ಸೈಕ್ಲೋನ್ ಮೋರಾದಿಂದ ಮುಂಗಾರು ಮತ್ತೆ ಮುಂದಕ್ಕೆ
ಬೆಂಗಳೂರು, ಮೇ 29 : ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ಮೋರಾ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೈರುತ್ಯ ಮುಂಗಾರು ಸ್ವಲ್ಪ ಮುಂದೆ ಹೋಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೊದಲಿನ ಲೆಕ್ಕಾಚಾರದ ಪ್ರಕಾರ ಮೇ 30ರಂದು ಕೇರಳಕ್ಕೆ ಮುಂಗಾರು ಅಧಿಕೃತವಾಗಿ ಆಗಮಿಸಬೇಕಿತ್ತು. 5 ದಿನಗಳ ನಂತರ ಕರ್ನಾಟಕಕ್ಕೆ ಮುಂಗಾರು ಆಗಮಿಸುತ್ತದೆ. ಆದರೆ, ಸೈಕ್ಲೋನ್ ಮೋರಾದಿಂದಾಗಿ ಮುಂಗಾರು ವಿಳಂಬವಾಗಬಹುದು.[ಮಳೆ- ಚಂಡಮಾರುತದ ಜುಗಲ್ ಬಂದಿಗೆ ತತ್ತರಿಸಿದ ಅರುಣಾಚಲ ಪ್ರದೇಶ]

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಈಶಾನ್ಯ ಭಾರತದ ರಾಜ್ಯಗಳಲ್ಲಿ ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದೆಂದೂ ಎಚ್ಚರಿಸಿದೆ.[ಕರ್ನಾಟಕಕ್ಕೂ ತಟ್ಟಿದ ವಾರ್ಧಾ ಚಂಡಮಾರುತ ಭೀತಿ!]
ಮುಂದಿನ 24 ಗಂಟೆಗಳಲ್ಲಿ ಸೈಕ್ಲೋನ್ ಮೋರಾ ಇನ್ನೂ ಉತ್ತರಕ್ಕೆ ಸಾಗಲಿದ್ದು, ಆಸ್ಸಾಂ ಮತ್ತು ಮೇಘಾಲಯ ರಾಜ್ಯಗಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಬಿರುಗಾಳಿ ಮುಂದೆ ಬಾಂಗ್ಲಾದೇಶದತ್ತ ಸಾಗಲಿದೆ.
ಮುಂಗಾರು ಸ್ವಲ್ಪ ಮುಂದೂಡುವ ಸಾಧ್ಯತೆಯಿದ್ದರೂ, ಕರ್ನಾಟಕದ ಕರಾವಳಿಯಲ್ಲಿ ದಟ್ಟ ಮೋಡಗಳು ಆಕ್ರಮಿಸಿಕೊಂಡಿದ್ದು, ಅಲ್ಲಲ್ಲಿ ಭಾರೀ ಮಳೆಯಾಗಲಿದೆ. ಅಲ್ಲದೆ, ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಕೂಡ ಮುಂದಿನ 5 ದಿನಗಳ ಕಾಲ ಮುಂಗಾರುಪೂರ್ವ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದಲ್ಲಿ ಮಳೆಯಾಗುತ್ತಿದ್ದರೂ ಕಲಬುರಗಿಯಲ್ಲಿ 41.3 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ದಾಖಲಾಗಿದೆ.
ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ಗೋಪಾಲನಗರ, ಯಲಹಂಕ, ಹಾಸನ, ಟಿ ನರಸೀಪುರ, ಶ್ರೀರಂಗಪಟ್ಟಣ, ಕೊಳ್ಳೇಗಾಲ, ನೆಲಮಂಗಲ, ಮಳವಳ್ಳಿ, ಮದ್ದೂರು ಪ್ರಾಂತ್ಯದಲ್ಲಿ ಸಾಧಾರಣ ಮಳೆಯಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.











Click it and Unblock the Notifications