ಮಧ್ಯಪ್ರದೇಶ; ಸಿಎಂ ಅಭ್ಯರ್ಥಿ ಘೋಷಿಸದ ಬಿಜೆಪಿ, ಚೌವ್ಹಾಣ್ ಸಂದರ್ಶನ
ಭೋಪಾಲ್, ನವೆಂಬರ್ 06: ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿವೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದು ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿ.
ಈ ಬಾರಿಯ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ನವೆಂಬರ್ 17ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.

ವಿಧಾನಸಭೆ ಚುನಾವಣೆ, ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದಿರುವ ಕುರಿತು ಶಿವರಾಜ್ ಸಿಂಗ್ ಚೌವ್ಹಾಣ್ ಮಾತನಾಡಿದ್ದಾರೆ. indianexpressಗೆ ಅವರು ಸಂದರ್ಶನವನ್ನು ನೀಡಿದ್ದಾರೆ. "ನಾವು ಚುನಾವಣೆ ಗೆಲ್ಲುತ್ತೇವೆ, ನಾವು ಗೆಲ್ಲಲೇಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಶಿವರಾಜ್ ಸಿಂಗ್ ಚೌವ್ಹಾಣ್ ಸಂದರ್ಶನದ ವಿವರಗಳು
* ಕಾಂಗ್ರೆಸ್ ನಾಯಕರ ಪ್ರಚಾರದ ಬಗ್ಗೆ ಭಯವಿದೆಯೇ?
ಅದು ಕಮಲ್ ನಾಥ್, ದಿಗ್ವಿಜಯ್ ಸಿಂಗ್, ರಣದೀಪ್ ಸಿಂಗ್ ಸುರ್ಜೇವಾಲ, ರಾಹುಲ್ ಗಾಂಧಿ ಯಾರೇ ಇರಬಹುದು. ಭೋಪಾಲ್‌ನ ಜನರು ಅವರನ್ನು ಒಪ್ಪುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಗೆಲ್ಲಲೇಬೇಕು, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಿವರಾಜ್ ಸಿಂಗ್ ಚೌವ್ಹಾಣ್ ಸಂದರ್ಶನದಲ್ಲಿ ಹೇಳಿದ್ದಾರೆ.
* ಸರ್ಕಾರದ ಯಾವ ಯೋಜನೆಗಳನ್ನು ಜನರು ಬೆಂಬಲಿಸಲಿದ್ದಾರೆ?
ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮೀಸಲಾತಿ, ಪೊಲೀಸ್ ನೇಮಕಾತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ 30ರಷ್ಟು ಮೀಸಲಾತಿ, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಒಟ್ಟಾರೆ ಶೇ 35ರಷ್ಟು ಮೀಸಲಾತಿ ನಾವು ಇಂತಹ ಹಲವು ಪರಿಣಾಮಕಾರಿ ಹೆಜ್ಜೆಯನ್ನು ಇಟ್ಟಿದ್ದೇವೆ. ರಾಜ್ಯದ ಹೆಣ್ಣು ಮಕ್ಕಳು ಸಹೋದರನ ಜೊತೆ ಬೆಂಬಲವಾಗಿ ನಿಲ್ಲಲಿದ್ದಾರೆ.
* ಬಿಜೆಪಿ ಬಹುಮತವನ್ನು ಪಡೆದರೆ ನೀವು ಮುಖ್ಯಮಂತ್ರಿಯೇ?
ಈ ಕುರಿತು ನಾನು ಚಿಂತನೆ ನಡೆಸುವುದಿಲ್ಲ. ನಾನು ರಾಜಕೀಯಕ್ಕೆ ಬಂದಿರುವುದು ಅಭಿವೃದ್ಧಿ ಮತ್ತು ಸದೃಢ ಸಮಾಜ ನಿರ್ಮಾಣ ಮಾಡುವುದಕ್ಕೆ. ನಾನು ಬಿಜೆಪಿಯ ಕಾರ್ಯಕರ್ತ. ಚುನಾವಣೆ ನಂತರ ಈ ಕುರಿತು ಪಕ್ಷ ತೀರ್ಮಾನವನ್ನು ಮಾಡಬೇಕಿದೆ.
* ಇಷ್ಟು ವರ್ಷ ಅಧಿಕಾರ ನಡೆಸಿದರೂ ಬಿಜೆಪಿ ಸಿಎಂ ಅಭ್ಯರ್ಥಿ ಘೋಷಿಸಿಲ್ಲ?
ನನ್ನ ಹೆಸರು ಶಿವರಾಜ್ ಸಿಂಗ್ ಚೌವ್ಹಾಣ್. ನಾನು ಇಂತಹ ಚಿಕ್ಕ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಚಿಕ್ಕ ವಿಚಾರಗಳು ನನ್ನ ಕೆಲಸಗಳು, ವರ್ಚಸ್ಸಿಗೆ ಧಕ್ಕೆಯನ್ನು ತರುವುದಿಲ್ಲ. ನೀವು ಏನು ಕೆಲಸ ಮಾಡಿದ್ದೀರಿ? ಎಂಬುದು ಮಾತ್ರ ಚುನಾವಣೆ ಸಮಯದಲ್ಲಿ ಮುಖ್ಯವಾಗುತ್ತದೆ.
* ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಗೆ ಬಂದಿರುವುದು ಲಾಭ ತರಲಿದೆಯೇ?
ರಾಜ್ಯದ ಯುವ ನೇತಾರ ಜ್ಯೋತಿರಾಧಿತ್ಯ ಸಿಂಧಿಯಾ. ರಾಜ್ಯದಲ್ಲಿ ಅಪಾರ ಅಭಿಮಾನಿಗಳು, ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಆಗಮನದಿಂದ ಬಿಜೆಪಿಗೆ ಭಾರೀ ಲಾಭವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
* ಕಮಲ್ ನಾಥ್ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರಲ್ಲ?
ಯಾವ ಮುಖವಿಟ್ಟುಕೊಂಡು ಇಂತಹ ಮಾತನ್ನು ಅವರು ಹೇಳುತ್ತಿದ್ದಾರೆ?. ಕಮಲ್ ನಾಥ್ ಅವರ ಆಪ್ತರಾಗಿದ್ದವರ ಮೇಲೆ ಇಡಿ ಮತ್ತು ಐಟಿ ದಾಳಿಗಳು ನಡೆದವು. ನಾನು ಚುನಾವಣೆಯಲ್ಲಿ ಯಾವುದೇ ವೈಯಕ್ತಿಕ ಟೀಕೆಗಳನ್ನು ಮಾಡಲು ಬಯಸುವುದಿಲ್ಲ.
ಈ ಬಾರಿಯ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಪ್ರಚಾರ ಕೈಗೊಂಡಿವೆ. 2018ರ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು. ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬಳಿಕ ಅವರ ಬೆಂಬಲಿಗ ಶಾಸಕರು ಕಾಂಗ್ರೆಸ್ ತೊರೆದ ಕಾರಣ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತು. ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿತು.












Click it and Unblock the Notifications