ಸ್ಪೈಸ್ ಜೆಟ್ ವಿಮಾನ ತಡೆದು ವಿವರಣೆ ಕೇಳಿದ್ದ ಪಾಕ್ ವಾಯು ಸೇನೆ
ನವದೆಹಲಿ, ಅಕ್ಟೋಬರ್ 17: ನವದೆಹಲಿಯಿಂದ ಕಾಬೂಲ್ ಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕಿಸ್ತಾನಿ ಯುದ್ಧ ವಿಮಾನಗಳು ಆಗಸದಲ್ಲೇ ತಡೆದು, ವಿವರಣೆ ಕೇಳಿದ ಘಟನೆ ಸೆಪ್ಟೆಂಬರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಡೆರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಗುರುವಾರ ತಿಳಿಸಿದ್ದಾರೆ.
ಮಿಲಿಟರಿ ವಿಮಾನವೋ ಅಥವಾ ನಾಗರಿಕ ವಿಮಾನವೋ ಎಂಬ ಗೊಂದಲದಲ್ಲಿ ಬೋಯಿಂಗ್ 737 ಪೈಲಟ್ ಬಳಿ ಪಾಕ್ ವಾಯುಸೇನೆಯಿಂದ ವಿವರಣೆ ಕೇಳಲಾಗಿದೆ. ಸೆಪ್ಟೆಂಬರ್ ಇಪ್ಪತ್ಮೂರನೇ ತಾರೀಕು ಈ ಘಟನೆ ನಡೆದಿದ್ದು, ಹಾರಾಟದಲ್ಲಿ ಇರುವಾಗಲೇ ಸ್ಪೈಸ್ ಜೆಟ್ ನಾಗರಿಕ ವಿಮಾನದ ಪೈಲಟ್ ನಿಂದ ಮಾಹಿತಿ ಪಡೆದ ನಂತರ, ಪಾಕಿಸ್ತಾನ ವಾಯು ಸೀಮೆಯ ತನಕ ವಾಯುಸೇನೆಯ ಬೆಂಗಾವಲು ಪಡೆ ಬಿಟ್ಟು ಬಂದಿದೆ.
ಸ್ಪೈಸ್ ಜೆಟ್ ವಿಮಾನವನ್ನು ಸೇನಾ ವಿಮಾನ ಎಂದು ತಪ್ಪಾಗಿ ತಿಳಿಯಲಾಗಿದೆ. ಆ ನಂತರ ವಿಮಾನವನ್ನು ಎರಡು F- 16 ಯುದ್ಧ ವಿಮಾನವು ಸುತ್ತುವರಿದು, ಪರಿಶೀಲಿಸಿವೆ. ಆ ಮೇಲೆ ಅರ್ಧ ಗಂಟೆ ಕಾಲ ಬೆಂಗಾವಲಾಗಿ ಬಂದಿವೆ. ನಾವು ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಸಾಧ್ಯವಿಲ್ಲ. ಏಕೆಂದರೆ, ಇದು ಎರಡು ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧದ ಸೂಕ್ಷ್ಮ ವಿಷಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೈಸ್ ಜೆಟ್ ವಿಮಾನದಲ್ಲಿ ನೂರಿಪ್ಪತ್ತು ಮಂದಿ ಪ್ರಯಾಣಿಕರಿದ್ದರು. ಅವರು ಪಾಕ್ ಯುದ್ಧ ವಿಮಾನಗಳನ್ನು ನೋಡಿದ್ದಾರೆ. ಆದರೆ ಕಿಟಕಿ ಗಾಜು ಮರೆ ಮಾಡುವಂತೆ ಸೂಚಿಸಲಾಗಿದೆ. ಕಾಬೂಲ್ ನಿಂದ ವಿಮಾನ ಹಿಂತಿರುಗುವಾಗ ತಡವಾಗಿದೆ. ಆದರೆ ಈಗ ಮಾಮೂಲಿನಂತೆ ಹಾರಾಟ ನಡೆಸಿದೆ. ಸ್ಪೈಸ್ ಜೆಟ್ ನ ವಿಮಾನವು ಪ್ರತಿ ದಿನ ಕಾಬೂಲ್ ಗೆ ಹಾರಾಟ ನಡೆಸುತ್ತದೆ.












Click it and Unblock the Notifications