80 ವರ್ಷಗಳ ಪೆಂಟಗನ್ ದಾಖಲೆ ಉಡೀಸ್ : ವಿಶ್ವದ ಅತಿದೊಡ್ಡ ಕಚೇರಿ ಈಗ ಭಾರತದಲ್ಲಿ: ಎಲ್ಲಿದೆ, ವೆಚ್ಚ ಎಷ್ಟು ಗೊತ್ತಾ?
ಕಳೆದ 80 ವರ್ಷಗಳಿಂದ ವಿಶ್ವದ ಅತಿ ದೊಡ್ಡ ಕಚೇರಿ ಕಟ್ಟಡ ಎನಿಸಿಕೊಂಡಿದ್ದ ಪೆಂಟಗಾನ್ ಇನ್ನು ಮುಂದೆ ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಹೌದು, ವಿಶ್ವದ ಅತಿ ದೊಡ್ಡ ಕಚೇರಿ ಕಟ್ಟಡ ಈಗ ಭಾರತದಲ್ಲಿ ನಿರ್ಮಾಣವಾಗಿದೆ.
ಗುಜರಾತ್‌ನ ಸೂರತ್‌ನಲ್ಲಿ ವಜ್ರದ ವ್ಯಾಪಾರ ಕೇಂದ್ರವನ್ನು ಹೊಂದಿರುವ ಕಟ್ಟಡ ಈಗ ವಿಶ್ವದ ಅತಿ ದೊಡ್ಡ ಕಚೇರಿ ಕಟ್ಟಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರೆಗೂ ಪೆಂಟಗನ್ ವಿಶ್ವದ ಅತಿ ದೊಡ್ಡ ಕಚೇರಿ ಕಟ್ಟಡ ಎನ್ನುವ ದಾಖಲೆ ಹೊಂದಿತ್ತು.

ಸಿಎನ್‌ಎನ್ ವರದಿ ಮಾಡಿರುವ ಪ್ರಕಾರ, ಸೂರತ್‌ನಲ್ಲಿ ನಿರ್ಮಾಣವಾಗಿರು ವಜ್ರ ವ್ಯಾಪಾರ ಕೇಂದ್ರ 15 ಅಂತಸ್ತಿನ ಕಟ್ಟಡವಾಗಿದ್ದು, 35 ಎಕರೆ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ. ಒಂಬತ್ತು ಆಯತಾಕಾರದ ರಚನೆಗಳನ್ನು ಹೊಂದಿದೆ. ಅವೆಲ್ಲವೂ ಬೆನ್ನು ಕೇಂದ್ರ ಕಟ್ಟಡದ ರಚನೆಗೆ ಸಂಪರ್ಕ ಹೊಂದಿವೆ ಎಂದು ಹೇಳಿದೆ. 3200 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.
ಎಸ್‌ಡಿಬಿ ವೆಬ್‌ಸೈಟ್ ಪ್ರಕಾರ, ಕಟ್ಟಡದಲ್ಲಿ ಮನರಂಜನಾ ವಲಯ ಮತ್ತು ಪಾರ್ಕಿಂಗ್ ಪ್ರದೇಶ 20 ಲಕ್ಷ ಚದರ ಅಡಿಗಳಷ್ಟು ವ್ಯಾಪಿಸಿದೆ. ಇದು ವಿಶ್ವದ ವಜ್ರ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಹೇಳಲಾಗಿದೆ.
ನವೆಂಬರ್‌ನಲ್ಲಿ ಪ್ರಧಾನಿ ಮೋದಿಯಿಂದ ಉದ್ಘಾಟನೆ
ಈ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಿರುವ ಕಂಪನಿಯ ಪ್ರಕಾರ, ಈ ಕಟ್ಟಡ 7.1 ಮಿಲಿಯನ್ ಚದರ ಅಡಿಗಳಷ್ಟು ನೆಲದ ಜಾಗವನ್ನು ಒಳಗೊಂಡಿದೆ. 2023ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಈ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲು ನಾಲ್ಕು ವರ್ಷ ಬೇಕಾಯಿತು ಎಂದು ಕಂಪನಿ ಹೇಳಿದೆ.
ಸೂರತ್ ಅನ್ನು ವಿಶ್ವದ ರತ್ನಗಳ ರಾಜಧಾನಿ ಎಂದು ಕರೆಯಲಾಗುತ್ತದೆ, ಅಲ್ಲಿ ವಿಶ್ವದ 90 ಪ್ರತಿಶತದಷ್ಟು ವಜ್ರಗಳನ್ನು ಕತ್ತರಿಸಲಾಗುತ್ತದೆ. ಹೊಸದಾಗಿ ನಿರ್ಮಿಸಲಾದ ಸೂರತ್ ಡೈಮಂಡ್ ಬೋರ್ಸ್ 65,000 ಕ್ಕೂ ಹೆಚ್ಚು ವಜ್ರ ವೃತ್ತಿಪರರಿಗೆ ಒಂದು ತಾಣವಾಗಿದೆ. ಇದರಲ್ಲಿ ಕಟ್ಟರ್, ಪಾಲಿಷರ್ ಮತ್ತು ವ್ಯಾಪಾರಿಗಳು ಸೇರಿದ್ದಾರೆ ಎಂದು ಔಟ್ಲೆಟ್ ತಿಳಿಸಿದೆ.
ವ್ಯಾಪಾರಿಗಳಿಗೆ ಅನುಕೂಲ
2013 ರ ಕಂಪನಿಗಳ ಕಾಯಿದೆ ಸೆಕ್ಷನ್ 8 ರ ಅಡಿಯಲ್ಲಿ ಡೈಮಂಡ್ ಬೋರ್ಸ್ ಕಂಪನಿಯನ್ನು ನೋಂದಣಿ ಮಾಡಲಾಗಿದೆ. ಇದು ಲಾಭಕ್ಕಾಗಿ ಅಲ್ಲದ, ವಜ್ರದ ವ್ಯಾಪಾರವನ್ನು ಉತ್ತೇಜಿಸಲು ಗುಜರಾತ್‌ನ ಸೂರತ್‌ನಲ್ಲಿ ಸ್ಥಾಪನೆ ಸ್ಥಾಪಿಸಿದ ಸಂಸ್ಥೆಯಾಗಿದೆ.
ಹೊಸ ಕಟ್ಟಡ ನಿರ್ಮಾಣದಿಂದ ವಜ್ರದ ವ್ಯಾಪಾರಕ್ಕಾಗಿ ಪ್ರತಿ ದಿನ ಸಾವಿರಾರು ಜನ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುವುದನ್ನು ತಪ್ಪಿಸುತ್ತದೆ, ಎಂದು ಯೋಜನೆಯ ಸಿಇಒ ಮಹೇಶ್ ಗಾಧವಿ ಹೇಳಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.
ಅಂತರರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯ ನಂತರ ಭಾರತೀಯ ವಾಸ್ತುಶಿಲ್ಪ ಸಂಸ್ಥೆ ಮಾರ್ಫೋಜೆನೆಸಿಸ್ ಈ ಕಟ್ಟಡವನ್ನು ವಿನ್ಯಾಸಗೊಳಿಸಿದೆ. "ಪೆಂಟಗನ್ ಅನ್ನು ಮೀರಿಸುವುದು ಈ ಯೋಜನೆಯ ಉದ್ದೇಶವಲ್ಲ. ಬದಲಿಗೆ, ಬೇಡಿಕೆಗೆ ಅನುಗುಣವಾಗಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ" ಎಂದು ಗಾಧವಿ ಹೇಳಿದ್ದಾರೆ.
ಕಟ್ಟಡ ನಿರ್ಮಾಣಕ್ಕೂ ಮುನ್ನವೇ ಕಟ್ಟಡದಲ್ಲಿ ಇರುವ ಎಲ್ಲಾ ಕಚೇರಿಗಳು ಬುಕ್ ಆಗಿವೆ, ಪ್ರಮುಖ ವಜ್ರದ ಕಂಪನಿಗಳು ಇಲ್ಲಿ ತಮ್ಮ ಕಚೇರಿಗಳನ್ನು ಖರೀದಿ ಮಾಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications