ರಾಜ್ಯದಲ್ಲಿ 4% ಮುಸ್ಲಿಂ ಮೀಸಲಾತಿ ರದ್ದು: ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್
ನವದೆಹಲಿ, ಏಪ್ರಿಲ್. 13: ರಾಜ್ಯದಲ್ಲಿ ಇತ್ತೀಚೆಗೆ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಸಮ್ಮತಿಸಿದೆ. ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮೊದಲೆ ಬಿಜೆಪಿ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಮನವಿಯನ್ನು ಗಮನಿಸಿದೆ. ಅರ್ಜಿಯ ಎಲ್ಲಾ ನ್ಯೂನತೆಗಳನ್ನು ತೆಗೆದುಹಾಕಲಾಗಿದ್ದು, ಅರ್ಜಿ ವಿಚಾರಣೆಗೆ ಅನುಮತಿ ನೀಡಿದೆ.

"ನಾನು ಬುಧವರಾ ನ್ಯಾಯಾಲಯದ ಮೂರರಲ್ಲಿ ಅರ್ಜಿ ಪ್ರಸ್ತಾಪಿಸಿದೆ. ಅರ್ಜಿಯು ಕರ್ನಾಟಕದಲ್ಲಿ ಮುಸ್ಲೀಮರ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನು ರದ್ದುಗೊಳಿಸುವುದನ್ನು ಪ್ರಶ್ನಿಸಿದೆ" ಎಂದು ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ. ಈ ವೇಳೆ 'ಅರ್ಜಿಯಲ್ಲಿ ದೋಷಗಳನ್ನು ಸರಿಪಡಿಸಲಾಗಿಲ್ಲ' ಎಂದು ನ್ಯಾಯಮೂರ್ತಿಗಳು ಹೇಳಿದ್ದು, ಎಲ್ಲಾ ನ್ಯೂನತೆಗಳನ್ನು ಗುಣಪಡಿಸಲಾಗಿದೆ ಎಂದು ಹಿರಿಯ ವಕೀಲರು ಮಾಹಿತಿ ನೀಡಿದ್ದಾರೆ. ಬಳಿಕ ಅರ್ಜಿ ವಿಚಾರಣೆಗೆ ಒಪ್ಪಿಗೆ ಸಿಕ್ಕಿದೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಲು ನಿರ್ಧರಿಸಿತ್ತು. ಸರ್ಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ ಎರಡು ಹೊಸ ವರ್ಗಗಳನ್ನು ಘೋಷಿಸಿದೆ. ನಂತರ ಇತರ ಹಿಂದುಳಿದ ವರ್ಗಗಳ (OBC) ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇಕಡಾ ನಾಲ್ಕು ಕೋಟಾವನ್ನು ರದ್ದುಗೊಳಿಸಿತು.
ನಾಲ್ಕು ಪ್ರತಿಶತ ಒಬಿಸಿ ಮುಸ್ಲಿಂ ಕೋಟಾವನ್ನು ರಾಜ್ಯದ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರ ನಡುವೆ ಸಮಾನವಾಗಿ ಹಂಚಲಾಗಿದೆ. ಕೋಟಾಕ್ಕೆ ಅರ್ಹರಾಗಿರುವ ಮುಸ್ಲಿಮರನ್ನು ಈಗ ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ಅಡಿಯಲ್ಲಿ ವರ್ಗೀಕರಿಸಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದ ಮೀಸಲಾತಿ ಮಿತಿ ಈಗ ಸುಮಾರು ಶೇ.57ಕ್ಕೆ ಬಂದಿದೆ.

ಪ್ರಸ್ತುತ, ಒಕ್ಕಲಿಗರು 4 ಪ್ರತಿಶತ ಮತ್ತು ಲಿಂಗಾಯತರು 5 ಪ್ರತಿಶತ ಮೀಸಲಾತಿ ಹೊಂದಿದ್ದಾರೆ. ರಾಜ್ಯ ಕ್ಯಾಬಿನೆಟ್ ನಿರ್ಧಾರದ ನಂತರ, ಒಕ್ಕಲಿಗರು ಕ್ರಮವಾಗಿ 2 (ಸಿ) ಮತ್ತು 2 (ಡಿ) ಅಡಿಯಲ್ಲಿ ಕ್ರಮವಾಗಿ ಶೇಕಡಾ 6 ರಷ್ಟು ಮೀಸಲಾತಿ ಮತ್ತು ಲಿಂಗಾಯತರು ಶೇಕಡಾ 7 ರಷ್ಟು ಮೀಸಲಾತಿಯನ್ನು ಪಡೆಯುತ್ತಾರೆ. ಈ ಸಮುದಾಯಗಳು ಈ ಹಿಂದೆ 3A ಮತ್ತು 3B ವರ್ಗಗಳ ಅಡಿಯಲ್ಲಿದ್ದರು, ಅದನ್ನು ರದ್ದುಗೊಳಿಸಲಾಗಿದೆ.
ಒಬಿಸಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿ ಶೇಕಡಾ 10 ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಅಡಿಯಲ್ಲಿ ಅವರಿಗೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. "ಕ್ಯಾಬಿನೆಟ್ ಉಪಸಮಿತಿ ಕೋಟಾ ವಿಭಾಗಗಳಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಈ ಕಾರಣದಿಂದ ನಾವು ಮೀಸಲಾತಿ ಬದಲಾವಣೆ ಮಾಡಿದ್ದೇವೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರ ಘೋಷಣೆ ವೇಳೆ ತಿಳಿಸಿದ್ದರು.
ಇದು ರಾಜ್ಯದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಮಂಡ್ಯದಲ್ಲಿ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ವಿರೋಧ ಪಕ್ಷಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಆಡಳಿತಾರೂಢ ಬಿಜೆಪಿ ಸರ್ಕಾರವು ರದ್ದುಪಡಿಸಿರುವ ಶೇಕಡಾ 4ರಷ್ಟು ಮುಸ್ಲಿಂ ಮೀಸಲಾತಿಯನ್ನು ಪುನಃಸ್ಥಾಪಿಸುವುದಾಗಿ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications