ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ
ಕಳೆದ ತಿಂಗಳು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸುವ ಮೊದಲು, ವಿಶಾಖಪಟ್ಟಣಂನ ರೈಲ್ವೆ ಯಾರ್ಡ್‌ನಲ್ಲಿ ಅಪರಿಚಿತ ವ್ಯಕ್ತಿಗಳು ರೈಲಿನ ಕೋಚ್‌ಗೆ ಕಲ್ಲು ತೂರಾಟ ನಡೆಸಿ ಗಾಜಿನ ಕಿಟಕಿಯನ್ನು ಒಡೆದಿದ್ದರು.
ಹೈದರಾಬಾದ್, ಫೆಬ್ರವರಿ 11: ಸಿಕಂದರಾಬಾದ್ ವಿಶಾಖಪಟ್ಟಣಂ ನಡುವೆ ಚಲಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಿದ್ದಾರೆ.
ಈ ಸಂಬಂಧ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ತನಿಖೆ ನಡೆಸುತ್ತಿದೆ. ಘಟನೆಯಲ್ಲಿ ಕಿಟಕಿಯೊಂದಕ್ಕೆ ಹಾನಿಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. "ನಾವು ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಕೋನಗಳಲ್ಲಿಯೂ ತನಿಖೆ ನಡೆಸುತ್ತಿದ್ದೇವೆ. ರೈಲು ವೈಜಾಗ್ ತಲುಪಿದ ನಂತರ ರೈಲ್ವೇ ಪೊಲೀಸ್ ಅಧಿಕಾರಿಗಳು ರೈಲು ಮತ್ತು ಹಾನಿಯ ಸ್ಥಿತಿಯನ್ನು ನಿರ್ಣಯಿಸುತ್ತಾರೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಸಿಪಿಆರ್ ರಾಕೇಶ್ ಹೇಳಿದ್ದಾರೆ.
ಕಳೆದ ತಿಂಗಳು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸುವ ಮೊದಲು, ವಿಶಾಖಪಟ್ಟಣಂನ ರೈಲ್ವೆ ಯಾರ್ಡ್‌ನಲ್ಲಿ ಅಪರಿಚಿತ ವ್ಯಕ್ತಿಗಳು ರೈಲಿನ ಕೋಚ್‌ಗೆ ಕಲ್ಲು ತೂರಾಟ ನಡೆಸಿ ಗಾಜಿನ ಕಿಟಕಿಯನ್ನು ಒಡೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 15 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣಂ ನಡುವಿನ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದರು.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಕೆಲವು ಮಕ್ಕಳು ರೈಲಿಗೆ ಕಲ್ಲು ತೂರಾಟ ನಡೆಸಿರಬಹುದು ಎಂದು ಊಹಿಸಲಾಗಿದೆ. ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಲ್ಲು ತೂರಾಟ ನಡೆದಿರುವುದು ಇದೇ ಮೊದಲಲ್ಲ. ಚಾಲನೆಗೂ ಮುನ್ನ ಅಪರಿಚಿತ ವ್ಯಕ್ತಿಗಳು ವಿಶಾಖಪಟ್ಟಣಂನ ರೈಲ್ವೇ ಯಾರ್ಡ್‌ನಲ್ಲಿ ರೈಲಿನ ಕೋಚ್‌ಗೆ ಕಲ್ಲು ತೂರಾಟ ನಡೆಸಿ ಎರಡು ಕಿಟಕಿ ಗಾಜುಗಳನ್ನು ಹಾನಿಗೊಳಿಸಿದ್ದರು.

ಇದು ಅತ್ಯಂತ ದುರದೃಷ್ಟಕರ: ಅಧಿಕಾರಿ
ಸಂಜೆ 6:30 ಕ್ಕೆ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿನ ಮೇಲೆ ಯಾರೋ ಕಲ್ಲು ತೂರಾಟ ನಡೆಸಿದ್ದರು. ಎರಡು ಕಿಟಕಿ ಗಾಜುಗಳು ಸಂಪೂರ್ಣವಾಗಿ ಒಡೆದು ಹೋಗಿದ್ದವು ಮತ್ತು ಅದನ್ನು ಬದಲಾಯಿಸಬೇಕಾಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಕುಮಾರ್ ಸತ್ಪತಿ ಹೇಳಿದ್ದರು.

ಸ್ಥಳ ಪರಿಶೀಲಿಸಿದ ರೈಲ್ವೆ ಸಿಬ್ಬಂದಿ
ಈಗ ಮಹಬೂಬಾಬಾದ್ ಮತ್ತು ಖಮ್ಮಂ ರೈಲು ನಿಲ್ದಾಣಗಳ ನಡುವೆ ಕೆಲ ಅಪರಿಚಿತ ದುಷ್ಕರ್ಮಿಗಳು ರೈಲಿಗೆ ಕಲ್ಲು ತೂರಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಲಟ್ ಎಚ್ಚರಿಸಿದ ಪ್ರಯಾಣಿಕರು
ಸಂಜೆ 4.57 ಕ್ಕೆ ಸಿಕಂದರಾಬಾದ್‌ನಿಂದ 457 ಕಿ.ಮೀ ಮಾರ್ಗದಲ್ಲಿ ಬರುತ್ತಿದ್ದ ವಿಶಾಖಪಟ್ಟಣಂಗೆ ಹೋಗುವ ರೈಲಿಗೆ ಕಲ್ಲು ತೂರಲಾಗಿದೆ. ಪ್ರಯಾಣಿಕರು ಎಚ್ಚರಿಸಿದ ನಂತರ, ಪೈಲಟ್ ರೈಲನ್ನು ನಿಲ್ಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಹಬೂಬಾಬಾದ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನಿಖೆಗೆ ವಿಶೇಷ ತಂಡ ರಚನೆ
ವಾರಂಗಲ್ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಇನ್‌ಸ್ಪೆಕ್ಟರ್ ಟಿಎಸ್‌ಆರ್ ಕೃಷ್ಣ, ರೈಲಿಗೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ. ಘಟನೆಯ ತನಿಖೆಗೆ ವಿಶೇಷ ತಂಡಗಳನ್ನು ಸಹ ರಚಿಸಲಾಗಿದೆ ಎಂದರು. ಏತನ್ಮಧ್ಯೆ, ಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ಶುಕ್ರವಾರ ಫೆಬ್ರವರಿ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಿಂದ ಎರಡು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಇದು ಮುಂಬೈನಿಂದ ಸೊಲ್ಲಾಪುರ ಹಾಗೂ ಶಿರಡಿ ನಡುವೆ ಸಂಚರಿಸುತ್ತದೆ.












Click it and Unblock the Notifications