Kargil Vijay Diwas : ಕಾರ್ಗಿಲ್ ವಿಜಯೋತ್ಸವ: ಕುತಂತ್ರಿ ಪಾಕ್ ಸದೆ ಬಡಿದ ಈ ದಿನದ ವಿಶೇಷ ತಿಳಿಯಿರಿ
ದೇಶದಾದ್ಯಂತ ಕಾರ್ಗಿಲ್ ವಿಜಯೋತ್ಸವ ಆಚರಣೆಯಾಗುತ್ತಿದೆ. ಇದು ನಮ್ಮ ದೇಶಭಕ್ತಿಯನ್ನು ಪ್ರದರ್ಶಿಸುವ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಸ್ಮರಿಸುವ ದಿನವಾಗಿದೆ. ಭಾರತದೊಂದಿಗೆ ಹಸ್ತಲಾಘನ ಮಾಡುತ್ತಲೇ ಬೆನ್ನಿಗೆ ಚೂರಿ ಇರಿದ ಪಾಕಿಗಳತ್ತ ಎಚ್ಚರವಾಗಿರಿ ಎಂಬುದನ್ನು ಎಚ್ಚರಿಸುವ ಕ್ಷಣವಾಗಿದೆ. ಕಾರ್ಗಿಲ್ ದಿವಸವನ್ನು ನಾವು ವಿಜಯೋತ್ಸವವನ್ನಾಗಿ ಆಚರಿಸುವ ಜೊತೆಗೆ ಶತ್ರುರಾಷ್ಟ್ರ ಪಾಕಿಸ್ತಾನದ ಕಡೆಗೆ ಸದಾ ಎಚ್ಚರಿಕೆಯಿಂದ ಇರಬೇಕೆಂಬ ಜಾಗೃತ ಗಂಟೆಯೂ ಆಗಿದೆ.
ಇವತ್ತಿಗೂ ಪಾಕಿಸ್ತಾನ ನಂಬಿಕೆಗೆ ಅರ್ಹ ಅಲ್ಲ ಎಂಬುದನ್ನು ಹಲವು ಬಾರಿ ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲದೆ ಸಮಯ ಸಿಕ್ಕಾಗಲೆಲ್ಲ ಭಾರತದ ವಿರುದ್ಧ ಪಿತೂರಿ ಮಾಡುತ್ತಾ ಭಯೋತ್ಪಾದಕರನ್ನು ಬೆಳೆಸಿ ಅವರನ್ನು ಭಾರತದೊಳಗೆ ಬಿಟ್ಟು ಏಕತೆಗೆ, ಶಾಂತಿಗೆ ಭಂಗತರುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಹೀಗಿರುವಾಗ ಭಾರತದೊಂದಿಗೆ ಶಾಂತಿ ಮಾತುಕತೆ, ಸ್ನೇಹ ಸಂಬಂಧ ಎಲ್ಲವೂ ಮುಗಿದ ಅಧ್ಯಾಯದಂತೆಯೇ ಕಾಣಲಾರಂಭಿಸಿದೆ. ಇದೆಲ್ಲದರ ನಡುವೆ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ ಆಚರಿಸುವಾಗಲೆಲ್ಲ ಪ್ರತಿಯೊಬ್ಬ ದೇಶಭಕ್ತ ಭಾರತೀಯ ಪ್ರಜೆಯಲ್ಲಿಯೂ ಆಕ್ರೋಶ ಉಕ್ಕುವುದಂತು ನಿಜ.

ಹಾಗೆನೋಡಿದರೆ ನಮ್ಮ ದೇಶದೊಳಗೆ ಅತಿಕ್ರಮಣ ಮಾಡಿದ್ದ ಪಾಕಿಸ್ತಾನದ ಸೈನಿಕರ ಸದ್ದಡಗಿಸಿದ ಜುಲೈ 26ನ್ನು ನಾವೆಲ್ಲರೂ ಕಾರ್ಗಿಲ್ ವಿಜಯೋತ್ಸವವಾಗಿ ಆಚರಿಸುತ್ತಾ ಬಂದಿದ್ದೇವೆ. ಆ ಮೂಲಕ ನಮ್ಮ ದೇಶದ ರಕ್ಷಣೆಗಾಗಿ ಹುತಾತ್ಮರಾದ ಸುಮಾರು ಏಳುನೂರಕ್ಕೂ ಹೆಚ್ಚು ಯೋಧರನ್ನು ನೆನಪಿಸಿಕೊಳ್ಳುತ್ತಾ ಅವರ ತ್ಯಾಗ ಬಲಿದಾನಕ್ಕೊಂದು ನಮನ ಸಲ್ಲಿಸುತ್ತಾ ಬಂದಿದ್ದೇವೆ. ಇದು ನಮ್ಮ ಆದ್ಯ ಕರ್ತವ್ಯವೂ ಆಗಿದೆ. ಸ್ವಾತಂತ್ರ್ಯ ನಂತರ ಭಾರತದಿಂದ ಪ್ರತ್ಯೇಕಗೊಂಡ ಪಾಕಿಸ್ತಾನ ಶತ್ರುರಾಷ್ಟ್ರವಾಗಿಯೇ ಉಳಿದು ಹೋಗಿದೆ.
ದೇಶ ಮರೆಯದ ಕಾರ್ಗಿಲ್ ಯುದ್ಧ
ದೇಶದ ರಕ್ಷಣೆಗಾಗಿ ನಮ್ಮ ಲಕ್ಷಾಂತರ ಸೈನಿಕರು ಪ್ರಾಣಬಿಟ್ಟಿದ್ದಾರೆ. ಬಹುಶಃ ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ ಎಂದರೆ ಗಡಿಯಲ್ಲಿ ಹಗಲು ರಾತ್ರಿ ಎನ್ನದೆ ದೇಶವನ್ನು ಕಾಯುತ್ತಿರುವ ಸೈನಿಕರೇ ಕಾರಣವೆಂದರೆ ತಪ್ಪಾಗಲಾರದು. ಅಂತಹ ಸೈನಿಕರನ್ನು ನಾವೆಲ್ಲರೂ ಪ್ರತಿಕ್ಷಣವೂ ನೆನೆಯಬೇಕಾಗುತ್ತದೆ. ಅವರ ಪ್ರಾಣವನ್ನು ಒತ್ತೆಯಿಟ್ಟು ದೇಶವನ್ನು ರಕ್ಷಿಸುತ್ತಿದ್ದಾರೆ. ಪಾಕಿಸ್ತಾನದ ಜತೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯುದ್ಧ ಮಾಡುತ್ತಾ ಬಂದಿದ್ದೇವೆ. ಅದು ಅನಿವಾರ್ಯವೂ ಆಗಿದೆ. ಕುತಂತ್ರಿ ಪಾಕಿಸ್ತಾನವು ಭಾರತದ ವಿರುದ್ಧ ಮಾಡಿರುವ ಸಂಚು ಒಂದೆರಡಲ್ಲ. ಅದರಲ್ಲಿ ಕಾರ್ಗಿಲ್ ಯುದ್ಧವೂ ಒಂದಾಗಿದೆ.

ಕಾರ್ಗಿಲ್ ಕದನ 1999ರಲ್ಲಿ ನಡೆದಾಗ ಇಡೀ ದೇಶ ಒಟ್ಟಾಗಿ ನಿಂತಿತು. ಸಂಘ ಸಂಸ್ಥೆಗಳು, ಮಾಧ್ಯಮಗಳು, ಮಕ್ಕಳು, ಗೃಹಿಣಿಯರು, ಸಿಬ್ಬಂದಿ, ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹೀಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುವುದರ ಮೂಲಕ ಸೈನಿಕರ ನೆರವಿಗೆ ನಿಂತರು. ನಿಜ ಹೇಳಬೇಕೆಂದರೆ ಅವತ್ತಿನ ಪರಿಸ್ಥಿತಿಯಲ್ಲಿ ಭಾರತ ಮಾನಸಿಕವಾಗಿ ಯುದ್ಧಕ್ಕೆ ಖಂಡಿತ ತಯಾರಿರಲಿಲ್ಲ ಆದರೆ ಪಾಕಿಸ್ತಾನ ಸೇನೆ ಭಾರತದೊಳಗೆ ನುಗ್ಗಿಯಾಗಿತ್ತು. ಅವರು ಹಿಮಶಿಖರದ ತುತ್ತ ತುದಿಯಲ್ಲಿ ನಿಂತು ಭಾರತದ ಸೈನಿಕರ ಮೇಲೆ ದಾಳಿ ಮಾಡುವುದು ಸುಲಭವಾಗಿತ್ತು. ಆದರೆ ತಳಭಾಗದಿಂದ ಮೇಲಕ್ಕೇರಿ ಯುದ್ಧ ಮಾಡುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.
ಎಂದಿಗೂ ನಿಲ್ಲದ ಪಾಕಿಸ್ತಾನದ ಕುತಂತ್ರ
ಆದರೆ ತಮ್ಮ ಎಲ್ಲ ಯುದ್ಧ ಸಾಮಗ್ರಿಗಳ ನಡುವೆ ದೇಶದ ಪ್ರತಿಯೊಬ್ಬ ಯೋಧನಲ್ಲಿಯೂ ಇದ್ದ ಒಂದೇ ಒಂದು ಅಸ್ತ್ರ ಧೈರ್ಯ ಮತ್ತು ಮಾತೃಭೂಮಿಯ ರಕ್ಷಣೆ. ಅದಕ್ಕಾಗಿ ಹಿಮಚ್ಛಾದಿತ ಪ್ರದೇಶಗಳಲ್ಲಿ ಧೈರ್ಯ ಮತ್ತು ಎದೆಗುಂದದೆ, ಸಾವು ಮಗ್ಗಲಲ್ಲೇ ಇದ್ದರೂ ಅದಕ್ಕೆ ಹೆದರದೆ ಒಂದೇ ಮಾತರಂ ಮಂತ್ರ ಜಪಿಸುತ್ತಲೇ ಮುಂದೆ ನುಗ್ಗಿದರು. ಹೀಗೆ ನುಗ್ಗಿದ ಸಾಹಸಿಗಳ ಪೈಕಿ ಕೆಲವರು ಹುತಾತ್ಮರಾದರು.
ಇನ್ನು ಕೆಲವರು ಅಂಗವಿಕಲರಾದರು. ಹೀಗಿದ್ದರೂ ತನ್ನ ಪಕ್ಕದಲ್ಲಿಯೇ ಹೆಣವಾಗುತ್ತಿದ್ದ ಸಹ ಯೋಧರ ನಡುವೆ ಬಹಳಷ್ಟು ಸೈನಿಕರು ಮುನ್ನುಗ್ಗಿ ಶತ್ರುಗಳನ್ನು ಎದುರಿಸಿದರು. ಅದರ ಪರಿಣಾಮವೇ ಇವತ್ತು ನಾವೆಲ್ಲರೂ ಹೆಮ್ಮೆಯಿಂದ ಕಾರ್ಗಿಲ್ ದಿವಸವನ್ನು ಆಚರಿಸುವಂತಾಗಿದೆ.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಮ್ಮ ಯೋಧರು ಸಾಹಸಗಾಥೆಗಳು ಇವತ್ತಿಗೂ ನೆನಪಿಸಿಕೊಳ್ಳುವಂತದ್ದಾಗಿದೆ. ಆ ಸಂದರ್ಭದಲ್ಲಿ ನೂರಾರು ಯೋಧರನ್ನು ಕಳೆದುಕೊಂಡಿದ್ದೇವೆ. ಆದರೆ ಕಾರ್ಗಿಲ್ ಯುದ್ಧಕ್ಕೆ ಎಲ್ಲವೂ ಮುಗಿದೇ ಹೋಯಿತು ಎಂದು ಹೇಳಲು ಸಾಧ್ಯವಾಗಿಲ್ಲ. ಅದಾದ ನಂತರ 2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರನ್ನು ಕಳೆದುಕೊಳ್ಳುವಂತಾಯಿತು. ಇದಾದ ನಂತರವೂ ಉಗ್ರರ ಉಪಟಳ ಕಡಿಮೆಯಾಗಿಲ್ಲ. ಮೇಲಿಂದ ಮೇಲೆ ಕುತಂತ್ರ ನಡೆಸುತ್ತಲೇ ಬರುತ್ತಿರುವ ಪಾಕಿಸ್ತಾನದತ್ತ ಸದಾ ಎಚ್ಚರಿಕೆಯಿಂದಲೇ ಇರಬೇಕಾಗಿದೆ.












Click it and Unblock the Notifications