Get Updates
Get notified of breaking news, exclusive insights, and must-see stories!

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ; ಏಪ್ರಿಲ್ 7 ರಿಂದ ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ವಿಚಾರಣೆ

ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸೆಪ್ಟೆಂಬರ್ 2018 ರ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಏಪ್ರಿಲ್ 7 ರಿಂದ 9 ನ್ಯಾಯಮೂರ್ತಿಗಳ ಪ್ರತ್ಯೇಕ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯ್‌ಮಲ್ಯಾ ಬಾಗ್‌ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ನ್ಯಾಯಪೀಠವು ಈ ತೀರ್ಮಾನವನ್ನು ಪ್ರಕಟಿಸಿದೆ. 9 ನ್ಯಾಯಮೂರ್ತಿಗಳಿರುವ ನ್ಯಾಯಪೀಠವನ್ನು ಮುಖ್ಯ ನ್ಯಾಯಾಧೀಶರು ಪ್ರತ್ಯೇಕವಾಗಿ ಘೋಷಿಸಲಿದ್ದಾರೆ.

ವಿಚಾರಣೆಯ ವೇಳಾಪಟ್ಟಿ

ನ್ಯಾಯಾಲಯವು ವಿಚಾರಣೆಗೆ ಸ್ಪಷ್ಟವಾದ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಶಬರಿಮಲೆ ತೀರ್ಪಿನ ಮರುಪರಿಶೀಲನೆಯನ್ನು ಬೆಂಬಲಿಸುವ ಕಕ್ಷಿದಾರರು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ತಮ್ಮ ವಾದಗಳನ್ನು ಮಂಡಿಸಲಿದ್ದಾರೆ. ಮರುಪರಿಶೀಲನೆಯನ್ನು ವಿರೋಧಿಸುವ ಕಕ್ಷಿದಾರರಿಗೆ ಏಪ್ರಿಲ್ 14 ರಿಂದ 16 ರವರೆಗೆ ವಾದ ಮಂಡಿಸಲು ಕಾಲಾವಕಾಶ ನೀಡಲಾಗಿದೆ. ಅಂತಿಮವಾಗಿ, ಏಪ್ರಿಲ್ 21 ರಂದು ಮರು-ಪ್ರತ್ಯುತ್ತರ (rejoinder) ಸಲ್ಲಿಕೆಗಳು ನಡೆಯಲಿದ್ದು, ಏಪ್ರಿಲ್ 22 ರಂದು ಸಂಪೂರ್ಣ ವಿಚಾರಣೆ ಮುಕ್ತಾಯಗೊಳ್ಳಲಿದೆ.

Supreme Court

ಕೇರಳದ ಸುಪ್ರಸಿದ್ಧ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಋತುಮತಿಯಾಗುವ ವಯಸ್ಸಿನ ಮಹಿಳೆಯರ ಪ್ರವೇಶವನ್ನು ಅನುಮತಿಸಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2018 ರಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಿಂದ ಉದ್ಭವಿಸಿದ ಹಲವಾರು ಮರುಪರಿಶೀಲನಾ ಅರ್ಜಿಗಳು ಮತ್ತು ರಿಟ್ ಅರ್ಜಿಗಳನ್ನು ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.

ವಿಶೇಷವೆಂದರೆ, ಕೇವಲ ಶಬರಿಮಲೆ ವಿಚಾರ ಮಾತ್ರವಲ್ಲದೆ ಇತರ ಧರ್ಮಗಳ ಪ್ರಮುಖ ವಿಚಾರಗಳಾದ; ದರ್ಗಾ ಹಾಗೂ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ, ಅನ್ಯಕೋಮಿನವರನ್ನು ವಿವಾಹವಾದ ಪಾರ್ಸಿ ಮಹಿಳೆಯರಿಗೆ ಫೈರ್ ಟೆಂಪಲ್‌ಗಳಿಗೆ (ಅಗ್ನಿ ದೇವಾಲಯ) ಪ್ರವೇಶದ ಹಕ್ಕು, ದಾವೂದಿ ಬೊಹ್ರಾ ಸಮುದಾಯದಲ್ಲಿ ಮಹಿಳೆಯರ ಜನನಾಂಗದ ಊನಗೊಳಿಸುವಿಕೆ (FGM) ಮತ್ತು ಸಮುದಾಯದಿಂದ ಬಹಿಷ್ಕರಿಸುವ ಆಚರಣೆಗಳ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳನ್ನೂ ಸಹ ಇದೇ ಪೀಠದಲ್ಲಿ ಪಟ್ಟಿ ಮಾಡಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಶಬರಿಮಲೆ ತೀರ್ಪಿನ ಮರುಪರಿಶೀಲನೆಗೆ ಕೇಂದ್ರ ಸರ್ಕಾರದ ಬೆಂಬಲವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಪ್ರಕರಣದ ಹಿನ್ನೆಲೆ

ನವೆಂಬರ್ 2018 ರಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು 4:1 ಬಹುಮತದೊಂದಿಗೆ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. "ಭಕ್ತಿಯು ಲಿಂಗ ತಾರತಮ್ಯಕ್ಕೆ ಒಳಪಡುವುದಿಲ್ಲ" ಎಂದು ಅಂದಿನ ಪೀಠ ತೀರ್ಪು ನೀಡಿತ್ತು. ಅಂದಿನ ಸಿಜೆಐ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಬಹುಮತದ ತೀರ್ಪು ನೀಡಿದ್ದರು. ಆದರೆ, ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದ ನ್ಯಾ. ಇಂದು ಮಲ್ಹೋತ್ರಾ ಅವರು ಮಾತ್ರ ಈ ತೀರ್ಪಿನಿಂದ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.

ಅಯ್ಯಪ್ಪ ಸ್ವಾಮಿ ಭಕ್ತರು ಪ್ರತ್ಯೇಕ ಧಾರ್ಮಿಕ ಪಂಗಡವನ್ನು ರಚಿಸುವುದಿಲ್ಲ ಎಂದು ಸಿಜೆಐ ಅವರ ತೀರ್ಪು ಹೇಳಿತ್ತು. ಅಲ್ಲದೆ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿದ್ದ 'ಕೇರಳ ಹಿಂದೂ ಸಾರ್ವಜನಿಕ ಆರಾಧನಾ ಸ್ಥಳಗಳ ನಿಯಮಗಳು 1965'ರ ನಿಯಮ 3(b) ಅನ್ನು ಅಸಂವಿಧಾನಿಕ ಎಂದು ರದ್ದುಪಡಿಸಲಾಗಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ನಂತರದ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾದವು.

ನವೆಂಬರ್ 14, 2019 ರಂದು, ಅಂದಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ 5 ಸದಸ್ಯರ ಪೀಠವು 3:2 ಬಹುಮತದ ಮೂಲಕ, ಶಬರಿಮಲೆ ವಿಮರ್ಶೆಯಲ್ಲಿನ ಕೆಲವು ಸಮಸ್ಯೆಗಳು ಮುಸ್ಲಿಂ ಹಾಗೂ ಪಾರ್ಸಿ ಮಹಿಳೆಯರ ಧಾರ್ಮಿಕ ಹಕ್ಕುಗಳು ಮತ್ತು ದಾವೂದಿ ಬೊಹ್ರಾ ಸಮುದಾಯದ ಆಚರಣೆಗಳಿಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳಿಗೆ ಅನ್ವಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಆದ್ದರಿಂದ, 'ಅಗತ್ಯ ಧಾರ್ಮಿಕ ಆಚರಣೆಗಳಿಗೆ' ಸಂಬಂಧಿಸಿದ ಪ್ರಶ್ನೆಗಳನ್ನು ವಿಸ್ತೃತ ಪೀಠವು ನಿರ್ಧರಿಸುವವರೆಗೆ ಶಬರಿಮಲೆ ವಿಷಯದಲ್ಲಿ ಮರುಪರಿಶೀಲನಾ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಅಂದು ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಆರ್.ಎಫ್. ನಾರಿಮನ್ ಅಲ್ಪಮತದ ಅಭಿಪ್ರಾಯ ಹೊಂದಿದ್ದರು. ಇದೀಗ ಈ ಎಲ್ಲಾ ಗೊಂದಲಗಳಿಗೆ ಏಪ್ರಿಲ್‌ನಲ್ಲಿ ನಡೆಯಲಿರುವ ವಿಸ್ತೃತ ಪೀಠದ ವಿಚಾರಣೆಯು ಅಂತಿಮ ತೆರೆ ಎಳೆಯುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+