ಸಂಸತ್ ಭವನ ಉದ್ಘಾಟನೆಯಲ್ಲಿ ರಾಜಕೀಯ: ವಿಪಕ್ಷಗಳಿಗೆ ಸುಪ್ರೀಂ ಕಪಾಳಮೋಕ್ಷ: ಪ್ರಹ್ಲಾದ್ ಜೋಶಿ
ಬೆಂಗಳೂರು, ಮೇ 26: ಪ್ರಧಾನಿ ನರೇಂದ್ರ ಮೋದಿ ಅವರಿಂದ ನೂತನ ಸಂಸತ್ ಭವನ ಉದ್ಘಾಟನೆ ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಸಲು ನಿರ್ಧರಿಸಿದ್ದ ವಿಪಕ್ಷ ನಾಯಕರಿಗೆ ಮುಖಭಂಗವಾಗಿದೆ. ಸುಪ್ರೀಂ ಕೋರ್ಟ್ ವಿಪಕ್ಷಗಳಿಗೆ ಕಪಾಳಮೋಕ್ಷ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನೂತನ ಸಂಸತ್ ಭವನ ಉದ್ಘಾಟನೆ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇಂದು ಸಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ರಾಷ್ಟ್ರಪತಿಯವರಿಂದಲೇ ಉದ್ಘಾಟನೆಯಾಗಬೇಕು ಎಂದು ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ರಾಜಕೀಯ ಮಾಡಿರುವ ವಿಪಕ್ಷಗಳಿಗೆ ಸುಪ್ರೀಂ ಕೋರ್ಟ್ ನಿರ್ಧಾರವು ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಅವರು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ತೀಕ್ಷ್ಣವಾಗಿ ಹೇಳಿದ ಸುಪ್ರೀಂ ಕೋರ್ಟ್
ನೂತನ ಪಾರ್ಲಿಮೆಂಟ್ ಬಿಲ್ಡಿಂಗ್ ಅನ್ನ ರಾಷ್ಟ್ರಪತಿಗಳಿಂದ ಉದ್ಘಾಟಿಸುವಂತೆ ನಿರ್ದೇಶನ ಕೋರಿ ಅಡ್ವಕೇಟ್ ಜಯಾ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಆರ್ಟಿಕಲ್ 79 ಗೂ ಪಾರ್ಲಿಮೆಂಟ್ ಮತ್ತು ರಾಷ್ಟ್ರಪತಿಗಳ ಕುರಿತು ಹೇಳಿರುವ ಅಂಶಕ್ಕೂ, ಪಾರ್ಲಿಮೆಂಟ್ ಉದ್ಘಾಟನೆಗೂ ಏನು ಸಂಬಂಧ ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತಲ್ಲದೇ ಅರ್ಜಿ ಸಲ್ಲಿಕೆ ಉದ್ದೇಶ ನಮಗೆ ಅರ್ಥವಾಗುತ್ತದೆ ಎಂದು ತೀಕ್ಷ್ಣವಾಗಿ ನುಡಿಯಿತು.
ಸುಪ್ರೀಂ ಕೋರ್ಟ್‌ನ ತೀರ್ಪಿನ ಬೆನ್ನಲ್ಲೇ ಟ್ವೀಟರ್ ಮೂಲಕ ವಿಪಕ್ಷ ನಾಯಕರಿಗೆ ಅವರು ತಿರುಗೇಟು ನೀಡಿದ್ದಾರೆ. ಸಂಸತ್ ಭವನವದ ವಿಚಾರದಲ್ಲಿ ರಾಜಕೀಯ ಮಾಡಿದ ವಿಪಕ್ಷಗಳಿಗೆ ನ್ಯಾಯಾಲಯ ತೀರ್ಪಿನಿಂದ ಸರಿಯಾದ ಉತ್ತರ ಸಿಕ್ಕಿದೆ. ಸಂಸತ್ ಭವನ ದೇಶದ ಹೆಮ್ಮೆಯ ಪ್ರತೀಕ ಎಂಬುದು ಎಲ್ಲರ ಗಮನದಲ್ಲಿರಲಿ ಎಂದರು.
ಸಮಾರಂಭದಲ್ಲಿ ಪಾಲ್ಗೊಳ್ಳಲು ಜೋಶಿ ಮನವಿ
ನ್ಯಾಯಾಲಯ ಛೀಮಾರಿ ಹಾಕಿದೆ ಮೇಲಾದರು ಇಂಥಹ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದನ್ನ ವಿಪಕ್ಷಗಳು ಬಿಡಬೇಕು ಎಂದು ವಿಪಕ್ಷಗಳಿಗೆ ಕಿವಿ ಮಾತು ಹೇಳಿದರು. ವಿಪಕ್ಷಗಳ ನಾಯಕರು ಬಿಹಿಷ್ಕಾರದ ನಡೆಯಿಂದ ಹಿಂದೆ ಸರಿದು ಮೇ 28ರಂದು ಭಾನುವಾರ ನಡೆಯಲಿರುವ ಪಾರ್ಲಿಮೆಂಟ್ ನೂತನ ಭವನ ಉದ್ಘಾಟನೆಯಲ್ಲಿ ವಿಪಕ್ಷ ಪಾಲ್ಗೊಳ್ಳಲಿ ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ನೂತನ ಸಂಸತ್ ಭವನ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ಎಲ್ಲವು ಟೀಕಿಸಿದ್ದವು. ಉದ್ಘಾಟನೆ ಕಾರ್ಯಕ್ರಮಕ್ಕೆ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ. ಅಲ್ಲದೇ ವಿಡಿ ಸಾವರ್ಕರ್ ಜನ್ಮದಿನ (ಮೇ 28) ದಂದೇ ಪಾರ್ಲಿಮೆಂಟ್ ಉದ್ಘಾಟನೆಗೆ ನಿರ್ಧರಿಸಿದೆ ಎಂದು ಆರೋಪಿಸಿದ್ದವು. ಈ ಕಾರಣದಿಂದ ಉದ್ಘಾಟನೆ ಕಾರ್ಯಕ್ರವನ್ನು ಸುಮಾರು 21 ವಿಪಕ್ಷಗಳು ಬಹಿಷ್ಕರಿಸಿದ್ದವು. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಲ್ಲಿ ವಿಪಕ್ಷಗಳಿಗೆ ಹಿನ್ನಡೆ ಆಗಿದೆ.












Click it and Unblock the Notifications