Same Sex Marriage: ಬಾಳ ಸಂಗಾತಿಯ ಆಯ್ಕೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ: ಸುಪ್ರೀಂ ಕೋರ್ಟ್
ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸಲಿಂಗ ವಿವಾಹಗಳನ್ನು ವಿಶೇಷ ವಿವಾಹ ಕಾಯ್ದೆಯಡಿ ತಂದು ನೋಂದಣಿ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಆಗ್ರಹ ಕೇಳಿಬಂದಿದೆ. 2018 ರಲ್ಲಿ, ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸಲಿಂಗಪ್ರೇಮವನ್ನು ಅಪರಾಧವೆಂದು ಪರಿಗಣಿಸುವ ಐಪಿಸಿಯ ಸೆಕ್ಷನ್ 377 ರ ಭಾಗವನ್ನು ರದ್ದುಗೊಳಿಸಿದೆ.
ಇಂದು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ವಿಚಾರವಾಗಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಪ್ರತಿಯೊಬ್ಬರಿಗೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ, ಸರ್ಕಾರವು ಸಲಿಂಗ ಸಂಬಂಧಗಳಿಗೆ ಕಾನೂನು ಸ್ಥಾನಮಾನ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಲಿಂಗ ದಂಪತಿಗೆ ತಾರತಮ್ಯ ಮಾಡದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಕೋರ್ಟ್ ಹೇಳಿದೆ.

ಮೇ 11 ರಂದು, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರು 10 ದಿನಗಳ ಮ್ಯಾರಥಾನ್ ವಿಚಾರಣೆಯ ನಂತರ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿದ್ದರು.
ಎಲ್ ಜಿಬಿಟಿ ಸಮುದಾಯದ ವ್ಯಕ್ತಿಗಳು(ಸಲಿಂಗಕಾಮಿಗಳು, ದ್ವಿಲಿಂಗಿ, ತೃತೀಯಲಿಂಗಿಗಳು) ಸೇರಿದಂತೆ ಎಲ್ಲಾ ವ್ಯಕ್ತಿಗಳು ತಮ್ಮ ಜೀವನದ ನೈತಿಕ ಗುಣಮಟ್ಟವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿದ್ದಾರೆ. ವ್ಯಕ್ತಿ ತಾನು ಬಯಸಿದ ಬದುಕನ್ನು ಬದುಕುವ ಸಾಮರ್ಥ್ಯವಾಗಿದೆ.
ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನದ ಹಾದಿಯನ್ನು ಆಯ್ಕೆ ಮಾಡುವ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು.
ಈ ಹಕ್ಕು ಸಂವಿಧಾನ ವಿಧಿ 21 ರ ಅಡಿಯಲ್ಲಿ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಮೂಲಕ್ಕೆ ಹೋಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ಸಲಿಂಗ ವಿವಾಹ ಮಾನ್ಯತೆಯ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು, ಅಲ್ಲದೇ ಕ್ವಿಯರ್ ಜೋಡಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನಿರ್ಬಂಧಿಸುವಂತಿಲ್ಲ ಎಂದೂ ನ್ಯಾಯಪೀಠ ಹೇಳಿದೆ.
ಇನ್ನೂ ಪೀಠದ ಐವರು ನ್ಯಾಯಾಧೀಶರು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಮಂಡಿಸಿದ ಪರಿಣಾಮ, ತೀರ್ಪಿನಲ್ಲಿ ನಾಲ್ಕು ಪ್ರತ್ಯೇಕ ಮಂಡನೆಗಳನ್ನು ಮಾಡಲಾಗಿದೆ. ಸಿಜೆಐ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ತಮ್ಮ ಅನಿಸಿಕೆಗಳನ್ನು ಮಂಡಿಸಿದರು.
ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯಿದೆಯ ಸೆಕ್ಷನ್ 4 ಸಲಿಂಗ ದಂಪತಿಗಳನ್ನು ಒಳಗೊಂಡಿಲ್ಲ ಎಂಬ ಕಾರಣಕ್ಕೆ ಅಸಾಂವಿಧಾನಿಕ ಎಂದು ಪರಿಗಣಿಸಲಾಗುವುದಿಲ್ಲ. ವಿಶೇಷ ವಿವಾಹ ಕಾಯಿದೆಯಲ್ಲಿ ಬದಲಾವಣೆಯನ್ನು ಸಂಸತ್ತು ನಿರ್ಧರಿಸಬೇಕು. ಈ ನ್ಯಾಯಾಲಯವು ಶಾಸಕಾಂಗದ ವ್ಯಾಪ್ತಿಯಲ್ಲಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದೇವೆ.
ವಿವಾಹ ವ್ಯವಸ್ಥೆಯೊಳಗೆ ಪ್ರವೇಶಿಸುವ ಹಕ್ಕಿನಲ್ಲಿ, ವ್ಯಕ್ತಿಯು ಇನ್ನೊಬ್ಬ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಮತ್ತು ಆ ವಿವಾಹವನ್ನು ಶಾಸನವು ಗುರುತಿಸುವ ಹಕ್ಕು ಎರಡನ್ನೂ ಒಳಗೊಂಡಿದೆ ಎಂದು ಸಿಜೆಐ ಡಿವೈ ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಕ್ವಿಯರ್‌ಗಳ ಕುರಿತು ತಾರತಮ್ಯ ಮಾಡಲು ಸಾಧ್ಯವಿಲ್ಲ. ಎಲ್ಲ ಬಗೆಯ ವಸ್ತುಗಳು, ಪ್ರಯೋಜನಗಳು ಮತ್ತು ಸೇವೆಗಳು ಭಿನ್ನಲಿಂಗೀಯ ದಂಪತಿಗಳತ್ತ ನಿರ್ದೇಶಿತವಾಗಿವೆ. ಆದರೆ ವಿಭಿನ್ನ ದಂಪತಿಗಳಿಗೆ ಇವುಗಳನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಟ್ರಾನ್ಸ್‌ಜೆಂಡರ್ ಪುರುಷನು ಮಹಿಳೆಯನ್ನು ಮತ್ತು ಟ್ರಾನ್ಸ್‌ಜೆಂಡರ್ ಮಹಿಳೆಯು ಪುರುಷನನ್ನು ಮದುವೆಯಾಗಬಹುದು ಎಂದು ಸಿಜೆಐ ಹೇಳಿದ್ದಾರೆ.












Click it and Unblock the Notifications