Subhashini Mistry: 4 ಮಕ್ಕಳ ತಾಯಿ, ಚಿಕ್ಕ ವಯಸ್ಸಿನಲ್ಲೇ ವಿಧವೆ; ತರಕಾರಿ ಮಾರಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸಾಧಕಿ

Subhashini Mistry Success Story: ಕೆಲವೊಮ್ಮೆ ಬಾಳಿನಲ್ಲಿ ತುಂಬಾ ನೊಂದು ಬೆಂದವರು, ದೇಶವೇ ಗಮನ ಸೆಳೆಯುವಂಥ ಸಾಧನೆ ಮಾಡಿ ಅಚ್ಚರಿ, ಹೆಮ್ಮೆ ಮೂಡಿಸುತ್ತಾರೆ. ಪಶ್ಚಿಮ ಬಂಗಾಳದ ಸುಭಾಸಿನಿ ಮಿಸ್ಟ್ರಿ ಅಂಥ ಒಬ್ಬ ಮಹಾನ್‌ ಮಹಿಳೆ. ಒಬ್ಬ ಮಹಿಳೆಯ ಜೀವನದಲ್ಲಿ ಎದುರಾದ ದೊಡ್ಡ ನೋವೇ ಮುಂದೆ ಸಾವಿರಾರು ಬಡವರ ಪಾಲಿಗೆ ಆಶಾಕಿರಣವಾಗಬಹುದು ಎಂಬುದಕ್ಕೆ ಅವರ ಬದುಕು ಅಪರೂಪದ ಉದಾಹರಣೆ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಅವರು, ನಾಲ್ಕು ಮಕ್ಕಳ ಜವಾಬ್ದಾರಿ ಹೊತ್ತುಕೊಂಡು ಬದುಕಿನೊಂದಿಗೆ ಹೋರಾಡಿದರು. ಆದರೆ ತಮ್ಮ ಕುಟುಂಬದ ಸಂಕಷ್ಟವನ್ನು ಮೀರಿ ಯೋಚಿಸಿದ ಅವರು, ಬಡವರಿಗೆ ಕೈಗೆಟುಕುವ ಚಿಕಿತ್ಸೆ ಸಿಗಬೇಕು ಎಂಬ ಕನಸನ್ನು ಸಾಕಾರಗೊಳಿಸಿದರು.

Subhashini Mistry Life Story Widowed Young With Four Children She Sold Vegetables and Built a Hospital for the Poor

ಸುಭಾಸಿನಿ ಮಿಸ್ಟ್ರಿ ಜನಿಸಿದ್ದು ಪಶ್ಚಿಮ ಬಂಗಾಳದ ಬಡ ರೈತ ಕುಟುಂಬದಲ್ಲಿ. ಕುಟುಂಬದಲ್ಲಿ 14 ಮಕ್ಕಳು. ಬಾಲ್ಯದಿಂದಲೇ ಆರ್ಥಿಕ ಸಂಕಷ್ಟ ಕಂಡು ಬೆಳೆದ ಜೀವ. 12ನೇ ವಯಸ್ಸಿನಲ್ಲೇ ಅವರ ವಿವಾಹವಾಯಿತು. 20ರ ಹರೆಯಕ್ಕೆ ನಾಲ್ಕು ಮಕ್ಕಳ ತಾಯಿಯಾಗಿದ್ದರು. ಜೀವನ ಹೇಗೋ ಸಾಗುತ್ತಿದ್ದಾಗ 1971ರಲ್ಲಿ ಅವರ ಕುಟುಂಬಕ್ಕೆ ದೊಡ್ಡ ಆಘಾತ ಎದುರಾಯಿತು. ಪತಿ ಅನಾರೋಗ್ಯಕ್ಕೀಡಾದರು. ಚಿಕಿತ್ಸೆ ಪಡೆಯಲು ಬೇಕಾದ ಹಣ ಅವರ ಬಳಿ ಇರಲಿಲ್ಲ. ಕೊನೆಗೆ ಪತಿಯನ್ನು ಕಳೆದುಕೊಂಡಾಗ ಸುಭಾಸಿನಿ ಅವರಿಗೆ ಇನ್ನೂ 20ರ ಹರೆಯದ ಆಸುಪಾಸು ಮಾತ್ರ.

ಪತಿ ಕುಟುಂಬದ ಹೊತ್ತುಹೊತ್ತಿನ ಊಟದ ಏಕೈಕ ಆಧಾರವಾಗಿದ್ದರು. ಅವರ ನಿಧನದ ನಂತರ ನಾಲ್ಕು ಮಕ್ಕಳನ್ನು ಸಾಕುವ ಹೊಣೆ ಸಂಪೂರ್ಣವಾಗಿ ಸುಭಾಸಿನಿ ಅವರ ಹೆಗಲಿಗೆ ಬಂತು. ಶಿಕ್ಷಣವೂ ಇರಲಿಲ್ಲ, ಕೈಯಲ್ಲಿ ಹಣವೂ ಇರಲಿಲ್ಲ. ಬದುಕಲು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಎದುರಾಯಿತು.

ಮನೆಮನೆ ಕೆಲಸ, ಬೀದಿಯಲ್ಲಿ ತರಕಾರಿ ಮಾರಿದ Subhashini Mistry

ಸುಭಾಸಿನಿ ಮನೆಕೆಲಸಕ್ಕೆ ಸೇರಿದರು. ಪಾತ್ರೆ ತೊಳೆಯುವುದು, ನೆಲ ಒರೆಸುವುದು ಸೇರಿದಂತೆ ಸಿಕ್ಕ ಕೆಲಸವನ್ನೆಲ್ಲ ಮಾಡಿದರು. ನಂತರ ಕೂಲಿ ಕೆಲಸಕ್ಕೂ ಇಳಿದರು. ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸಿದರು. ಅವರ ದುಡಿಮೆಯ ಬಹುಪಾಲು ಕುಟುಂಬದ ಬದುಕಿಗೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹೋಗುತ್ತಿತ್ತು.

ಆದರೆ ಸಂಪಾದಿಸಿದ ಹಣದಲ್ಲಿ ಸಾಧ್ಯವಾದಷ್ಟು ಸ್ವಲ್ಪ ಮೊತ್ತವನ್ನು ಅವರು ಪ್ರತ್ಯೇಕವಾಗಿ ಉಳಿಸುತ್ತಿದ್ದರು. ಆ ಹಣದ ಹಿಂದೆ ಒಂದು ದೊಡ್ಡ ಕನಸಿತ್ತು-ತಮ್ಮ ಪತಿ ಹಣದ ಕೊರತೆಯಿಂದ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಂತಹ ಪರಿಸ್ಥಿತಿ ಮತ್ತೊಬ್ಬ ಬಡ ಕುಟುಂಬಕ್ಕೆ ಎದುರಾಗಬಾರದು ಅಂತ.

ಸುಮಾರು ಎರಡು ದಶಕಗಳ ಕಾಲ ದುಡಿದು, ಉಳಿಸಿ, ಮಕ್ಕಳ ಭವಿಷ್ಯದ ಜೀವನಕ್ಕಾಗಿ (life) ಹೋರಾಡುತ್ತಲೇ ಅವರು ತಮ್ಮ ಕನಸನ್ನು ನಿಧಾನವಾಗಿ ಬೆಳೆಸಿಕೊಂಡರು. ವಿವಿಧ ವರದಿಗಳ ಪ್ರಕಾರ ಈ ಅವಧಿಯಲ್ಲಿ ಅವರು ಸುಮಾರು 20,000 ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ಹಣ ಉಳಿಸಿದ್ದರಂತೆ.

ಮಗನನ್ನು ವೈದ್ಯನನ್ನಾಗಿ ಮಾಡುವ ಕನಸು

ಸುಭಾಸಿನಿ ಅವರ ಕನಸು ಆಸ್ಪತ್ರೆ ಕಟ್ಟುವುದಷ್ಟೇ ಆಗಿರಲಿಲ್ಲ. ತಮ್ಮ ಮಕ್ಕಳಲ್ಲಿ ಕನಿಷ್ಠ ಒಬ್ಬರಾದರೂ ವೈದ್ಯರಾಗಬೇಕು ( doctor) ಎಂಬ ಆಸೆಯೂ ಅವರಲ್ಲಿತ್ತು. ಆರ್ಥಿಕ ಸಂಕಷ್ಟದ ನಡುವೆಯೂ ಮಗ ಅಜಯ್ ಮಿಸ್ಟ್ರಿ ಅವರ ಶಿಕ್ಷಣಕ್ಕೆ ಅವರು ಸಾಧ್ಯವಾದಷ್ಟು ನೆರವಾದರು.

ಅಜಯ್ ಮುಂದೆ ವೈದ್ಯರಾದರು. ತಾಯಿಯ ಹಲವು ವರ್ಷಗಳ ಹೋರಾಟದ ನಂತರ ಅವರ ಕನಸಿಗೆ ವೈದ್ಯಕೀಯ ಜ್ಞಾನವೂ ಕೈಜೋಡಿಸಿತು. ನಂತರ ತಾಯಿ-ಮಗ ಸೇರಿಕೊಂಡು ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಿದರು.

1990ರ ದಶಕದಲ್ಲಿ ಕನಸಿಗೆ ಮೊದಲ ರೂಪ

ಸುಮಾರು 1992ರಲ್ಲಿ ಸುಭಾಸಿನಿ ತಮ್ಮ ಪತಿಯ ಊರಾದ ಹನ್ಸ್‌ಪುಕುರ್ ಪ್ರದೇಶದಲ್ಲಿ ಭೂಮಿ ಖರೀದಿಸಿದರು. ಅಲ್ಲಿ ಬಡ ಜನರಿಗೆ ಚಿಕಿತ್ಸೆ ನೀಡುವ ಕೇಂದ್ರ ಸ್ಥಾಪಿಸುವ ಕೆಲಸ ಆರಂಭವಾಯಿತು. ಸ್ಥಳೀಯರು ಕೂಡ ಈ ಪ್ರಯತ್ನಕ್ಕೆ ಕೈಜೋಡಿಸಿದರು. ಹಣದ ಜೊತೆಗೆ ಕಟ್ಟಡ ಸಾಮಗ್ರಿ, ಶ್ರಮ ಮತ್ತು ಇತರ ರೀತಿಯ ಸಹಾಯವನ್ನು ಗ್ರಾಮಸ್ಥರು ನೀಡಿದರು.

ಮೊದಲಿಗೆ ಅದು ದೊಡ್ಡ ಆಸ್ಪತ್ರೆಯಾಗಿರಲಿಲ್ಲ. ಸಣ್ಣ ಗುಡಿಸಲಿನಂತಹ ವ್ಯವಸ್ಥೆಯಲ್ಲಿ ವೈದ್ಯಕೀಯ ಸೇವೆ ಆರಂಭವಾಯಿತು. ವೈದ್ಯರು ಕೂಡ ಸೇವಾ ಮನೋಭಾವದಿಂದ ಉಚಿತವಾಗಿ ಸಮಯ ನೀಡಲು ಮುಂದಾದರು.

ಆರಂಭದ ದಿನವೇ ನೂರಾರು ಮಂದಿ ಚಿಕಿತ್ಸೆಗಾಗಿ ಬಂದಿದ್ದರು ಎಂದು ವಿವಿಧ ವರದಿಗಳು ಹೇಳುತ್ತವೆ. ಹೀಗೆ ಒಂದು ಸಣ್ಣ ಕ್ಲಿನಿಕ್ ಕ್ರಮೇಣ ದೊಡ್ಡ ಆಸ್ಪತ್ರೆಯಾಗಿ ಬೆಳೆಯಿತು. ಇದೇ ಮುಂದೆ 'ಹ್ಯೂಮ್ಯಾನಿಟಿ ಹಾಸ್ಪಿಟಲ್' ಎಂಬ ಹೆಸರಿನಿಂದ ಗುರುತಿಸಿಕೊಂಡಿತು.

'ಹಣ ಇಲ್ಲವೆಂದು ಚಿಕಿತ್ಸೆ ನಿರಾಕರಿಸಬಾರದು'

ಹ್ಯೂಮ್ಯಾನಿಟಿ ಹಾಸ್ಪಿಟಲ್‌ನ ಉದ್ದೇಶವೇ ಬಡವರಿಗೆ ವೈದ್ಯಕೀಯ ಸೇವೆ ತಲುಪಿಸುವುದು. ಹಣದ ಕೊರತೆಯಿಂದ ಆಸ್ಪತ್ರೆಯ ಬಾಗಿಲಿನಿಂದ ಯಾರೂ ಹಿಂದಿರುಗಬಾರದು ಎಂಬುದು ಈ ಸಂಸ್ಥೆಯ ಮೂಲ ಆಶಯ.

ಆಸ್ಪತ್ರೆ ಆರಂಭವಾದ ನಂತರ ಸ್ಥಳೀಯ ಬಡವರಿಗೆ ಉಚಿತ ಅಥವಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಬೆಳೆಯಿತು. ನಂತರ ಆಸ್ಪತ್ರೆಯ ಸೇವೆಗಳು ವಿಸ್ತಾರಗೊಂಡವು. ವರದಿಗಳ ಪ್ರಕಾರ ಆಸ್ಪತ್ರೆ ವಿವಿಧ ವೈದ್ಯಕೀಯ ವಿಭಾಗಗಳೊಂದಿಗೆ ಕಾರ್ಯನಿರ್ವಹಿಸಿದ್ದು, ಅಗತ್ಯವಿರುವವರಿಗೆ ಉಚಿತ ಸೇವೆ ನೀಡುವ ವ್ಯವಸ್ಥೆಯನ್ನು ಮುಂದುವರಿಸಿದೆ.

ಸುಭಾಸಿನಿ ಅವರ ಕನಸು ಒಂದು ಗ್ರಾಮಕ್ಕೆ ಸೀಮಿತವಾಗಲಿಲ್ಲ. ಹ್ಯೂಮ್ಯಾನಿಟಿ ಟ್ರಸ್ಟ್ ಮೂಲಕ ಸುಂದರ್‌ಬನ್ಸ್ ಸೇರಿದಂತೆ ದೂರದ ಪ್ರದೇಶಗಳಲ್ಲೂ ವೈದ್ಯಕೀಯ ಶಿಬಿರಗಳನ್ನು ನಡೆಸುವ ಪ್ರಯತ್ನಗಳು ನಡೆದಿವೆ. ಪ್ರಕೃತಿ ವಿಕೋಪಗಳಿಂದ ಸಂಕಷ್ಟಕ್ಕೊಳಗಾದ ಜನರಿಗೂ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಟ್ರಸ್ಟ್ ತನ್ನ ಮಾಹಿತಿಯಲ್ಲಿ ತಿಳಿಸಿದೆ.

'ನನ್ನ ಕುಟುಂಬಕ್ಕೆ ಆಗಿದ್ದು ಇನ್ನೊಬ್ಬರ ಕುಟುಂಬಕ್ಕೆ ಆಗಬಾರದು' ಎಂಬ ಆಲೋಚನೆಯೇ ಸುಭಾಸಿನಿ ಅವರ ಹಲವು ವರ್ಷಗಳ ಪರಿಶ್ರಮಕ್ಕೆ ಶಕ್ತಿ ನೀಡಿತು. ಸುಭಾಸಿನಿ ಮಿಸ್ಟ್ರಿ ಅವರ ಸಮಾಜ ಸೇವೆ ರಾಷ್ಟ್ರಮಟ್ಟದಲ್ಲೂ ಗುರುತಿಸಲ್ಪಟ್ಟಿತು. 2017ರಲ್ಲಿ ಅವರು 'Women Transforming India' ಪ್ರಶಸ್ತಿಯ 12 ಪುರಸ್ಕೃತರಲ್ಲಿ ಒಬ್ಬರಾದರು. ನಂತರ 2018ರಲ್ಲಿ ಭಾರತ ಸರ್ಕಾರ ಅವರಿಗೆ ʼಪದ್ಮಶ್ರೀʼ ಪ್ರಶಸ್ತಿ ನೀಡಿ ಗೌರವಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+