ದೇಹದ ಭಾಗಗಳೊಂದಿಗೆ ಸೂಟ್‌ಕೇಸ್ ಪತ್ತೆ: ದೇಹ ಶ್ರದ್ಧಾಳೆನ್ನುವ ಶಂಕೆ
ನವದೆಹಲಿ ನವವೆಂಬರ್ 25: ಶ್ರದ್ಧಾ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮೇ ತಿಂಗಳಲ್ಲಿ ಪ್ರಿಯಕರನಿಂದ ಕೊಲೆಯಾದ ಶ್ರದ್ಧಾಳ ಮೃತ ದೇಹವನ್ನು 35 ತುಂಡುಗಳಾಗಿ ಅರಣ್ಯ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಬೀಸಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಕೆಲ ದಿನಗಳಿಂದ ಶ್ರದ್ಧಾ ಮೃತ ದೇಹದ ತುಂಡುಗಳನ್ನು ಸಂಪೂರ್ಣವಾಗಿ ಪತ್ತೆ ಹಚ್ಚುವಲ್ಲಿ ಪೊಲೀಸರು ಶ್ರಮಿಸುತ್ತಿದ್ದಾರೆ.
ಈ ನಡುವೆ ಗುರುವಾರ ಮಧ್ಯಾಹ್ನ ಹರ್ಯಾಣದ ಫರಿದಾಬಾದ್‌ನ ಅರಣ್ಯ ಪ್ರದೇಶದಲ್ಲಿ ಸೂಟ್‌ಕೇಸ್‌ನಲ್ಲಿ ಮೃತದೇಹ ಪತ್ತೆಯಾಗಿದ್ದು, ಇದನ್ನು ದೆಹಲಿಯಲ್ಲಿ ಹತ್ಯೆಗೀಡಾದ ಮುಂಬೈನ 27 ವರ್ಷದ ಶ್ರದ್ಧಾ ವಾಕರ್ ಅವರ ಮೃತದೇಹ ಎಂದು ಶಂಕಿಸಲಾಗಿದೆ.
ಸೂರಜ್‌ಕುಂಡ್ ಅರಣ್ಯ ಪ್ರದೇಶದಲ್ಲಿ ದೇಹದ ಭಾಗಗಳಿದ್ದ ಸೂಟ್‌ಕೇಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಫರಿದಾಬಾದ್ ಪೊಲೀಸರು ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಸೂಟ್‌ಕೇಸ್‌ನಲ್ಲಿರುವ ದೇಹ ಶ್ರದ್ಧಾಳೆನ್ನುವ ಶಂಕೆ
ಪೊಲೀಸರ ಪ್ರಕಾರ, ಮೃತ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಸೂಟ್‌ಕೇಸ್ ನಲ್ಲಿಟ್ಟು ಎಸೆಯಲಾಗಿದೆ. ಅದರ ಬಳಿ ಬಟ್ಟೆ ಮತ್ತು ಬೆಲ್ಟ್ ಸಹ ವಶಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ, ವ್ಯಕ್ತಿಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಮತ್ತು ಗುರುತು ತಪ್ಪಿಸಲು ದೇಹದ ಒಂದು ಭಾಗವನ್ನು ಇಲ್ಲಿ ಎಸೆಯಲಾಗಿದೆ ಎಂದು ಫರಿದಾಬಾದ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫರಿದಾಬಾದ್ ಪೊಲೀಸರು ದೆಹಲಿ ಪೊಲೀಸರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಅದರ ಆಧಾರದ ಮೇಲೆ ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದಕ್ಷಿಣ ದೆಹಲಿಯ ಮೆಹ್ರೌಲಿ ಪೊಲೀಸರ ತಂಡವೂ ಸ್ಥಳಕ್ಕೆ ತಲುಪಿ ತನಿಖೆಯಲ್ಲಿ ತೊಡಗಿದೆ. ಸೂಟ್‌ಕೇಸ್‌ನಿಂದ ಪತ್ತೆಯಾದ ಮೃತದೇಹವು ಶ್ರದ್ಧಾ ವಾಕರ್ ಹತ್ಯೆ ಪ್ರಕರಣದೊಂದಿಗೆ ಸಂಬಂಧ ಹೊಂದಿರಬಹುದು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.

ಆರೋಪಿ ಅಫ್ತಾಬ್ ಅಮೀನ್ ಗೆ ಪರೀಕ್ಷೆ
ಸೂಟ್‌ಕೇಸ್‌ನಲ್ಲಿ ಪತ್ತೆಯಾದ ದೇಹದ ಭಾಗಗಳು (ಮುಂಡ ಸೇರಿದಂತೆ) ತಿಂಗಳ ಹಳೆಯದು ಎಂದು ತೋರುತ್ತಿದೆ ಮತ್ತು ಅವು ಪುರುಷ ಅಥವಾ ಮಹಿಳೆಯದ್ದೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ವಿಷಯ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದು ಮಾನಸಿಕ ವಿಶ್ಲೇಷಣೆ ಪರೀಕ್ಷೆಗೆ (PAT) ಒಳಗಾಗಿದ್ದಾರೆ.

ಅಫ್ತಾಬ್‌ಗಾಗಿ ಕುಟುಂಬವನ್ನು ಕೈಬಿಟ್ಟ ಶ್ರದ್ಧಾ
ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕತ್ತು ಹಿಸಿಕಿ ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪವಿದೆ. ಕತ್ತರಿಸಿದ ದೇಹದ ಭಾಗಗಳನ್ನು ದಕ್ಷಿಣ ದೆಹಲಿಯ ಛತ್ತರ್‌ಪುರದ ಕಾಡುಗಳಲ್ಲಿ ಎಸೆಯುವ ಮೊದಲು ರೆಫ್ರಿಜರೇಟರ್‌ನಲ್ಲಿ ಸಂರಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಫ್ತಾಬ್ ಮತ್ತು ಶ್ರದ್ಧಾ ಡೇಟಿಂಗ್ ಸೈಟ್‌ನಲ್ಲಿ ಭೇಟಿಯಾದರು ಮತ್ತು ಸಂಬಂಧವು ಬೆಳೆದಂತೆ ಛತ್ತರ್‌ಪುರದ ಬಾಡಿಗೆ ವಸತಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಶ್ರದ್ಧಾ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಫ್ತಾಬ್ ಗಾಗಿ ಶ್ರದ್ಧಾ ಕುಟುಂಬವನ್ನೇ ಎದುರು ಹಾಕಿಕೊಂಡು ಅವನೊಂದಿಗೆ ವಾಸಿಸಲು ಪ್ರಾರಂಭಿಸಿದ್ದಳು. ಆದರೆ ಕುಟುಂಬಸ್ಥರು ಮಾತ್ರ ಶ್ರದ್ಧಾ ಬಗ್ಗೆ ಆಕೆಯ ಸ್ನೇಹಿತರ ಮೂಲಕ ಮಾಹಿತಿ ಪಡೆಯುತ್ತಿದ್ದರು. ಕೆಲ ತಿಂಗಳುಗಳಿಂದ ಶ್ರದ್ಧಾ ಕರೆಗೆ ಸಿಗುತ್ತಿಲ್ಲ ಎಂದು ಸ್ನೇಹಿತರು ಹೇಳಿದಾಗ ಕುಟುಂಬಸ್ಥರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೇಹದ ತುಂಡುಗಳು ಪತ್ತೆ
ಶ್ರದ್ಧಾ ಅವರ ತಂದೆಯಿಂದ ದೂರಿನ ಸ್ವೀಕೃತಿಯ ಮೇರೆಗೆ ದೆಹಲಿ ಪೊಲೀಸರು ನವೆಂಬರ್ 10 ರಂದು ಎಫ್ಐಆರ್ ದಾಖಲಿಸಿದರು. ಆರೋಪಿ ಅಫ್ತಾಬ್ ನನ್ನು ಬಂಧಿಸಿದರು. ವಿಚಾರಣೆಯ ವೇಳೆ ಅಫ್ತಾಬ್ ಮೇ 18 ರಂದು ಶ್ರದ್ಧಾಳನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ನಂತರ ಅವನು ದೇಹವನ್ನು ಎಲ್ಲಿ ವಿಲೇವಾರಿ ಮಾಡಿದ್ದಾನೆಂದು ಹುಡುಕಾಟ ಶುರುವಾಗಿದೆ. ಬಳಿಕ ಒಂದೊಂದು ದಿನ ಒಂದೊಂದು ಕಡೆ ದೇಹದ ತುಂಡುಗಳು ಸಿಕ್ಕಿವೆ. ಈಗ ಹರ್ಯಾಣದ ಫರಿದಾಬಾದ್‌ನ ಅರಣ್ಯ ಪ್ರದೇಶದಲ್ಲಿ ಶ್ರದ್ಧಾಳ ಮೃತ ದೇಹ ಎಂದು ಶಂಕಿಸಲಾದ ದೇಹದ ತುಂಡುಗಳು ಸಿಕ್ಕಿವೆ. ವಿಚಾರಣೆ ಬಳಿಕ ಇದು ತಿಳಿಯಲಿದೆ.












Click it and Unblock the Notifications