Mahakumbh Mela 2025, ಪ್ರಯಾಗ್‌ರಾಜ್ ಮಹಾ ಕುಂಭಮೇಳ, ವಿಶೇಷ ಭಾರತ್ ಗೌರವ್ ರೈಲು
ಮುಂಬೈ, ಜನವರಿ, 01 : ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದಲ್ಲಿ ತಯಾರಿ ನಡೆಯುತ್ತಿದೆ. ಮಹಾ ಕುಂಭಮೇಳ-2025 ಜನವರಿ 13ರಿಂದ ಫೆಬ್ರವರಿ 26ರ ಮಹಾ ಶಿವರಾತ್ರಿ ತನಕ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಕೋಟ್ಯಾಂತರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ದೇಶದ ವಿವಿಧ ರಾಜ್ಯಗಳಿಂದ ಪ್ರಯಾಗ್‌ರಾಜ್‌ಗ್ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ರೈಲುಗಳು ಮಾತ್ರವಲ್ಲ ಭಾರತೀಯ ರೈಲ್ವೆಯ ಭಾರತ್ ಗೌರವ್ ರೈಲು ಸಹ ಸಂಚಾರ ನಡೆಸಲಿದೆ.
ಮಹಾ ಕುಂಭಮೇಳ-2025ರ ಅಂಗವಾಗಿ ಮಹಾರಾಷ್ಟ್ರದ ಪುಣೆಯಿಂದ ಭಾರತ್ ಗೌರವ್ ರೈಲು ಜನವರಿ 15ರಂದು ಹೊರಡಲಿದೆ ಎಂದು ಐಆರ್‌ಸಿಟಿಸಿ ಹೇಳಿದೆ. ಕೇಂದ್ರ ಸರ್ಕಾರದ ದೇಖೋ ಅಪನಾ ದೇಶ್ ಅಭಿಯಾನದ ಅಂಗವಾಗಿ ಈ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಣೆಯಿಂದ ರೈಲು ರಾತ್ರಿ 10 ಗಂಟೆಗೆ ಹೊರಡಲಿದೆ. ಭಾರತ್ ಗೌರವ್ ರೈಲು ಮಾತ್ರವಲ್ಲ ಮಹಾ ಕುಂಭಮೇಳ-2025ರ ಅಂಗವಾಗಿ 86 ವಿಶೇಷ ರೈಲುಗಳನ್ನು ಪ್ರಯಾಗ್‌ರಾಜ್‌ಗೆ ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಣೆಯಿಂದ ಒಟ್ಟು ಎರಡು ಭಾರತ್ ಗೌರವ್ ರೈಲುಗಳನ್ನು ಪ್ರಯಾಗ್‌ರಾಜ್‌ಗೆ ಓಡಿಸಲಾಗುತ್ತಿದೆ.
ವಿಶೇಷ ಸೌಲಭ್ಯಗಳು: ಪುಣೆ-ಪ್ರಯಾಗ್‌ರಾಜ್ ಭಾರತ್ ಗೌರವ್ ರೈಲುಗಳು ವಿಶೇಷ ಸೌಲಭ್ಯಗಳನ್ನು ಒಳಗೊಂಡಿದೆ. ಈ ರೈಲುಗಳು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿವೆ. ರೈಲು ಸಂಪೂರ್ಣ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ ಮತ್ತು ಆಹಾರ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಈ ರೈಲು ಪ್ರಯಾಣ 7 ರಾತ್ರಿ ಮತ್ತು 8 ಹಗಲು ಹೊತ್ತು ಒಳಗೊಂಡಿದೆ. ಈ ರೈಲಿನ ಮೂಲಕ ಪುಣೆ, ವಾರಣಾಸಿ, ಪ್ರಯಾಗ್‌ರಾಜ್, ಅಯೋಧ್ಯೆಗೆ ಭೇಟಿ ನೀಡಬಹುದು. ರೈಲು 7 ಸ್ಲೀಪರ್ ಬೋಗಿ, 3 3 ಟೈರ್ ಎಸಿ, 1 2 ಟೈರ್ ಎಸಿ, ಪ್ಯಾಂಟ್ರಿ ಕಾರ್ ಒಳಗೊಂಡಿದೆ.
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಇದನ್ನು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವ ಎಂದು ಅಂದಾಜಿಸಲಾಗಿದೆ. ಸುಮಾರು 45 ಕೋಟಿ ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಪುರಾಣಗಳ ಪ್ರಕಾರ ಕುಂಭಮೇಳ ಹರಿದ್ವಾರ, ಉಜ್ಜೈನಿ, ನಾಸಿಕ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಈ ಕ್ಷೇತ್ರಗಳು ಪವಿತ್ರ ನದಿಗಳಾದ ಗಂಗಾ, ಶಿಪ್ರಾ, ಗೋದಾವರಿ ನದಿಗಳ ತೀರದಲ್ಲಿವೆ.
12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯುತ್ತಿದೆ. 2025 ರಲ್ಲಿ ಜನವರಿ 13ರಿಂದ ಫೆಬ್ರವರಿ 26ರ ತನಕ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಭಕ್ತಿ, ಏಕತೆ ಮತ್ತು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಇದು ಎತ್ತಿಹಿಡಿಯಲಿದೆ.
ಕರ್ನಾಟಕದ ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ಮತ್ತು ಮೈಸೂರಿನಿಂದ ಪ್ರಯಾಗರಾಜ್‌ಗೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಈಗಾಗಲೇ ನೈಋತ್ಯ ರೈಲ್ವೆ ಈ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಗ್‌ರಾಜ್ ಮಹಾ ಕುಂಭಮೇಳ-2025ಕ್ಕೆ ರೈಲಿನಲ್ಲಿ ಸಾಗುವ ಭಕ್ತರಿಗೆ ಪ್ರಯಾಣ ಉಚಿತ ಎಂಬ ಸುದ್ದಿಯೊಂದು ಬಂದಿತ್ತು. ಆದರೆ ಈ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿತ್ತು. ಯಾವುದೇ ರೀತಿಯ ಉಚಿತ ಪ್ರಯಾಣ ಸೌಲಭ್ಯ ಇರುವುದಿಲ್ಲ ಎಂದು ಹೇಳಿತ್ತು. ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣ ಮಾಡುವುದು ನಿಷೇಧ. ರೈಲು ಕಾಯ್ದೆ ಮತ್ತು ನಿಯಮಗಳ ಪ್ರಕಾರ ಇದು ಶಿಕ್ಷಾರ್ಹ ಅಪರಾಧ ಎಂದು ಇಲಾಖೆ ಹೇಳಿತ್ತು.












Click it and Unblock the Notifications