ಲೋಕಸಭೆ, ವಿಧಾನಸಭೆ ಏಕಕಾಲದ ಚುನಾವಣೆಗೆ ಎಸ್‌ಪಿ, ಟಿಆರ್‌ಎಸ್ ಬೆಂಬಲ
ನವದೆಹಲಿ, ಜುಲೈ 8: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಭಾರತೀಯ ಕಾನೂನು ಆಯೋಗದ ಪ್ರಸ್ತಾವವನ್ನು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಕೆ. ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷಗಳು ಬೆಂಬಲಿಸಿವೆ.
ಆದರೆ, ಈ ಆಲೋಚನೆಗೆ ಬೆಂಬಲ ನೀಡಲು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ನಿರಾಕರಿಸಿದ್ದಾರೆ.
ದೇಶದಲ್ಲೆಡೆ ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಮಹತ್ವದ ವಿಚಾರದ ಬಗ್ಗೆ ಚರ್ಚಿಸುವ ಸಲುವಾಗಿ ಕಾನೂನು ಆಯೋಗವು ಶನಿವಾರ ಮತ್ತು ಭಾನುವಾರ ದೇಶದ ಪ್ರಮುಖ ರಾಜಕೀಯ ಪಕ್ಷಗಳ ಜತೆ ಸಭೆ ನಡೆಸಲಿದೆ.

ಸಮಾಜವಾದಿ ಪಕ್ಷವು ಏಕಕಾಲದ ಚುನಾವಣೆಯ ಪರವಾಗಿದೆ. ಆದರೆ ಅದು 2019ರಿಂದಲೇ ಆರಂಭವಾಗಬೇಕು. ಒಂದು ವೇಳೆ ಜನಪ್ರತಿನಿಧಿಗಳು ಪಕ್ಷದಿಂದ ಪಕ್ಷಕ್ಕೆ ಹಾರಲು ಆರಂಭಿಸಿದರೆ, ಕುದುರೆ ವ್ಯಾಪಾರ ನಡೆದರೆ, ಅವರ ವಿರುದ್ಧ ವಾರದೊಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್‌ಪಿ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.
ಕಾನೂನು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಚಂದ್ರಶೇಖರ ರಾವ್, ಈ ಯೋಜನೆಯನ್ನು ತಾವು ಬಲವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.
ಏಕಕಾಲಕ್ಕೆ ಎರಡೂ ಕಡೆ ಚುನಾವಣೆ ನಡೆಸುವುದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಹೀಗಾಗಿ ಈ ಪ್ರಸ್ತಾವಕ್ಕೆ ತಮ್ಮ ಕಟು ವಿರೋಧವಿದೆ ಎಂದು ಡಿಎಂಕೆ ಹೇಳಿದೆ.
ಸಂವಿಧಾನದಲ್ಲಿ ತಿದ್ದುಪಡಿ ತಂದು ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಎರಡು ಹಂತದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವವನ್ನು ಕಾನೂನು ಆಯೋಗ ಏಪ್ರಿಲ್‌ನಲ್ಲಿ ಮುಂದಿಟ್ಟಿತ್ತು.
ಎನ್‌ಡಿಎ ಮೈತ್ರಿ ಪಕ್ಷ ಶಿರೋಮಣಿ ಅಕಾಲಿ ದಳ, ಎಐಎಡಿಎಂಕೆ, ಬಿಜೆಪಿ ಪಕ್ಷಗಳು ಈ ಪ್ರಸ್ತಾವವನ್ನು ಬೆಂಬಲಿಸಿವೆ.
ಆದರೆ, ತೃಣಮೂಲ ಕಾಂಗ್ರೆಸ್, ಎಐಎಂಐಎಂ, ಎಐಯುಡಿಎಫ್ ಗೋವಾ ಫಾರ್ವರ್ಡ್ ಪಾರ್ಟಿಗಳು ಇದನ್ನು ವಿರೋಧಿಸಿವೆ.












Click it and Unblock the Notifications