ಬಳ್ಳಾರಿಗೆ ಪ್ರವೇಶ: ರೆಡ್ಡಿಗೆ ಅನುಮತಿ ನೀಡಲು ಸುಪ್ರೀಂ ನಕಾರ
ನವದೆಹಲಿ, ಮೇ 4: ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತೆ ರಾಜಕೀಯ ವಲಯದಲ್ಲಿ ತಮ್ಮ ಅಸ್ತಿತ್ವ ಪ್ರದರ್ಶಿಸಲು ಪ್ರಯತ್ನಿಸುತ್ತಿರುವ ಜನಾರ್ದನ ರೆಡ್ಡಿ ಅವರಿಗೆ ಮತ್ತೊಂದು ನಿರಾಸೆ ಎದುರಾಗಿದೆ.
ಕರ್ನಾಟಕ ಚುನಾವಣೆಯಲ್ಲಿ ತಮ್ಮ ಸಹೋದರ ಜಿ. ಸೋಮಶೇಖರ ರೆಡ್ಡಿ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಬಳ್ಳಾರಿ ಪ್ರವೇಶಿಸಲು ಅನುಮತಿ ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಬಳ್ಳಾರಿಗೆ ತೆರಳಲು ಅನುಮತಿ ನೀಡಲು ಪೂರಕವಾದ ಯಾವುದೇ ಗಟ್ಟಿ ಅಂಶ ಅರ್ಜಿಯಲ್ಲಿ ಇಲ್ಲ ಎಂದು ಕೋರ್ಟ್ ಹೇಳಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
ಜರ್ನಾದನ ರೆಡ್ಡಿ ಅವರ ಜಿ. ಸೋಮಶೇಖರ ರೆಡ್ಡಿ ಬಳ್ಳಾರಿಯಿಂದ ಸ್ಪರ್ಧಿಸುತ್ತಿದ್ದರೆ, ಹಿರಿಯ ಸಹೋದರ ಜಿ. ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಂಸದ ಬಿ. ಶ್ರೀರಾಮಲು ಪರವಾಗಿ ಚುನಾವಣಾ ಪ್ರಚಾರದಲ್ಲಿ ಜನಾರ್ದನ ರೆಡ್ಡಿ ಭಾಗವಹಿಸಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.












Click it and Unblock the Notifications