ಐಎಸ್‌ಐಎಸ್ ಜೊತೆ ಇದ್ದ ಕೇರಳ ಯುವತಿ ಅಫ್ಗಾನ್‌ನಲ್ಲಿ ಶರಣು
ನವದೆಹಲಿ, ನವೆಂಬರ್ 26 : ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿದ್ದ ಕೇರಳ ಮೂಲದ ಯುವತಿ ಅಫ್ಗಾನಿಸ್ತಾನದಲ್ಲಿ ಶರಣಾಗಿದ್ದಾಳೆ. 2016ರಲ್ಲಿ ಈಕೆ ಕೇರಳದಿಂದ ಅಫ್ಗಾನಿಸ್ತಾನಕ್ಕೆ ಪರಾರಿಯಾಗಿದ್ದಳು ಎಂಬ ಮಾಹಿತಿ ಸಿಕ್ಕಿದೆ.
ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯೇಷಾ ಎಂಬ ಯುವತಿ ಅಫ್ಗಾನಿಸ್ತಾನದಲ್ಲಿ ಕಾನೂನು ನಿರ್ದೇಶನಾಲಯದ ಮುಂದೆ ಶರಣಾಗಿದ್ದಾಳೆ. ಕೇರಳ ಮಾದರಿ ಐಎಸ್‌ಐಎಸ್ ಭಾಗವಾಗಿದ್ದ 21 ಜನರು 2016ರಲ್ಲಿ ಅಫ್ಗಾನಿಸ್ತಾನಕ್ಕೆ ತೆರಳಿದ್ದರು.
ಐಎಸ್ಐಎಸ್ ಉಗ್ರ ಸಂಘಟನೆಗೆ ಕೇರಳದವರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಉಗ್ರನನ್ನು ಜೂನ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಅಫ್ಗಾನಿಸ್ತಾನದಲ್ಲಿ ಅಡಿಗಿ ಅಲ್ಲಿಂದಲೇ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದ ರಶೀದ್ ಅಬ್ದುಲ್ಲಾನನ್ನು ವೈಮಾನಿಕ ದಾಳಿ ನಡೆಸಿ ಕೊಂದು ಹಾಕಲಾಗಿತ್ತು.

ಅಮೆರಿಕದ ಭದ್ರತಾ ಪಡೆಗಳು ನಡೆಸಿದ ನಿರಂತರ ದಾಳಿಯಲ್ಲಿ ರಶೀದ್ ಅಬ್ದುಲ್ಲಾ ಮೃತಪಟ್ಟಿದ್ದಾನೆ ಎಂದು ಸಂಘಟನೆಯ ಸದಸ್ಯರೊಬ್ಬರು ಟೆಲಿಗ್ರಾಂನದಲ್ಲ ಕಳುಹಿಸಿದ ಸಂದೇಶ ವೈರಲ್ ಆಗಿತ್ತು. ಕೇರಳದಿಂದ 21 ಜನರ ತಂಡವನ್ನು ಅಫ್ಗಾನಿಸ್ತಾನಕ್ಕೆ ಕರೆದುಕೊಂಡು ಹೋಗಿ ಆತ ತರಬೇತಿ ನೀಡುತ್ತಿದ್ದ.
ರಶೀದ್ ಅಯೇಷಾಳನ್ನು ಯುಎಇಗೆ ಮೊದಲು ಕರೆದುಕೊಂಡಿ ಹೋಗಿದ್ದ. ಬಳಿಕ ಅವರು ತೆಹ್ರಾನ್‌ಗೆ ತೆರಳಿದ್ದರು, ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಕರೆದುಕೊಂಡು ಹೋಗಲಾಗಿತ್ತು. 21 ಜನರ ಗುಂಪಿನಲ್ಲಿದ್ದ ಆಯೇಷಾ ಈಗ ಶರಣಾಗಿದ್ದಾಳೆ.
ಕೇರಳ ಮಾದರಿ ಐಎಸ್‌ಐಎಸ್ ನೇಮಕಾತಿ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಕೇರಳದಿಂದ ಹೋದ 21 ಜನರು ಅಫ್ಗಾನಿಸ್ತಾನದಲ್ಲಿದ್ದಾರೆ ಎಂಬ ಬಗ್ಗೆ ಎನ್‌ಐಎಗೆ ಮಾಹಿತಿ ಸಿಕ್ಕಿತ್ತು. ಭಾರತದಲ್ಲಿ ದಾಳಿಗಳನ್ನು ಮಾಡಲು ತರಬೇತಿ ನೀಡಲಾಗುತ್ತಿತ್ತು.












Click it and Unblock the Notifications