Salt and Sugar- ಉಪ್ಪು ಸಕ್ಕರೆ ಹೆಚ್ಚು ತಿಂದರೆ ಜೀವಕ್ಕಾಗುವುದು ತೊಂದರೆ - ಹೊಸ ಅಧ್ಯಯನ ಎಚ್ಚರಿಕೆ!
ಭಾರತದಲ್ಲಿ ಬಳಕೆ ಮಾಡುವ ಉಪ್ಪು ಮತ್ತು ಸಕ್ಕರೆಯಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ಅಧ್ಯಯನದಿಂದ ಬಹಿರಂಗವಾಗಿದೆ. ಭಾರತೀಯ ಉಪ್ಪು ಮತ್ತು ಸಕ್ಕರೆ ಬ್ರಾಂಡ್‌ಗಳು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಪ್ಯಾಕ್ ಮಾಡಲಾದ ಅಥವಾ ಮಾಡಿರದ ಉಪ್ಪು ಹಾಗೂ ಸಕ್ಕರೆ ದೇಹಕ್ಕೆ ಹಾನಿಕಾರಕ ಎಂದು ಅಧ್ಯಯನ ವರದಿ ಮಾಡಿದೆ.
ಪರಿಸರ ಸಂಶೋಧನಾ ಸಂಸ್ಥೆ ಟಾಕ್ಸಿಕ್ಸ್ ಲಿಂಕ್ ನಡೆಸಿದ ಅಧ್ಯಯನದಿಂದ ಈ ಭಯಾನಕ ಸತ್ಯ ಹೊರಬಿದ್ದಿದೆ. ಈ ಸಂಶೋಧನೆಗಾಗಿ ಉಪ್ಪು, ಕಲ್ಲು ಉಪ್ಪು, ಸಮುದ್ರ ಉಪ್ಪು ಮತ್ತು ಸ್ಥಳೀಯ ಕಚ್ಚಾ ಉಪ್ಪು ಸೇರಿದಂತೆ 10 ವಿಧದ ಉಪ್ಪನ್ನು ಬಳಕೆ ಮಾಡಲಾಗಿತ್ತು. ಜೊತೆಗೆ ಐದು ವಿಧದ ಸಕ್ಕರೆಯನ್ನು ಆನ್ಲೈನ್ ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಸಿ ಪರೀಕ್ಷಿಸಲಾಗಿಯಿತು.

ಈ ಎಲ್ಲಾ ಉಪ್ಪು ಮತ್ತು ಸಕ್ಕರೆ ಮಾದರಿಗಳಲ್ಲಿ ಫೈಬರ್, ಪೆಲ್ಲೆಟ್, ಫಿಲ್ಮ್ಸ್ ಮತ್ತು ಫ್ರ್ಯಾಗ್‌ಮೆಂಟ್ ಹೀಗೆ ವಿವಿಧ ರೀತಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಇರುವುದು ಅಧ್ಯಯನ ಬಹಿರಂಗಪಡಿಸಿದೆ. ಈ ಮೈಕ್ರೋಪ್ಲಾಸ್ಟಿಕ್ ಅಂಶ 0.1 ಎಂಎಂನಿಂದ 5 ಎಂಎಂವರೆಗೆ ಇರುವುದು ಗೊತ್ತಾಗಿದೆ. ಉಪ್ಪಿನಲ್ಲಿ ಬಹು-ಬಣ್ಣದ ತೆಳುವಾದ ಫೈಬರ್ ಮತ್ತು ಫಿಲ್ಮ್ಸ್‌ಗಳ ರೂಪದಲ್ಲಿ ಅತ್ಯಧಿಕ ಮಟ್ಟದ ಮೈಕ್ರೋಪ್ಲಾಸ್ಟಿಕ್‌ಗಳು ಕಂಡುಬಂದಿವೆ.
ಏನಿದು ಮೈಕ್ರೋಪ್ಲಾಸ್ಟಿಕ್?
ಪ್ಲಾಸ್ಟಿಕ್ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಹಾನಿಕಾರಕವಾದ ವಸ್ತು. ಪರಿಸರ ಹಾಗೂ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಈ ಪ್ಲಾಸ್ಟಿಕ್‌ನ ಸಣ್ಣ ಕಣಗಳು ಆಹಾರ, ನೀರು ಮತ್ತು ಗಾಳಿಯ ಮೂಲಕ ದೇಹವನ್ನು ಸೇರುತ್ತವೆ. ದೇಹ ಸೇರುವ ಈ ಅಂಶ ಶ್ವಾಸಕೋಶ, ಹೃದಯ ಮತ್ತು ಎದೆಹಾಲು ಜೊತೆಗೆ ಭ್ರೂಣದಲ್ಲಿರುವ ಮಗುವಿನಲ್ಲೂ ಪತ್ತೆಯಾಗುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಮೈಕ್ರೋಪ್ಲಾಸ್ಟಿಕ್ ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ ಹೆಚ್ಚು ಹಾನಿ ಮಾಡುತ್ತದೆ ಎಂದು ವರದಿಗಳು ಹೇಳುತ್ತವೆ.
ಪ್ರತಿ ದಿನ ಸರಾಸರಿ ಭಾರತೀಯರು 10.98 ಗ್ರಾಂ ಉಪ್ಪು ಮತ್ತು ಸುಮಾರು 10 ಚಮಚ ಸಕ್ಕರೆಯನ್ನು ಸೇವಿಸುತ್ತಾರೆ ಎಂದು ಹಿಂದಿನ ಅಧ್ಯಯನಗಳು ಕಂಡುಕೊಂಡಿವೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಮಿತಿಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ಇತ್ತೀಚಿನ ಅಧ್ಯಯನ ಹಾಗೂ ಮಾನವನ ಸೇವನೆಯ ಉಪ್ಪು-ಸಕ್ಕರೆ ಪ್ರಮಾಣ ಮತ್ತು ಅದರಲ್ಲಿರುವ ಮೈಕ್ರೋಪ್ಲಾಸ್ಟಿಕ್ ಅಂಶ ಲೆಕ್ಕ ಹಾಕಿದರೆ ಇದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಧ್ಯಯನ ಹೇಳಿದೆ.

ಎಷ್ಟು ಪ್ರಮಾಣದಲ್ಲಿ ಮೈಕ್ರೋಪ್ಲಾಸ್ಟಿಕ್ ಇದೆ?
ಉಪ್ಪಿನ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಸಾಂದ್ರತೆಯು ಪ್ರತಿ ಕಿಲೋಗ್ರಾಂಗೆ 6.71 ರಿಂದ 89.15ಗಳವರೆಗೆ ಇರುತ್ತದೆ ಎಂದು ವರದಿ ಹೇಳಿದೆ.
ಅಯೋಡೈಸ್ಡ್ ಉಪ್ಪು ಅತಿ ಹೆಚ್ಚು ಮೈಕ್ರೊಪ್ಲಾಸ್ಟಿಕ್‌ಗಳನ್ನು ಹೊಂದಿರುತ್ತದೆ. ಅಂದರೆ ಪ್ರತಿ ಕಿಲೋಗ್ರಾಂಗೆ 89.15ನಷ್ಟು ಹೊಂದಿರುತ್ತದೆ. ಆದರೆ ಸಾವಯವ ಕಲ್ಲು ಉಪ್ಪಿನಲ್ಲಿ ಇದರ ಪ್ರಮಾಣ ಕಡಿಮೆಯಾಗಿ ಕಂಡು ಬಂದಿದೆ. ಪ್ರತಿ ಕಿಲೋಗ್ರಾಂಗೆ 6.70 ತುಣುಕುಗಳು ಕಂಡು ಬಂದಿವೆ ಎಂದು ಅಧ್ಯಯನ ಹೇಳಿದೆ.
ಸಕ್ಕರೆಯ ಮಾದರಿಗಳಲ್ಲಿ, ಮೈಕ್ರೊಪ್ಲಾಸ್ಟಿಕ್‌ಗಳ ಸಾಂದ್ರತೆಯು ಪ್ರತಿ ಕಿಲೋಗ್ರಾಮ್‌ಗೆ 11.85 ರಿಂದ 68.25ಗಳವರೆಗೆ ಇರುತ್ತದೆ. ಹೆಚ್ಚಿನ ಸಾಂದ್ರತೆಯು ಸಾವಯವವಲ್ಲದ ಸಕ್ಕರೆಯಲ್ಲಿ ಕಂಡುಬರುತ್ತದೆ.
"ನಮ್ಮ ಅಧ್ಯಯನದ ಉದ್ದೇಶ ಮೈಕ್ರೋಪ್ಲಾಸ್ಟಿಕ್ಸ್ ವಿಷಯದ ಕುರಿತು ಗಮನಹರಿಸುವುದು. ಹಾಗೆಯೇ ಈ ಕುರಿತು ನೀತಿ, ಕಾರ್ಯರೂಪನೆ ಮಾಡುವ ಮೂಲಕ ಇದರ ಅಪಾಯವನ್ನು ತಗ್ಗಿಸುವುದಾಗಿದೆ" ಎಂದು ಟಾಕ್ಸಿಕ್ಸ್ ಲಿಂಕ್ ಸಂಸ್ಥಾಪಕ ನಿರ್ದೇಶಕ ರವಿ ಅಗರ್ವಾಲ್ ತಿಳಿಸಿದ್ದಾರೆ. ಹೀಗಾಗಿ ಉಪ್ಪು ಹಾಗೂ ಸಕ್ಕರೆ ಸೇವನೆ ಬಗ್ಗೆ ಜನ ಜಾಗರೂಕರಾಗಿರುವುದು ತುಂಬಾ ಮುಖ್ಯವಾಗಿದೆ.












Click it and Unblock the Notifications