Chandrayaan 3: ಚಂದ್ರಯಾನದ ಜೊತೆಗೆ ಪುಸ್ತಕವೂ ಲಾಂಚ್! ಕಾರಣ ತಿಳಿಯಿರಿ
ಶ್ರೀಹರಿಕೋಟಾ: ಇನ್ನೇನು ಕೆಲವೇ ನಿಮಿಷಗಳು ಅಷ್ಟೇ, ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಎಂದೂ ಮರೆಯಲಾಗದ ಇತಿಹಾಸ ಸೃಷ್ಟಿಸಲಿದೆ. ಆದ್ರೆ ಅದಕ್ಕೂ ಮೊದಲು ವಿಶೇಷವಾದ ಘಟನೆಗೆ 'ಚಂದ್ರಯಾನ-3'ರ ಲಾಂಚ್ ಪ್ಯಾಡ್ ಸಾಕ್ಷಿಯಾಗಿತ್ತು. ಚಂದ್ರಯಾನ ಗಗನ ನೌಕೆ ಉಡಾವಣೆಗೆ ಮೊದಲೇ ಭಾರತೀಯರಿಗಾಗಿ ವಿಶೇಷವಾದ ಪುಸ್ತಕ ಲಾಂಚ್ ಆಗಿದೆ.
ಅಂದಹಾಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಪಕ ಹಾಗೂ ಬರಹಗಾರ ವಿನೋದ್ ಮನಕರ್ ಬರೆದಿರುವ ಪುಸ್ತಕ, ಚಂದ್ರಯಾನ-3ರ ಲಾಂಚ್ ಪ್ಯಾಡ್ ಬಳಿ ರಿಲೀಸ್ ಆಗಿದೆ. ಈ ಮೂಲಕ ಮತ್ತೊಂದು ವಿಶೇಷ ಕ್ಷಣಕ್ಕೆ ಚಂದ್ರಯಾನ-3 ಲಾಂಚ್ ಪ್ಯಾಡ್ ಸಾಕ್ಷಿಯಾಗಿತ್ತು. ಪುಸ್ತಕವು ವೈಜ್ಞಾನಿಕ ಹಿನ್ನೆಲೆ ಹೊಂದಿದ್ದು, ವಿಜ್ಞಾನಕ್ಕೆ ಸಂಬಂಧಿಸಿದಂತೆ 50 ಲೇಖನಗಳ 'ಪ್ರಿಸಮ್: ದಿ ಆನ್‌ಸೆಸ್ಟ್ರಾಲ್ ಅಬೋಡ್ ಆಫ್ ರೈನ್‌ಬೋ' ಬುಕ್ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಲ್ಲಿ ಲಾಂಚ್ ಆಗಿದೆ. ಹೀಗೆ ವಿಜ್ಞಾನ ಪುಸ್ತಕಗಳ ಪ್ರಿಯರಿಗಾಗಿ ಚಂದ್ರಯಾನ-3ರ ಜೊತೆಗೆ ಮತ್ತೊಂದು ಗಿಫ್ಟ್ ಕೂಡ ಸಿಕ್ಕಿದೆ.

ಪುಸ್ತಕದ ವಿಶೇಷತೆ ಏನು ಗೊತ್ತಾ?
'ಪ್ರಿಸಮ್: ದಿ ಆನ್‌ಸೆಸ್ಟ್ರಾಲ್ ಅಬೋಡ್ ಆಫ್ ರೈನ್‌ಬೋ' ಪುಸ್ತಕ ಹಲವು ವೈಶಿಷ್ಟ್ಯತೆ ಹೊಂದಿದೆ. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ & ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಉನ್ನಿಕೃಷ್ಣನ್ ನಾಯರ್ ಈ ವಿಶೇಷ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಪುಸ್ತಕದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ಜೀವಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಮಾನವ ಶಾಸ್ತ್ರ, ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಡಾರ್ಕ್ ಸೈಟೂರಿಸಂ, ಕಪ್ಪು ಕುಳಿ ದೃಢೀಕರಣ, ಲೈಕಾ ನಾಯಿಯ ಮೊದಲ ಬಾಹ್ಯಾಕಾಶ ಪ್ರಯಾಣ ಸೇರಿ ಹಲವು ವಿಶೇಷ ಲೇಖನ ಮುದ್ರಣ ಆಗಿದೆ. ಈ ಮೂಲಕ ದೇಶದ ವೈಜ್ಞಾನಿಕ ಪುಸ್ತಕಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ಜಗತ್ತಿನ ಗಮನ ಭಾರತದ ಕಡೆಗೆ!
ಈ ಮಧ್ಯೆ 'ಚಂದ್ರಯಾನ-3'ರ ಉಡಾವಣೆ ಕ್ಷಣಕ್ಕೆ ಇಡೀ ಜಗತ್ತೇ ಕಾಯುತ್ತಿದ್ದು, ಕೆಲವೇ ನಿಮಿಷದಲ್ಲಿ ಆ ಕ್ಷಣ ಬರಲಿದೆ. 3900 ಕಿಲೋ ತೂಕವಿರುವ ಬಾಹ್ಯಾಕಾಶ ನೌಕೆ ಇನ್ನೇನು ಕೆಲ ಗಂಟೆಗಳಲ್ಲಿ ಲಾಂಚ್ ಆಗಲಿದೆ. ರಾಕೆಟ್ ಭೂಮಿಯಿಂದ 3,84,000 ಕಿಲೋಮೀಟರ್ ದೂರದಲ್ಲಿರುವ ಚಂದ್ರನತ್ತ ಹಾರಲಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಉಡಾಯಿಸುವ ಚಂದ್ರಯಾನ ನೌಕೆ ಲ್ಯಾಂಡ್ ಆಗಲಿದೆ.
ಭಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ್ದೇ ಹವಾ!
ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ಗಂಟೆಗಳಲ್ಲಿ ಬಾಹ್ಯಾಕಾಶಕ್ಕೆ ಹಾರಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಮತ್ತೊಂದು ವಿಶೇಷತೆ ಏನಂದ್ರೆ ಚಂದ್ರನ ಮೇಲೆ ನೀರು ಇದೆ ಎಂದಿದ್ದು ಇಸ್ರೋ. ಜಗತ್ತಿನಲ್ಲೇ ಮೊದಲ ಬಾರಿ 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು. ಈಗ ಎಲ್ಲಾ ಪ್ರಶ್ನೆಗಳಿಗೂ ಚಂದ್ರನ ಮೇಲೆ ಇಳಿದು ಉತ್ತರ ಕಂಡುಕೊಳ್ಳಲಿದೆ.
ಒಟ್ನಲ್ಲಿ ಶತಕೋಟಿ ಭಾರತೀಯರು ಉಸಿರು ಬಿಗಿಹಿಡಿದು ಕಾಯುತ್ತಿರುವ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮಾತ್ರವಲ್ಲ ಇಡೀ ಜಗತ್ತೇ ಈ ಕ್ಷಣಕ್ಕಾಗಿ ಕಾಯುತ್ತಿದ್ದು, ಭಾರತ ಮತ್ತು ಇಸ್ರೋ ಸಾಧನೆ ಹೊಸ ಇತಿಹಾಸವನ್ನೇ ನಿರ್ಮಿಸಲಿದೆ. ಭವಿಷ್ಯದಲ್ಲಿ ಭಾರತವು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳನ್ನು ಮೀರಿ ಬೆಳೆಯುವ ಮುನ್ಸೂಚನೆ 'ಚಂದ್ರಯಾನ -3'ರ ಮೂಲಕ ಸಿಗುತ್ತಿರುವುದು ವಿಶೇಷ.












Click it and Unblock the Notifications