪಾಸಣೆ ನಡೆಸಿ, ಹೊರಗಿನವರು ಇದ್ದಲ್ಲಿ ಕ್ರಮ ಕೈಗೊಳ್ಳಲು ಪೋಲೀಸರಿಗೆ ಸೂಚನೆ ನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದ ನಡೆದ ಅಬ್ಬರದ ಪ್ರಚಾರಕ್ಕೆ ಈಗ ಮೌನ ಆವರಿಸಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮತ್ತು ನಟ ವಿಜಯ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ.












Click it and Unblock the Notifications