ಕಾಶ್ಮೀರದಲ್ಲಿ ಹಿಮಪಾತ: ಪ್ರವಾಸಿಗರು ಜಾಲಿ ಜಾಲಿ, ಜನಜೀವನಕ್ಕೂ ತೊಂದರೆ
ಶ್ರೀನಗರ, ಡಿಸೆಂಬರ್ 28: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತದ ಕಾರಣ ವಾತಾವರಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮತ್ತೊಂದು ಕಡೆ ವಿಮಾನ, ವಾಹನಗಳ ಸಂಚಾರಕ್ಕೆ ಸಹ ತೊಂದರೆ ಉಂಟಾಗಿದೆ. ಹಲವು ಕಡೆ ಪ್ರವಾಸಿಗರು ರಸ್ತೆಯಲ್ಲಿ ಸಿಲುಕಿದ್ದು, ಸುರಕ್ಷಿತ ಸ್ಥಳಗಳಲ್ಲಿ ಅವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ದಾಲ್ ಸರೋವರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಜನರು ವಾತಾವರಣವನ್ನು ನೋಡಿ ಸಂತಸಗೊಂಡಿದ್ದಾರೆ. ಹಿಮಪಾತದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ಶ್ರೀನಗರದಲ್ಲಿ ಭಾರಿ ಹಿಮಪಾತವಾಗಿದೆ. ರಸ್ತೆಗಳಲ್ಲಿ ಭಾರಿ ಹಿಮಬಿದ್ದಿದ್ದು ವಾಹನಗಳ ಸಂಚಾರಕ್ಕೆ ಸಹ ತೊಂದರೆಯಾಗಿದೆ. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅನಂತ್‌ನಾಗ್ ಜಿಲ್ಲೆಯ ವಾನ್ಪೊ-ಖಾಜಿಗುಂಡ್ ಹೆದ್ದಾರಿಯಲ್ಲಿ ಪ್ರವಾಸಿಗರು ರಸ್ತೆಯ ನಡುವೆಯೇ ಸಿಲುಕಿದರು. ಶುಕ್ರವಾರ ಮಧ್ಯಾಹ್ನದಿಂದಲೇ ಹಿಮಪಾತವಾಗುತ್ತಿದ್ದು, ಶನಿವಾರ ಭಾರಿ ಹಿಮಪಾತವಾಗಿದೆ.

ಈ ವರ್ಷದ ಮೊದಲ ಹಿಮಪಾತ ಶನಿವಾರ ಶ್ರೀನಗರದಲ್ಲಿ ದಾಖಲಾಗಿದೆ. ಶ್ರೀನಗರದ ಎಲ್ಲಾ ವಿಮಾನಗಳ ಸಂಚಾರವನ್ನು ಶನಿವಾರ ರದ್ದುಗೊಳಿಸಲಾಗಿದೆ. ಇದರಿಂದಾಗಿ ಕಣಿವೆ ರಾಜ್ಯದಿಂದ ಹೊರಡಬೇಕಿದ್ದ ಮತ್ತು ಅಲ್ಲಿಗೆ ತೆರಳಬೇಕಿದ್ದ ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿಯೇ ಉಳಿಯುವಂತೆ ಆಗಿದೆ.
ದಟ್ಟವಾದ ಮಂಜು: ವಿಮಾನ ನಿಲ್ದಾಣದ ರನ್ ವೇ ಮೇಲೆ ಭಾರಿ ಹಿಮ ಬಿದ್ದಿದೆ. ಅಲ್ಲದೇ ವಿಮಾನ ಲ್ಯಾಂಡ್ ಮಾಡಲು ಸರಿಯಾಗಿ ಕಾಣದ ಕಾರಣ ಎಲ್ಲಾ ವಿಮಾನಗಳ ಸೇವೆ ರದ್ದುಗೊಳಿಸಲಾಗಿದೆ. ವಿಮಾನ ಪ್ರಯಾಣಿಕರು ವಿಮಾನಯಾನ ಸಂಸ್ಥೆಗಳು ನೀಡುವ ಸೂಚನೆ ಪಾಲಿಸಿ ಎಂದು ಕರೆ ನೀಡಲಾಗಿದೆ.
ರಸ್ತೆಯ ಮೇಲೆ ಸಹ ಭಾರಿ ಹಿಮ ಬಿದ್ದಿದೆ. ಇದರಿಂದಾಗಿ ಪ್ರವಾಸಿಗರ ವಾಹನಗಳು, ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ವಾಹನಗಳು ಅಲ್ಲಲ್ಲಿ ಸಿಲುಕಿದವು. ಇದರಿಂದಾಗಿ ದಿನನಿತ್ಯದ ಜನಜೀವನಕ್ಕೆ ತೊಂದರೆಯಾಗಿದೆ.
ಶ್ರೀನಗರ-ಜಮ್ಮು ಹೆದ್ದಾರಿಯನ್ನು ಶನಿವಾರ ಬಂದ್ ಮಾಡಲಾಗಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಪ್ರವಾಸಿಗರ ವಾಹನ, ಲಾರಿಗಳು ಸಿಕ್ಕಿ ಬಿದ್ದಿವೆ. ಹೆದ್ದಾರಿಯ ಹಿಮವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ಕೆಲವು ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಿಮಪಾತದ ಕಾರಣ ರೈಲ್ವೆ ಹಳಿಗೆ ಹಾನಿಯಾಗಿದೆಯೇ? ಎಂದು ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ವಿದ್ಯುತ್ ವ್ಯವಸ್ಥೆ ಸರಿಪಡಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ದಕ್ಷಿಣ ಕಾಶ್ಮೀರ ಭಾಗದಲ್ಲಿ ಹೆಚ್ಚು ಹಿಮಪಾತವಾಗಿದ್ದು, ಕೆಲವು ಪ್ರದೇಶಗಳ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆ ಹಿಮಪಾತ ಹೆಚ್ಚಿರುತ್ತದೆ ಎಂದು ಮುನ್ಸೂಚನೆ ನೀಡಿದ್ದು, ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ತಯಾರಾಗಿದ್ದಾರೆ.
ಮೊದಲ ಹಿಮಪಾತದ ಕಾರಣ ಶ್ರೀನಗರದಲ್ಲಿರುವ ಪ್ರವಾಸಿಗರು ಸಂಭ್ರಮಪಟ್ಟರು. ದಾಲ್ ಸರೋವರದ ಬಳಿ ನೂರಾರು ಪ್ರವಾಸಿಗರು ಶನಿವಾರ ಕಂಡುಬಂದರು. ಹಿಮದ ನಡುವೆ ಫೋಟೋಗಳನ್ನು ತೆಗೆದುಕೊಂಡು ಸಂಭ್ರಮಿಸಿದರು. ಪ್ರವಾಸಿಗರು ಎಚ್ಚರಿಕೆಯಿಂದ ವಾಹನ ಓಡಿಸಬೇಕು ಎಂದು ಸ್ಥಳೀಯ ಆಡಳಿತ ಮನವಿ ಮಾಡಿದೆ.












Click it and Unblock the Notifications