ಭಾರತೀಯ ರೈಲ್ವೆಯ ಹೊಸ 'RailOne App' ಬಳಸುವುದು ಹೇಗೆ? ಮಾಹಿತಿ ಇಲ್ಲಿದೆ
ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ ಕೋಟ್ಯಂತರ ಪ್ರಯಾಣಿಕರ ಅನುಕೂಲಕ್ಕಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಹುನಿರೀಕ್ಷಿತ ರೈಲ್‌ಒನ್ ಆ್ಯಪ್(RailOne App) ಈಗ ಭಾರಿ ಜನಪ್ರಿಯತೆ ಪಡೆಯುತ್ತಿದೆ. ಈ ಹಿಂದೆ ಪ್ರಯಾಣಿಕರು ರಿಸರ್ವೇಶನ್ ಟಿಕೆಟ್ ಬುಕಿಂಗ್‌ಗೆ IRCTC Rail Connect, ಜನರಲ್ ಟಿಕೆಟ್‌ಗೆ UTS, ರೈಲು ಎಲ್ಲಿದೆ ಎಂದು ತಿಳಿಯಲು NTES, ಊಟ ಆರ್ಡರ್ ಮಾಡಲು Food on Track, ಮತ್ತು ದೂರು ನೀಡಲು ರೈಲ್ ಮದದ್ (Rail Madad) ಹೀಗೆ ಹತ್ತಾರು ಆ್ಯಪ್ ಗಳನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಿತ್ತು. ಇದರಿಂದ ಮೊಬೈಲ್ ಸ್ಟೋರೇಜ್ ತುಂಬುವುದರ ಜೊತೆಗೆ, ಪದೇಪದೇ ಪಾಸ್‌ವರ್ಡ್ ಹಾಕುವ ಕಿರಿಕಿರಿ ಇರುತ್ತಿತ್ತು.
ಆದರೆ, ಈಗ ಈ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್ (CRIS) ಈ ಸೂಪರ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಹಾಗಾದರೆ, ಈ ರೈಲ್‌ಒನ್ ಆ್ಯಪ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡುವುದು, ರಿಜಿಸ್ಟರ್ ಮಾಡುವುದು ಹಾಗೂ ದೈನಂದಿನ ಪ್ರಯಾಣಕ್ಕೆ ಸುಲಭವಾಗಿ ಬಳಸುವುದು ಹೇಗೆ? ಎನ್ನುವ ಹಂತ-ಹಂತದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಂತ 1: ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ?
ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ 'ಗೂಗಲ್ ಪ್ಲೇ ಸ್ಟೋರ್' ಅಥವಾ ಆಪಲ್ ಐಫೋನ್‌ನಲ್ಲಿರುವ 'ಆ್ಯಪ್ ಸ್ಟೋರ್' ಓಪನ್ ಮಾಡಿ. ಸರ್ಚ್ ಬಾರ್‌ನಲ್ಲಿ 'RailOne' ಎಂದು ಟೈಪ್ ಮಾಡಿ. ಅಧಿಕೃತ ಭಾರತೀಯ ರೈಲ್ವೆ (IRCTC / CRIS) ಅಭಿವೃದ್ಧಿಪಡಿಸಿರುವ ಆ್ಯಪ್ ಅನ್ನು ಗುರುತಿಸಿ, ಇನ್‌ಸ್ಟಾಲ್ (Install) ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 2: ರಿಜಿಸ್ಟ್ರೇಷನ್ ಪ್ರಕ್ರಿಯೆ
ಆ್ಯಪ್ ಡೌನ್‌ಲೋಡ್ ಆದ ನಂತರ ಅದನ್ನು ಓಪನ್ ಮಾಡಿ. ಇಲ್ಲಿ ನಿಮಗೆ Login, Sign Up (New User Registration) ಮತ್ತು Guest ಎಂಬ ಮೂರು ಪ್ರಮುಖ ಆಯ್ಕೆಗಳು ಕಾಣಿಸುತ್ತವೆ.
ಹಳೇ ಬಳಕೆದಾರರಾಗಿದ್ದರೆ: ನೀವು ಈಗಾಗಲೇ IRCTC ಅಥವಾ UTS ಆ್ಯಪ್‌ಗಳಲ್ಲಿ ಅಕೌಂಟ್ ಹೊಂದಿದ್ದರೆ, ಹೊಸದಾಗಿ ಖಾತೆ ತೆರೆಯುವ ಅಗತ್ಯವಿಲ್ಲ. ಅದೇ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ನೇರವಾಗಿ ಲಾಗಿನ್ ಆಗಬಹುದು .
ಹೊಸ ಬಳಕೆದಾರರಾಗಿದ್ದರೆ: 'Sign Up' ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಪೂರ್ಣ ಹೆಸರು ಮುಂತಾದ ವಿವರಗಳನ್ನು ನಮೂದಿಸಿ. ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ (OTP) ಯನ್ನು ನಮೂದಿಸುವ ಮೂಲಕ ಖಾತೆಯನ್ನು ಯಶಸ್ವಿಯಾಗಿ ವೆರಿಫೈ ಮಾಡಿ.
ಇನ್ನೂ, ತ್ವರಿತ ಲಾಗಿನ್‌ಗಾಗಿ ನೀವು 4-ಅಂಕಿಯ ಎಂ-ಪಿನ್ (mPIN) ಸೆಟ್ ಮಾಡಿಕೊಳ್ಳಬಹುದು. ಅಥವಾ ಫಿಂಗರ್‌ಪ್ರಿಂಟ್ ಹಾಗೂ ಫೇಸ್ ಐಡಿ ಮೂಲಕವೂ ಲಾಗಿನ್ ಆಗುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಎನೇಬಲ್ ಮಾಡಿಕೊಳ್ಳಬಹುದು.
ಹಂತ 3: ರೈಲ್‌ಒನ್ ಆ್ಯಪ್‌ನ ಪ್ರಮುಖ ಸೇವೆಗಳನ್ನು ಬಳಸುವುದು ಹೇಗೆ?
1. ಟಿಕೆಟ್ ಬುಕಿಂಗ್ : ಮುಖಪುಟದಲ್ಲಿರುವ 'Book Tickets' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಮೂರು ಆಯ್ಕೆಗಳಿರುತ್ತವೆ: ರಿಸರ್ವ್ಡ್ (Reserved), ಜನರಲ್ ಟಿಕೆಟ್ (Unreserved) ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್. ರಿಸರ್ವೇಶನ್ ಟಿಕೆಟ್ ಬೇಕಿದ್ದರೆ, ನೀವು ಹೊರಡುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣವನ್ನು ನಮೂದಿಸಿ, ದಿನಾಂಕ ಆಯ್ಕೆ ಮಾಡಿ ಸೀಟ್ ಲಭ್ಯತೆ ಚೆಕ್ ಮಾಡಿ. ಪ್ರಯಾಣಿಕರ ವಿವರಗಳನ್ನು ಸೇರಿಸಿ, ಯುಪಿಐ (UPI), ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಆರ್-ವಾಲೆಟ್ ಮೂಲಕ ಸುಲಭವಾಗಿ ಹಣ ಪಾವತಿಸಿ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳಬಹುದು.
2. ಲೈವ್ ರೈಲು ಟ್ರ್ಯಾಕಿಂಗ್ (Track Train): ನಿಮ್ಮ ರೈಲು ಪ್ರಸ್ತುತ ಎಲ್ಲಿದೆ, ಎಷ್ಟು ತಡವಾಗಿ ಬರುತ್ತಿದೆ ಎಂಬುದನ್ನು ತಿಳಿಯಲು 'Track Train' ಆಯ್ಕೆಯನ್ನು ಬಳಸಿ. ಇಲ್ಲಿ ನಿಮ್ಮ ರೈಲಿನ ನಂಬರ್ ಅಥವಾ ಹೆಸರು ನಮೂದಿಸಿದರೆ, ರೈಲಿನ ನಿಖರವಾದ ಲೈವ್ ಲೊಕೇಶನ್, ತಲುಪುವ ಅಂದಾಜು ಸಮಯ (ETA) ಹಾಗೂ ಅದು ಯಾವ ಪ್ಲಾಟ್‌ಫಾರ್ಮ್‌ಗೆ ಬರಲಿದೆ ಎಂಬ ಲೈವ್ ಮಾಹಿತಿ ಸಿಗುತ್ತದೆ.
3. ಕೋಚ್ ಪೊಸಿಷನ್ (Coach Position): ರೈಲ್ವೆ ನಿಲ್ದಾಣದಲ್ಲಿ ನಿಮ್ಮ ಬೋಗಿ ಎಲ್ಲಿ ಬರುತ್ತದೆ ಎಂದು ಗೊಂದಲಕ್ಕೀಡಾಗಿ ಓಡಾಡುವುದನ್ನು ತಪ್ಪಿಸಲು ಈ ಫೀಚರ್ ಅತ್ಯುತ್ತಮವಾಗಿದೆ. ಆ್ಯಪ್‌ನಲ್ಲಿ 'Coach Position' ಮೇಲೆ ಕ್ಲಿಕ್ ಮಾಡಿ ರೈಲಿನ ನಂಬರ್ ಹಾಕಿದರೆ, ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಬೋಗಿ ನಿಖರವಾಗಿ ಎಲ್ಲಿ ನಿಲ್ಲಲಿದೆ ಎನ್ನುವ ಗ್ರಾಫಿಕಲ್ ಚಿತ್ರಣ ಲಭ್ಯವಾಗುತ್ತದೆ. ವಯಸ್ಸಾದವರಿಗೆ ಹಾಗೂ ದಿವ್ಯಾಂಗರಿಗೆ ಇದು ಹೆಚ್ಚು ಉಪಯುಕ್ತವಾಗಿದೆ.
4. ಊಟ ಆರ್ಡರ್ ಮಾಡುವುದು (Order Food): ಪ್ರಯಾಣದ ಮಧ್ಯೆ ಬಿಸಿಬಿಸಿ ಹಾಗೂ ರುಚಿಯಾದ ಊಟ ಬೇಕೆನಿಸಿದರೆ, 'Order Food' ವಿಭಾಗಕ್ಕೆ ಹೋಗಿ ನಿಮ್ಮ PNR ನಂಬರ್ ನಮೂದಿಸಿ. ದಾರಿಯಲ್ಲಿ ಸಿಗುವ ಪ್ರಮುಖ ನಿಲ್ದಾಣಗಳಲ್ಲಿ ಲಭ್ಯವಿರುವ ಐಆರ್‌ಸಿಟಿಸಿ (IRCTC) ಅನುಮೋದಿತ ರೆಸ್ಟೋರೆಂಟ್‌ಗಳ ಪಟ್ಟಿ ಕಾಣಿಸುತ್ತದೆ. ನಿಮ್ಮಿಷ್ಟದ ಮೆನು ಆಯ್ಕೆ ಮಾಡಿ ಆನ್‌ಲೈನ್ ಪೇಮೆಂಟ್ ಮಾಡಿದರೆ, ಊಟ ನೇರವಾಗಿ ನಿಮ್ಮ ಸೀಟ್‌ಗೇ ಡೆಲಿವರಿ ಆಗುತ್ತದೆ.
5. ಪಿಎನ್‌ಆರ್ ಸ್ಟೇಟಸ್ ಮತ್ತು ಟಿಕೆಟ್ ರದ್ದತಿ (PNR Status & Refund): ಆ್ಯಪ್‌ನ 'My Bookings' ವಿಭಾಗದಲ್ಲಿ ನೀವು ಬುಕ್ ಮಾಡಿದ ಎಲ್ಲ ಟಿಕೆಟ್‌ಗಳ ಹಿಸ್ಟರಿ ಇರುತ್ತದೆ. ಇಲ್ಲಿ ನೀವು ಟಿಕೆಟ್ ಕನ್ಫರ್ಮ್ ಆಗಿದೆಯೇ ಎಂದು ಪಿಎನ್‌ಆರ್ ಸ್ಟೇಟಸ್ ಪರಿಶೀಲಿಸಬಹುದು. ಅನಿವಾರ್ಯ ಕಾರಣಗಳಿಂದ ಪ್ರಯಾಣ ರದ್ದಾದರೆ, ಇದೇ ವಿಭಾಗದಲ್ಲಿ ಕೇವಲ ಒಂದು ಕ್ಲಿಕ್ ಮೂಲಕ ಟಿಕೆಟ್ ಕ್ಯಾನ್ಸಲ್ ಮಾಡಬಹುದು. ರೈಲ್ವೆ ನಿಯಮಾವಳಿಯ ಪ್ರಕಾರ ಮರುಪಾವತಿ ಮೊತ್ತವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಅಥವಾ ಆರ್-ವಾಲೆಟ್‌ಗೆ ಜಮೆಯಾಗುತ್ತದೆ.
6. ಆರ್-ವಾಲೆಟ್ ಮತ್ತು ರೈಲ್ ಮದದ್ (R-Wallet & Rail Madad): ಈ ಆ್ಯಪ್‌ನಲ್ಲಿ 'R-Wallet' ಎಂಬ ಇನ್-ಬಿಲ್ಟ್ ಡಿಜಿಟಲ್ ಪರ್ಸ್ ವ್ಯವಸ್ಥೆಯಿದೆ. ಇದಕ್ಕೆ ಮುಂಚಿತವಾಗಿಯೇ ಹಣ ಸೇರಿಸಿಟ್ಟುಕೊಂಡು ಟಿಕೆಟ್ ಬುಕ್ ಮಾಡಿದರೆ, ಪಾವತಿ ಪ್ರಕ್ರಿಯೆ ವೇಗವಾಗಿ ಆಗುತ್ತದೆ. ಜೊತೆಗೆ ಜನರಲ್ ಟಿಕೆಟ್‌ಗಳ ಮೇಲೆ ಶೇ.3ರಷ್ಟು ರಿಯಾಯಿತಿ ಕೂಡ ಸಿಗುತ್ತದೆ. ಇನ್ನು ಪ್ರಯಾಣದ ವೇಳೆ ರೈಲಿನಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಅಥವಾ ಇತರೆ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೆ, 'ರೈಲ್ ಮದದ್' ವಿಭಾಗದ ಮೂಲಕ ತಕ್ಷಣವೇ ದೂರು ದಾಖಲಿಸಬಹುದು.
ಒಟ್ಟಾರೆಯಾಗಿ, ಈ ರೈಲ್‌ಒನ್ ಆ್ಯಪ್ ನಿಮ್ಮ ರೈಲು ಪ್ರಯಾಣವನ್ನು ಮತ್ತಷ್ಟು ಡಿಜಿಟಲ್, ಸರಳ ಮತ್ತು ಸುಗಮಗೊಳಿಸುತ್ತದೆ. ಹತ್ತಾರು ಆ್ಯಪ್‌ಗಳ ಗೊಂದಲ ಬೇಡ ಎನ್ನುವವರು, ಒಂದೇ ಟ್ಯಾಪ್‌ನಲ್ಲಿ ಭಾರತೀಯ ರೈಲ್ವೆಯ ಎಲ್ಲ ಸೇವೆಗಳನ್ನು ಪಡೆಯಲು ಇಂದೇ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications