Stray Dogs: ಬೀದಿ ನಾಯಿ ಪ್ರಕರಣದ ತೀರ್ಪು ಸಡಿಲಿಸಿದ ಸುಪ್ರೀಂ ಕೋರ್ಟ್
ನವದೆಹಲಿ, ಆಗಸ್ಟ್ 22: ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿನ ಬೀದಿ ನಾಯಿಗಳನ್ನು ಹಿಡಿದು ಅಶ್ರಯತಾಣಗಳಿಗೆ ಕಳುಹಿಸುವಂತೆ ಈ ಹಿಂದೆ ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ಇಂದು (ಶುಕ್ರವಾರ) ಆದೇಶದಲ್ಲಿ ಮಾರ್ಪಾಡು ಮಾಡಿದೆ. ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದಕ್ಕೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹೊಸ ಆದೇಶವನ್ನು ಹೊರಡಿಸಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ ಶ್ವಾನ ಪ್ರಿಯರು ಮತ್ತು ಎನ್‌ಜಿಒಗಳು ಈ ಪ್ರಕರಣದ ವಿಚಾರಣೆಗಾಗಿ ಒಂದು ವಾರದೊಳಗೆ ಕ್ರಮವಾಗಿ 25,000 ಮತ್ತು 2 ಲಕ್ಷ ರೂ.ಗಳನ್ನು ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಇನ್ನೂ ಪ್ರಾಣಿ ಪ್ರಿಯರು ನಾಯಿಗಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕೋರ್ಟ್, ದತ್ತು ಪಡೆದ ನಾಯಿಗಳನ್ನು ಮರಳಿ ಬೀದಿಗಳಿಗೆ ಹಿಂತಿರುಗಿಸದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಅದಕ್ಕಾಗಿ ಪ್ರತಿ ಅರ್ಜಿದಾರ 25,000 ರೂ. ಮತ್ತು ಎನ್‌ಜಿಒಗಳು 2 ಲಕ್ಷ ರೂ. ಠೇವಣಿ ಇಡಬೇಕು ಎಂದು ನಿರ್ದೇಶಿಸಿತು. ಮುಖ್ಯವಾಗಿ ಈ ಕುರಿತು ರಾಷ್ಟ್ರೀಯ ನೀತಿ ರೂಪಿಸಲು ಸೂಚಿಸಿತು. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಮೂವರು ನ್ಯಾಯಾಧೀಶರ ವಿಶೇಷ ಪೀಠವು ಈ ಹಣವನ್ನು ಆಯಾ ಪುರಸಭೆ ಸಂಸ್ಥೆಗಳ ಆಶ್ರಯದಲ್ಲಿ ಬೀದಿ ನಾಯಿಗಳಿಗೆ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಸೃಷ್ಟಿಸಲು ಬಳಸಿಕೊಳ್ಳಬೇಕು ಎಂದು ಹೇಳಿದೆ.
ಈ ನ್ಯಾಯಾಲಯವನ್ನು ಸಂಪರ್ಕಿಸಿರುವ ಪ್ರತಿಯೊಬ್ಬ ಶ್ವಾನ ಪ್ರಿಯರು ಮತ್ತು ಪ್ರತಿ ಎನ್‌ಜಿಒ ಏಳು ದಿನಗಳ ಅವಧಿಯೊಳಗೆ ಈ ನ್ಯಾಯಾಲಯದ ನೋಂದಾವಣೆಯಲ್ಲಿ ಕ್ರಮವಾಗಿ 25,000 ಮತ್ತು ಎರಡು ಲಕ್ಷ ರೂ.ಗಳ ಮೊತ್ತವನ್ನು ಠೇವಣಿ ಇಡಬೇಕು. ವಿಫಲವಾದರೆ ಅವರಿಗೆ ಈ ವಿಷಯದಲ್ಲಿ ಇನ್ನು ಮುಂದೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರನ್ನೂ ಒಳಗೊಂಡ ಪೀಠ ಹೇಳಿದೆ.
ನ್ಯಾ. ವಿಕ್ರಮ್ ನಾಥ್, ನ್ಯಾ. ಸಂದೀಪ್ ಮೆಹ್ತಾ ಮತ್ತು ನ್ಯಾ. ಎನ್.ವಿ ಅಂಜಾರಿಯಾ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದ್ದು, ಆಗಸ್ಟ್ 11ರಂದು ಹೊರಡಿಸಿದ್ದ ತೀರ್ಪಿನಲ್ಲಿ ತಿದ್ದುಪಡಿಯನ್ನ ಮಾಡಿದೆ. ನ್ಯಾ. ಪಾರ್ದಿವಾಲಾ ಪೀಠದ ಆದೇಶಕ್ಕೆ ಶ್ವಾನಪ್ರಿಯರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಪ್ರಕರಣ ವಿಚಾರಣೆಯನ್ನ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು.
ಈ ಮೊದಲು ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಿಗೆ (ಶೆಡ್) ಸ್ಥಳಾಂತರಿಸಬೇಕು ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಇದೀಗ ಅನಾರೋಗ್ಯ ಮತ್ತು ಆಕ್ರಮಣಕಾರಿ ಬೀದಿ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಲ್ಲಿ ಇರಿಸುವಂತೆ ಸೂಚಿಸಿದೆ. ಉಳಿದ ನಾಯಿಗಳನ್ನು ಹಿಡಿದು, ಸಂತಾನಹರಣ ಚಿಕಿತ್ಸೆ, ಜಂತುಹುಳು ನಿವಾರಣಾ ಲಸಿಕೆ ಹಾಕಿದ ಬಳಿಕ ಅವುಗಳನ್ನು ಹಿಡಿದ ಪ್ರದೇಶದಲ್ಲೇ ಬಿಡುವಂತೆ ತಿಳಿಸಿದೆ. ರೇಬೀಸ್ ಅಥವಾ ಅನಾರೋಗ್ಯವುಳ್ಳ ನಾಯಿಗಳು ಹಾಗೂ ಆಕ್ರಮಣಕಾರಿ ನಾಯಿಗಳನ್ನ ಮಾತ್ರ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯತಾಣಗಳಲ್ಲಿ ಇರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದೆ.












Click it and Unblock the Notifications