ಹೊಂದಿಕೋ ಅಂದಿದ್ದಕ್ಕೆ ಅತ್ತೆ-ಮಾವನ ವಿರುದ್ಧ ಕೇಸ್ ಹಾಕೋಕಾಗೋಲ್ಲ: ಕಿರುಕುಳ ಪ್ರಕರಣ ರದ್ದು ಮಾಡಿದ ಸುಪ್ರೀಂ
ಮಹಿಳೆಯೊಬ್ಬರು ಅತ್ತೆ-ಮಾವನ ವಿರುದ್ಧ ಹೂಡಿದ್ದ ಕೌಟುಂಬಿಕ ಕ್ರೌರ್ಯ, ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಬೇಡಿಕೆ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನಿರ್ದಿಷ್ಟ ಬಹಿರಂಗ ಕೃತ್ಯಗಳಿಲ್ಲದೆ, ಸಾಮಾನ್ಯ ಆರೋಪಗಳನ್ನು ಹೊರಿಸುವ ಮೂಲಕ ವೈವಾಹಿಕ ವಿವಾದಗಳಲ್ಲಿ ಗಂಡನ ಸಂಬಂಧಿಕರ ವಿರುದ್ಧ ಮೊಕದ್ದಮೆ ಹಾಕುವುದನ್ನು ಸಮರ್ಥಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ನೊಂಗ್ಮೇಕಪಮ್ ಕೋಟೀಶ್ವರ್ ಸಿಂಗ್ ಅವರ ಪೀಠವು ದೂರುದಾರರ ಅತ್ತೆ-ಮಾವ ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿತು. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಅತ್ತೆ ಮಾನವ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಗ್ವಾಲಿಯರ್ ಪೀಠ ತಳ್ಳಿ ಹಾಕಿತ್ತು. ಇದೀಗ ಸುಪ್ರೀಂ ಕೋರ್ಟ್ ಇವರಿಬ್ಬರ ವಿಚಾರಣೆಗೆ ತಡೆ ನೀಡಿದೆ. ಕಾನೂನುಬದ್ಧವಾಗಿ ಸಮರ್ಥನೀಯ ಆರೋಪಗಳಿಲ್ಲದೆ, ವೈಯಕ್ತಿಕ ಅಥವಾ ಕೌಟುಂಬಿಕ ಕುಂದುಕೊರತೆಗಳನ್ನು ಇತ್ಯರ್ಥಪಡಿಸಲು ಕ್ರಿಮಿನಲ್ ಕಾನೂನನ್ನು ಅಸ್ತ್ರವಾಗಿ ಬಳಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ಪ್ರಸ್ತುತ ಮೇಲ್ಮನವಿ ಸಲ್ಲಿಸುವವರ ವಿರುದ್ಧದ ಆರೋಪಗಳು ಸಾಮಾನ್ಯೀಕರಿಸಲ್ಪಟ್ಟಿವೆ. ಡಿವಿ ಕಾಯ್ದೆಯ ಅರ್ಥದಲ್ಲಿ ಮೇಲ್ಮನವಿ ಸಲ್ಲಿಸಿದವರಿಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಅಥವಾ ನೇರ ಕೃತ್ಯವನ್ನು ದೂರಿನಲ್ಲಿ ಬಹಿರಂಗಪಡಿಸಲಾಗಿಲ್ಲ. ಬದಲಿಗೆ ಪತಿಯನ್ನು ಬೆಂಬಲಿಸಿದರು ಎಂದು ಆಪಾದಿಸಲಾಗಿದೆ. ಅಲ್ಲದೆ, ವೈವಾಹಿಕ ವಿವಾದದಲ್ಲಿ ಮಧ್ಯಪ್ರವೇಶಿಸುವಲ್ಲಿ ವಿಫಲರಾದರು ಅಥವಾ ದೂರುದಾರರು ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಕೇಳಿಕೊಂಡರು ಎಂದು ದೂರಲಾಗಿದೆ. ಅತ್ತೆ ಮಾವನ ವಿರುದ್ಧ ನಿರ್ದಿಷ್ಟ ಬಹಿರಂಗ ಕೃತ್ಯಗಳ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲದೆ ಇರುವುದು ಮತ್ತು ಸರ್ವವ್ಯಾಪಿ ಮತ್ತು ವಿಶಾಲ ಪದಗಳ ಆರೋಪಗಳು ಅತ್ತೆ ಮಾವನ ವಿರುದ್ಧ ವಿಚಾರಣೆಯನ್ನು ಮುಂದುವರಿಸುವುದನ್ನು ಸಮರ್ಥಿಸುವುದಿಲ್ಲ " ಎಂದು ನ್ಯಾಯಾಲಯ ಹೇಳಿದೆ.
ದೂರುದಾರ-ಪತ್ನಿ ಮತ್ತು ಆಕೆಯ ಪತಿಯ ನಡುವಿನ ವೈವಾಹಿಕ ವಿವಾದದಿಂದ ಈ ಪ್ರಕರಣ ಹುಟ್ಟಿಕೊಂಡಿದೆ. ಇಲ್ಲಿ ಇವರಿಬ್ಬರೂ 2019 ರ ನವೆಂಬರ್‌ನಲ್ಲಿ ವಿವಾಹವಾದರು. ಜನವರಿ 2023 ರಲ್ಲಿ, ದೂರುದಾರರು ಮಧ್ಯಪ್ರದೇಶದ ಗುನಾದಲ್ಲಿ ಎಫ್‌ಐಆರ್ ದಾಖಲಿಸಿ, ಐಪಿಸಿ ಸೆಕ್ಷನ್ 498ಎ, ಐಪಿಸಿ ಸೆಕ್ಷನ್ 34 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ತನ್ನ ಪತಿ ಮತ್ತು ಅವರ ಸಂಬಂಧಿಕರ ವಿರುದ್ಧದರು ದಾಖಲಿಸಿದ್ದಾರೆ. ಮದುವೆಯ ಸಮಯದಲ್ಲಿ ನಗದು, ಆಭರಣ ಮತ್ತು ಮನೆಯ ವಸ್ತುಗಳ ರೂಪದಲ್ಲಿ ಗಣನೀಯ ಪ್ರಮಾಣದ ವರದಕ್ಷಿಣೆಯನ್ನು ನೀಡಲಾಗಿದೆ. ಇಷ್ಟಿದ್ದರೂ ನಂತರ ಕಿರುಕುಳ ನೀಡಲಾಗಿದೆ ಮಾತ್ರವಲ್ಲ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಾದ ನಂತರ ಮಾನಸಿಕ ಕಿರುಕುಳ, ಗುಪ್ತ ಕ್ಯಾಮೆರಾಗಳ ಮೂಲಕ ಕಣ್ಗಾವಲು, ಚಲನೆಯ ಮೇಲಿನ ನಿರ್ಬಂಧಗಳು ಮತ್ತು ಪರವಾನಗಿ ಪಡೆದ ಬಂದೂಕನ್ನು ಒಳಗೊಂಡ ಬೆದರಿಕೆ ಮುಂತಾದ ಆರೋಪಗಳನ್ನು ಹೊರಿಸಲಾಗಿದೆ. ಗೃಹ ಹಿಂಸಾಚಾರ ಕಾಯ್ದೆಯಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಮಧ್ಯಪ್ರದೇಶ ಹೈಕೋರ್ಟ್, ಆರೋಪಿ ಸಂಬಂಧಿಕರ ವಿರುದ್ಧ ಮೇಲ್ನೋಟಕ್ಕೆ ಆರೋಪಗಳಿವೆ ಎಂದು ಹೇಳಿ, ಎಫ್‌ಐಆರ್ ಅಥವಾ ಡಿವಿ ಕಾಯ್ದೆಯ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿದೆ. ಇದರಿಂದಾಗಿ ಅತ್ತೆ-ಮಾವ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಆದರೆ ಈ ಆದೇಶವನ್ನು ಬದಿಗಿಟ್ಟ ನ್ಯಾಯಮೂರ್ತಿ ಕೋಟಿಶ್ವರ್ ಸಿಂಗ್, ಮೇಲ್ಮನವಿದಾರರ ವಿರುದ್ಧದ ಕ್ರಮವನ್ನು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಹೇಳಿದ್ದಾರೆ. ಆರೋಪಿಯ ವಿರುದ್ಧ ನಿರ್ದಿಷ್ಟವಾದ ಕ್ರಮವನ್ನು ಸೂಚಿಸಲು ದೂರುದಾರರು ವಿಫಲರಾಗಿರುವುದು ಪ್ರಕರಣಕ್ಕೆ ಮಾರಕವಾಗಿದೆ ಎಂದು ನ್ಯಾಯಾಲಯ ವ್ಯಾಖ್ಯಾನಿಸಿದೆ. ವೈವಾಹಿಕ ವಿವಾದದಿಂದ ಉಂಟಾಗುವ ವಿಚಾರಣೆಯಲ್ಲಿ ಮುಂದುವರಿಯಬೇಕಾದರೆ "ಪ್ರತಿಯೊಬ್ಬ ಆರೋಪಿಯ ವಿರುದ್ಧದ ಆರೋಪಗಳು ನಿರ್ದಿಷ್ಟ ಮತ್ತು ವಿಭಿನ್ನವಾಗಿರಬೇಕು.ಕ್ರೌರ್ಯ, ಕಿರುಕುಳ ಅಥವಾ ಕಾನೂನುಬಾಹಿರ ವರದಕ್ಷಿಣೆ ಬೇಡಿಕೆಯ ಆಪಾದಿತ ಕೃತ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುವುದನ್ನು ಸೂಚಿಸುವ ಪ್ರಾಥಮಿಕ ಸಾಕ್ಷ್ಯದಿಂದ ಬೆಂಬಲಿತವಾಗಿರಬೇಕು ಎಂದು ಹೇಳಿದ್ದಾರೆ.
"ಕೌಟುಂಬಿಕ ಹಿಂಸಾಚಾರದ ಸಂತ್ರಸ್ತರ ಹಕ್ಕುಗಳು ಮತ್ತು ಘನತೆಯನ್ನು ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ ನ್ಯಾಯಾಲಯಗಳು ಏಕಕಾಲದಲ್ಲಿ ಕ್ರಿಮಿನಲ್ ಕಾನೂನಿನ ಕಠಿಣತೆಗಳನ್ನು ವಾಸ್ತವಿಕ ಅಡಿಪಾಯವಿಲ್ಲದೆ ಕುಟುಂಬದ ಪ್ರತಿಯೊಬ್ಬ ಸದಸ್ಯನ ಮೇಲೆಯೂ ವಿಸ್ತರಿಸದಂತೆ ನೋಡಿಕೊಳ್ಳುವ ಅಗತ್ಯವೂ ಇದೆ ಎನ್ನುವುದನ್ನು ನ್ಯಾಯಾಲಯ ಹೇಳಿದೆ. ಆಪಾದಿತ ಅಪರಾಧಗಳಲ್ಲಿ ಮೇಲ್ಮನವಿದಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ದೂರುದಾರರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಇಲ್ಲಿ ಮೇಲ್ಮನವಿದಾರರು ಅಂದರೆ ಅತ್ತೆ ಮಾವ ತಮ್ಮ ಪತಿ ಕಿರುಕುಳ ನೀಡುವುದನ್ನು ಅಥವಾ ಹಿಂಸೆಗೆ ಒಳಪಡಿಸುವುದನ್ನು ಎಂದಿಗೂ ತಡೆಯಲಿಲ್ಲ. ಬದಲಾಗಿ, "ಕುಟುಂಬ ಸದಸ್ಯರು ಪತಿಯನ್ನು "ಬೆಂಬಲಿಸಿದ್ದಾರೆ. ಮಧ್ಯಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ದೂರುದಾರರಿಗೆ ವೈವಾಹಿಕ ಸಂಬಂಧದಲ್ಲಿ ಹೊಂದಿಕೊಳ್ಳಲು ಸಲಹೆ ನೀಡಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.
ಕೆಲವು ಸಂಬಂಧಿಕರು ನಿಷ್ಕ್ರಿಯ ಪ್ರೇಕ್ಷಕರಾಗಿ ಉಳಿಯುವ ಅಥವಾ ದೂರುದಾರರ ಸಹಾಯಕ್ಕೆ ಬರಲು ವಿಫಲವಾಗುವ ಸಂದರ್ಭಗಳು ನಿಜಕ್ಕೂ ಇರಬಹುದು. ಆದರೂ, ಅಂತಹ ನಡವಳಿಕೆಯು ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೂ, ಸುತ್ತಮುತ್ತಲಿನ ಸಂದರ್ಭಗಳು ಆಪಾದಿತ ಅಪರಾಧಗಳಲ್ಲಿ ಅವರ ಸಕ್ರಿಯ ಜಟಿಲತೆ ಅಥವಾ ಭಾಗವಹಿಸುವಿಕೆಯನ್ನು ಸ್ಪಷ್ಟವಾಗಿ ಬಹಿರಂಗಪಡಿಸದ ಹೊರತು ಅವರನ್ನು ಕ್ರಿಮಿನಲ್ ಅಪರಾಧದ ಭಾಗವಾಗಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ದಂಪತಿಗಳ ನಡುವಿನ ವಿವಾಹವು ಬೇರ್ಪಟ್ಟಿರುವುದರಿಂದ, ಮೇಲ್ಮನವಿದಾರರ ವಿರುದ್ಧ ಡಿವಿ ಕಾಯ್ದೆಯ ವಿಚಾರಣೆಯನ್ನು ಮುಂದುವರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನ್ಯಾಯಾಲಯ ಹೇಳಿ ಪ್ರಕರಣವನ್ನು ರದ್ದುಗೊಳಿಸಿದೆ.
ಸಂಬಂಧಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಅನುಮತಿಸುವ ಮೊದಲು ನ್ಯಾಯಾಲಯಗಳು ಹೆಚ್ಚಿನ ಮಟ್ಟದ ಎಚ್ಚರಿಕೆಯನ್ನು ವಹಿಸಬೇಕು. "ವೈವಾಹಿಕ ಸಂಬಂಧಗಳು ಹದಗೆಟ್ಟಾಗ, ಭಾವನಾತ್ಮಕ ಪ್ರಕ್ಷುಬ್ಧತೆಯಿಂದ ಆರೋಪಗಳನ್ನು ಮಾಡಲಾಗುತ್ತದೆ. ಇದರಿಂದ ಸಂಗಾತಿಯ ಇಡೀ ಕುಟುಂಬವನ್ನು ಕ್ರಿಮಿನಲ್ ಮೊಕದ್ದಮೆಗೆ ಎಳೆಯುತ್ತದೆ. ಆದರೆ ಸ್ಪಷ್ಟ, ನಿರ್ದಿಷ್ಟ ಮತ್ತು ಕಾನೂನುಬದ್ಧವಾಗಿ ಸಮರ್ಥನೀಯ ಆರೋಪಗಳಿಲ್ಲದೆ, ವೈಯಕ್ತಿಕ ಕುಂದುಕೊರತೆಗಳನ್ನು ಹೊರಹಾಕಲು ಅಥವಾ ಕೌಟುಂಬಿಕ ಅಂಕಗಳನ್ನು ಇತ್ಯರ್ಥಪಡಿಸಲು ಕ್ರಿಮಿನಲ್ ಕಾನೂನನ್ನು ಸಾಧನವಾಗಿ ಅನುಮತಿಸಲಾಗುವುದಿಲ್ಲ. ಆದ್ದರಿಂದ ಸಂಗಾತಿಯೊಂದಿಗಿನ ಸಂಬಂಧದ ಕಾರಣದಿಂದಾಗಿ ಸಂಬಂಧಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿಸುವ ಮೊದಲು ನ್ಯಾಯಾಲಯಗಳು ಹೆಚ್ಚಿನ ಮಟ್ಟದ ಎಚ್ಚರಿಕೆ ಮತ್ತು ನ್ಯಾಯಾಂಗ ಪರಿಶೀಲನೆಯನ್ನು ನಡೆಸಬೇಕು" ಎಂದು ನ್ಯಾಯಾಲಯ ಹೇಳಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications