ಇಡಿ ನಿರ್ದೇಶಕ ಸಂಜಯ್ ಮಿಶ್ರಾ ಅಧಿಕಾರ ಅವಧಿ ವಿಸ್ತರಣೆ ಕಾನೂನುಬಾಹಿರ: ಮೊದಲ ಬಾರಿಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪೆಟ್ಟು
ನವದೆಹಲಿ, ಜುಲೈ 11: ಇಡಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರ ಅವಧಿಯನ್ನು ಮೂರನೇ ಬಾರಿ ವಿಸ್ತರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಈ ಅಧಿಕಾರ ವಿಸ್ತರಣೆಯು ಕಾನೂನುಬಾಹಿರವೆಂದು ನೇರವಾಗಿ ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಮೊದಲ ಬಾರಿ ಸುಪ್ರೀಂ ಕೋರ್ಟ್ ಪೆಟ್ಟು ನೀಡಿದೆ.
ಜುಲೈ 31 ರ ಒಳಗೆ ಇಡಿ ಕಚೇರಿಯನ್ನು ಬಿಟ್ಟುಕೊಡುವಂತೆ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇಡಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯು ಜುಲೈ 31, 2023 ರವರೆಗೆ ಇರಲಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಸಿಬಿಐ ಅಥವಾ ಇಡಿ ಮುಖ್ಯಸ್ಥರ ಅಧಿಕಾರ ಅವಧಿಯು ಕಡ್ಡಾಯವಾಗಿ ಎರಡು ವರ್ಷಗಳಾಗಿರುತ್ತವೆ. ಕೇಂದ್ರ ಸರ್ಕಾರವು ಅವರನ್ನು ಮೂರನೇ ವರ್ಷದವರೆಗೆ ಮುಂದುವರಿಸಬಹುದು. ಆದರೆ, ಕೇಂದ್ರ ಸರ್ಕಾರ ಅವರು ಮಿಶ್ರಾ ಅವರನ್ನು ಮೂರನೇ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ತ್ರಿಸದಸ್ಯ ಪೀಠವು ಈ ತೀರ್ಪು ನೀಡಿತು. ಮಿಶ್ರಾ ನೇಮಕಾತಿ ಮತ್ತು ಕೇಂದ್ರ ಜಾಗೃತ ಆಯೋಗದ ಕಾಯಿದೆಗೆ ಇತ್ತೀಚಿನ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಪೀಠವು ಆಲಿಸಿತು.

ಅರ್ಜಿದಾರರಲ್ಲಿ ಕಾಂಗ್ರೆಸ್ ಮುಖಂಡರಾದ ಜಯಾ ಠಾಕೂರ್, ರಣದೀಪ್ ಸಿಂಗ್ ಸುರ್ಜೆವಾಲಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಮತ್ತು ಪಕ್ಷದ ವಕ್ತಾರ ಸಾಕೇತ್ ಗೋಖಲೆ ಸೇರಿದ್ದಾರೆ. ಪೀಠವು ತನ್ನ ತೀರ್ಪನ್ನು ಮೇ ತಿಂಗಳಲ್ಲಿ ಕಾಯ್ದಿರಿಸಿತ್ತು.
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರವು ಈ ಹಿಂದೆ ನ್ಯಾಯಾಲಯದಲ್ಲಿ ವಾದಿಸಿತ್ತು. ಮಿಶ್ರಾ ಅವರು ಮನಿ ಲಾಂಡರಿಂಗ್ ಮತ್ತು ಹಣಕಾಸು ಭಯೋತ್ಪಾದನೆ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಮುಂದುವರಿಸುವುದು ಸೂಕ್ತವೆಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಅವರು ಕೇಂದ್ರವನ್ನು ಪ್ರತಿನಿಧಿಸಿದ್ದಾರೆ.
1984 ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ಅವರನ್ನು 2018ರಲ್ಲಿ ನೇಮಿಸಲಾಯಿತು. ಈ ಅವಧಿಯು ನವೆಂಬರ್ 2020 ಕ್ಕೆ ಕೊನೆಗೊಳ್ಳಬೇಕಿತ್ತು. ಅಧಿಕಾರಾವಧಿಯು ಅಂತ್ಯಗೊಳ್ಳುವ ಮೊದಲು, ಅವರಿಗೆ ಒಂದು ವರ್ಷದ ವಿಸ್ತರಣೆಯನ್ನು ನೀಡಲಾಯಿತು. ಆ ನಂತರ ಎರಡನೇ ಅಧಿಕಾರಾವಧಿಗೂ ಅವರನ್ನು ಮುಂದುವರಿಸಲಾಯಿತು.












Click it and Unblock the Notifications