Jallikattu: ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಕೊನೆಗೂ ಸಮ್ಮತಿ ಸೂಚಿಸಿದ ಸುಪ್ರೀಂಕೋರ್ಟ್
ನವದೆಹಲಿ, ಮೇ, 18: ಜಲ್ಲಿಕಟ್ಟು ಕ್ರೀಡೆಯು ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ. ಅಲ್ಲದೆ ಈ ಕ್ರೀಡೆಯಲ್ಲಿ ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎನ್ನುವ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದ್ದರಿಂದ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಶ್ನಿಸಿ ಸಲ್ಲಿಕೆ ಆಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠ ಗುರುವಾರ (ಮೇ 18) ತನ್ನ ತೀರ್ಪು ನೀಡಿದ್ದು, ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನೀಡಿ ಎಂದು ಕೇಳಿಕೊಂಡಿದ್ದ ತಮಿಳುನಾಡು ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಪ್ರಾಣಿ ಹಕ್ಕುಗಳ ಸಂರಕ್ಷಣ ಸಂಸ್ಥೆ ಪೆಟಾ ಜಲ್ಲಿಕಟ್ಟು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನೀಡಿ ಎಂದು ತಮಿಳುನಾಡು ಸರ್ಕಾರದ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ, ಈ ಸ್ಪರ್ಧೆಗೆ ಒಪ್ಪಿಗೆ ನೀಡಿದೆ.

ಜಲ್ಲಿಕಟ್ಟು ಕೇವಲ ಸಾಂಪ್ರದಾಯಿಕ ಆಚರಣೆ ಆಗಿದೆ. ಇದರಲ್ಲಿ ಪ್ರಾಣಿಗಳನ್ನು ಹಿಂಸಿಸುವ ಯಾವುದೇ ಉದ್ದೇಶ ಇಲ್ಲ. ಪೆರು, ಕೊಲಂಬಿಯಾ, ಸ್ಪೇನ್ ಸಹಿತ ಹಲವು ರಾಷ್ಟ್ರಗಳಲ್ಲೂ ಇಂತಹ ಆಚರಣೆಗಳಿವೆ ಎಂದು ತಮಿಳುನಾಡು ಸರ್ಕಾರದ ವಾದವಾಗಿತ್ತು. ಇದನ್ನು ಸುಪ್ರೀಂ ಎತ್ತಿ ಹಿಡಿಯುವ ಮೂಲಕ ಸಮ್ಮತಿ ಸೂಚಿಸಿದೆ.












Click it and Unblock the Notifications