Manipur violence: ಮಣಿಪುರದ ವಲಸಿಗರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲೇಬೇಕು- ಬಿಜೆಪಿ ಮಿತ್ರಪಕ್ಷ 'ಎನ್‌ಪಿಪಿ' ನಾಯಕನ ಹೇಳಿಕೆ
ನವದೆಹಲಿ, ಆಗಸ್ಟ್ 12: ಮಣಿಪುರದಲ್ಲಿ ಅಕ್ರಮವಾಗಿ ಜನರು ನೆಲೆಸಿದ್ದಾರೆ. ಇಂತಹವರ ಮೇಲೆ ಸರ್ಜಿಕಲ್ ಸ್ಟ್ರೈಕ್‌ನಂತಹ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ನ್ಯಾಷನಲ್ ಪೀಪಲ್ಸ್ ಪಾರ್ಟಿ ನಾಯಕ ಎಂ. ರಾಮೇಶ್ವರ್ ಸಿಂಗ್ ಹೇಳಿದ್ದಾರೆ. ನ್ಯಾಷನಲ್ ಪೀಪಲ್ಸ್ ಪಾರ್ಟಿಯು ( ಎನ್‌ಪಿಪಿ ) ಮಣಿಪುರದಲ್ಲಿ ಬಿಜೆಪಿ ಮಿತ್ರಪಕ್ಷವಾಗಿದೆ.
'ಕುಕಿ ಉಗ್ರಗಾಮಿಗಳೆಲ್ಲ ಈಗ ಶಿಬಿರಗಳಲ್ಲಿದ್ದಾರೆ. ಎಲ್ಲಾ ಆಯುಧಗಳು ಅವರ ಬಳಿ ಇವೆ ಎಂದು ಕೆಲವು ಏಜೆನ್ಸಿಗಳು ಹೇಳುತ್ತಿವೆ' ಎಂದು ಅವರು ಆರೋಪಿಸಿದ್ದಾರೆ.

ಎಲ್ಲಿಂದ ಬೆಂಕಿ ಹೊತ್ತಿಕೊಂಡಿದೆ. ಅತ್ತ ಕಡೆಯಿಂದ ಗುಂಡು ಹಾರಿಸುತ್ತಿರುವವರು ಯಾರು? ಕೇಂದ್ರ ಗೃಹ ಸಚಿವರು ಈಗಾಗಲೇ ಅಕ್ರಮ ವಲಸಿಗರ ಕುರಿತು ಹೇಳಿಕೆ ನೀಡಿದ್ದಾರೆ. ಅಕ್ರಮ ಕುಕಿ ಉಗ್ರಗಾಮಿಗಳು ಗಡಿಯೊಳಗೆ ಬರುತ್ತಿರುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ' ಎಂದು ರಾಮೇಶ್ವರ್ ಸಿಂಗ್ ತಿಳಿಸಿದ್ದಾರೆ.
ಮಣಿಪುರ ಗಲಭೆಯಲ್ಲಿ ಹೊರಗಿನಿಂದ ಬಂದವರ ಕೈವಾಡವಿದೆ. ಈ ಕುರಿತು ನಾವು ಅರಿಯುವುದು ಮುಖ್ಯವಾಗಿದೆ. ಮಣಿಪುರದಲ್ಲಿ ಸರ್ಜಿಕಲ್ ಸ್ಟ್ರೈಕ್‌ನಂತಹ ಪರಿಣಾಮಕಾರಿ ಹಾಗೂ ಪ್ರಭಾವಶಾಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಿಂದ ಸಮಸ್ಯೆಯು ಆದಷ್ಟು ಬೇಗನೇ ಕೊನೆಗೊಳ್ಳಬಹುದು ಎಂದು ರಾಮೇಶ್ವರ್ ಸಿಂಗ್ ಹೇಳಿದ್ದಾರೆ.
ಮಣಿಪುರದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಭಾರತೀಯ ಸೇನೆಗೆ ಮೂರು ದಿನಗಳು ಸಾಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ರಾಮೇಶ್ವರ್ ಸಿಂಗ್ ಅವರು ವಿವಾದಿತ ಮಾತುಗಳನ್ನು ಆಡಿದ್ದಾರೆ.

ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, 'ಮಣಿಪುರದ ಸಮಸ್ಯೆಗಳಿಗೆ ಪರಿಹಾರವು ಹೃದಯದಿಂದ ಬರಬೇಕೇ, ಹೊರತು ಗುಂಡುಗಳಿಂದಲ್ಲ ಎಂದು ಹೇಳಿದ್ದಾರೆ.
'ಸೇನೆಯು ಮುಗ್ಧ ಜನರ ಮೇಲೆ ಗುಂಡು ಹಾರಿಸಬೇಕೆಂದು ರಾಹುಲ್ ಗಾಂಧಿಯವರು ಸೂಚಿಸುತ್ತಿದ್ದಾರೆಯೇ? ಭಾರತೀಯ ವಾಯುಪಡೆಯು 1966 ರಲ್ಲಿ ಅದೇ ಕೆಲಸವನ್ನು ಮಾಡಿತ್ತು' ಎಂದು ಹಿಮಂತ ಶರ್ಮಾ ತಿಳಿಸಿದ್ದಾರೆ.
ಸೇನೆಯ ನಿಯೋಜನೆಯು ಮಣಿಪುರದಲ್ಲಿನ ಕುಕಿ-ಮೈತೇಯಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವನ್ನು ತರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ಕುರಿತು ಮಾತನಾಡಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, 'ರಾಹುಲ್ ಗಾಂಧಿ ಅವರ ಚಿಂತನೆ ಪ್ರಜಾಸತ್ತಾತ್ಮಕವಾಗಿಲ್ಲ. ಭಾರತೀಯ ಸೇನೆಯು ಭಾರತೀಯರ ಮೇಲೆ ಗುಂಡು ಹಾರಿಸಬೇಕೆಂದು ಅವರು ಬಯಸುತ್ತಾರೆ' ಎಂದು ತಿಳಿಸಿದ್ದಾರೆ.
ಮಣಿಪುರದಲ್ಲಿ ಮೇ ತಿಂಗಳಿನಿಂದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಹಿಂಸಾಚಾರದಲ್ಲಿ ಈಗಾಗಲೇ 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಾಗಿವೆ. ಇಬ್ಬರು ಕುಕಿ ಮಹಿಳೆಯರು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೊವೊಂದು ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿದೆ. ಮಣಿಪುರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಭಾರತವು ಮಣಿಪುರದ ಜೊತೆಗೆ ಇರಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.












Click it and Unblock the Notifications