Tirupati Temple: ತಿರುಪತಿ ದೇವಾಲಯದಲ್ಲಿ ಕಾಲ್ತುಳಿತ, 6 ಭಕ್ತರು ಸಾವು
ಅಮರಾವತಿ, ಜನವರಿ 08: ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಆರು ಭಕ್ತರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದೇವಾಲಯದಲ್ಲಿ ವೈಕುಂಠ ಏಕಾದಶಿ ದರ್ಶನದ ವಿಶೇಷ ಟಿಕೆಟ್ ಪಡೆಯುವ ವೇಳೆ ಈ ದುರಂತ ಸಂಭವಿಸಿದೆ.
ಬುಧವಾರ ರಾತ್ರಿ ತಿರುಪತಿ ತಿರುಮಲ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಶೇಷ ದರ್ಶನದ ಟಿಕೆಟ್ ಪಡೆಯುವ ಸಂದರ್ಭದ ನೂಕು ನುಗ್ಗಲು ಉಂಟಾಗಿದೆ. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಸೇರಿ ಆರು ಭಕ್ತರು ಮೃತಪಟ್ಟಿದ್ದಾರೆ.

ತಿರುಪತಿ ತಿರುಮಲ ದೇವಾಲಯದ ವಿಷ್ಣುನಿವಾಸಂ ಬಳಿ ಈ ಕಾಲ್ತುಳಿತ ಸಂಭವಿಸಿದೆ. ಬುಧವಾರ ಸಂಜೆಯಿಂದಲೇ ವೈಕುಂಠ ಏಕಾದಶಿ ದರ್ಶನ ದ್ವಾರದ ವಿಶೇಷ ಟಿಕೆಟ್ ಪಡೆಯಲು ಅಲಿಪಿರಿ ಸೇರಿದಂತೆ ದೇವಾಲಯದ ವಿವಿಧ ಪ್ರದೇಶಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಅಪಾರ ಸಂಖ್ಯೆಯ ಭಕ್ತರನ್ನು ನಿಯಂತ್ರಣ ಮಾಡಲು ವಿಫಲವಾದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ.
ರಾತ್ರಿ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ಪಡೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ತಮಿಳುನಾಡಿನ ಸೇಲಂ ಮೂಲದ ಮಹಿಳೆ ಸೇರಿದಂತೆ ಆರು ಭಕ್ತರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ಭಕ್ತರ ಗುರುತುಗಳು ಇನ್ನೂ ಸಹ ಪತ್ತೆಯಾಗಿಲ್ಲ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟಿಕೆಟ್ ಹಂಚಿಕೆ ರದ್ದು: ವೈಕುಂಠ ಏಕಾದಶಿ ದರ್ಶನದ ಟಿಕೆಟ್ ವಿತರಣೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ ಹಿನ್ನಲೆಯಲ್ಲಿ ಟಿಕೆಟ್ ಹಂಚಿಕೆಯನ್ನು ತತ್‌ಕ್ಷಣದಿಂದ ರದ್ದುಗೊಳಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಗುರುವಾರ ಮುಂಜಾನೆಯಿಂದ ಟಿಕೆಟ್ ನೀಡುವುದನ್ನು ಮುಂದುವರೆಸಲಿದೆ.
ಜನವರಿ 10 ರಿಂದ 19ರ ತನಕ ತಿರುಪತಿ ತಿರುಮಲ ದೇವಾಲಯದಲ್ಲಿ ವೈಕುಂಠ ಏಕಾದಶಿ ದರ್ಶನದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಟಿಕೆಟ್ ಪಡೆಯಲು ಇಂದು ಮುಂಜಾನೆಯಿಂದಲೇ ಸಾವಿರಾರು ಭಕ್ತರು ತಿರುಪತಿಯಲ್ಲಿ ಕಾದು ಕುಳಿತಿದ್ದರು. ಟಿಕೆಟ್ ನೀಡುವಾಗ ರಾತ್ರಿ ಕಾಲ್ತುಳಿತ ಸಂಭವಿಸಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಾಲ್ತುಳಿತ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಬೇಕು, ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಿ, ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಟಿಟಿಡಿ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ಪಡೆಯಲು ಉಂಟಾಗುವ ನೂಕು ನುಗ್ಗಲು ತಪ್ಪಿಸಲು 8 ಕೌಂಟರ್‌ಗಳಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಮಾಡಿದೆ. ಈ ಕೇಂದ್ರಗಳಲ್ಲಿ ನೂಕು ನುಗ್ಗಲು ತಪ್ಪಿಸಲು ಟಿಟಿಡಿ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜನೆ ಮಾಡಲಾಗಿತ್ತು. ಆದರೆ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿರುವ ಕಾರಣ ಅವರನ್ನು ನಿಯಂತ್ರಣ ಮಾಡುವುದು ಕಷ್ಟವಾಗಿ ಈ ದುರ್ಘಟನೆ ನಡೆದಿದೆ.












Click it and Unblock the Notifications