2019ರಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶರದ್ ಪವಾರ್ ಸೂಚಿಸಿದ್ದರು: ಡಿಸಿಎಂ ಫಡ್ನವಿಸ್ ಸ್ಫೋಟಕ ಹೇಳಿಕೆ
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು 2019 ರಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸೂಚಿಸಿದ್ದರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಅವಧಿಯ ಸಂದರ್ಭದಲ್ಲಿ ಶರದ್ ಪವಾರ್ ಈ ರೀತಿ ಹೇಳಿದ್ದರು ಫಡ್ನವಿಸ್ ಮಾಹಿತಿ ನೀಡಿದ್ದಾರೆ. ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಸರ್ಕಾರ ರಚನೆಗೆ ಬಿಜೆಪಿಗೆ ಬೆಂಬಲ ನೀಡಲು ನಿರಾಕರಿಸಿದ ನಂತರ, ಅಧಿಕಾರಕ್ಕೆ ಯಾರು ಬರುತ್ತಾರೆ ಎನ್ನುವ ಗೊಂದಲ ಉಂಟಾಗಿತ್ತು.

ಇಂಡಿಯಾ ಟುಡೇ ಕಾನ್‌ಕ್ಲೇವ್ ಮುಂಬೈ 2023ರಲ್ಲಿ ಮಾತನಾಡಿದ ಫಡ್ನವಿಸ್, ಪವಾರ್ 2019ರಲ್ಲಿ ಬಿಜೆಪಿಯನ್ನು ಸಂಪರ್ಕಿಸಿದ್ದರು ಮತ್ತು ಸರ್ಕಾರ ರಚಿಸುವ ಸಲುವಾಗಿ ತಮ್ಮ ಎನ್‌ಸಿಪಿ ಮತ್ತು ಬಿಜೆಪಿ ನಡುವೆ ಮೈತ್ರಿ ಮಾಡಿಕೊಳ್ಳುವಂತೆ ಹೇಳಿದ್ದರು ಎನ್ನುವ ವಿಚಾರ ಬಹಿರಂಗಪಡಿಸಿದ್ದಾರೆ.
ರಾಷ್ಟ್ರಪತಿ ಆಡಳಿತಕ್ಕೆ ಸೂಚನೆ
ಫಡ್ನವೀಸ್ ಹೇಳಿರುವ ಪ್ರಕಾರ, 2019ರಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಸಂಕ್ಷಿಪ್ತವಾಗಿ ಹೇರಲು ಪವಾರ್ ಸಲಹೆ ನೀಡಿದ್ದರು, ಇದರಿಂದಾಗಿ ಎನ್‌ಸಿಪಿ ಕಾರ್ಯಕರ್ತರಿಗೆ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ತಿಳಿಸಬಹುದು ಎನ್ನುವುದು ಅವರ ಉದ್ದೇಶವಾಗಿತ್ತು. ಆದರೆ, ನಂತರ ತಮ್ಮ ಯೋಜನೆಯಿಂದ ಶರದ್ ಪವಾರ್ ಹಿಂದೆ ಸರಿದರು ಎಂದು ಫಡ್ನವಿಸ್ ಹೇಳಿದರು.
ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಮೊದಲು ಎಲ್ಲಾ ಪಕ್ಷಗಳಿಗೆ ಸರ್ಕಾರ ರಚನೆ ಮಾಡಲು ಪತ್ರ ನೀಡಲಾಗುತ್ತದೆ. ಯಾವಾಗ ಎನ್‌ಸಿಪಿಗೆ ಪತ್ರ ಸಿಕ್ಕಿತ್ತು, ಅದನ್ನು ಬರೆದವನು ನಾನೇ, ನನ್ನ ಮನೆಯಲ್ಲೇ ಅದನ್ನು ಟೈಪ್ ಮಾಡಲಾಗಿತ್ತು, ಶರದ್ ಪವಾರ್ ಆ ಪತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದರು. ಆ ತಿದ್ದುಪಡಿಗಳನ್ನು ಕಾರ್ಯಗತಗೊಳಿಸಿದ ನಂತರ ಮತ್ತು ಎನ್‌ಸಿಪಿ ಸರ್ಕಾರ ರಚಿಸಲು ಇಷ್ಟಪಡುವುದಿಲ್ಲ ಎಂಬ ಪತ್ರವನ್ನು ಸಲ್ಲಿಸಿದ ನಂತರ, ನಂತರ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಲಾಯಿತು ಎಂದು ಹೇಳಿದರು.
"ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಶರದ್ ಪವಾರ್ ಅವರ ಆಲೋಚನೆಯಾಗಿತ್ತು. ಅವರು ಅಷ್ಟು ವೇಗವಾಗಿ ಯು-ಟರ್ನ್ ತೆಗೆದುಕೊಳ್ಳಲ್ಲ ಎಂದು ಅವರು ಹೇಳಿದರು. ಸಂಕ್ಷಿಪ್ತವಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಲಹೆ ನೀಡಿದರು, ನಂತರ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರದ ಅಗತ್ಯದ ಬಗ್ಗೆ ಮಾತನಾಡುತ್ತಾರೆ. ಒಮ್ಮೆ ಅವರು ಸರ್ಕಾರ ರಚನೆಗೆ ಬೆಂಬಲ ಪಡೆದರೆ, ರಾಷ್ಟ್ರಪತಿ ಆಳ್ವಿಕೆಯು ಸ್ವಯಂಚಾಲಿತವಾಗಿ ಹಿಂತೆಗೆದುಕೊಳ್ಳಲ್ಪಡುತ್ತದೆ" ಎಂದು ಫಡ್ನವಿಸ್ ಹೇಳಿದರು.
ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಜೊತೆಗಿನ ಮೈತ್ರಿ ರಾಜಕೀಯದಲ್ಲಿ ಸಂಚಲನ ಮೂಡಿಸಿತು, ಆಗ ತೆರೆಮರೆಯಲ್ಲಿ ನಿಜವಾಗಿಯೂ ಏನಾಯಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಫಡ್ನವಿಸ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಫಡ್ನವೀಸ್ ಮತ್ತು ಅಜಿತ್ ಅವರು ನವೆಂಬರ್ ಅಂತ್ಯದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸೇಡು ತೀರಿಸಿಕೊಳ್ಳುವ ಬಗ್ಗೆ ತಮ್ಮ ಹಿಂದಿನ ಹೇಳಿಕೆಯ ಬಗ್ಗೆ ಮಾತನಾಡುತ್ತಾ, ಇದು ಅಂತಹ ರಾಜಕಾರಣಿ ಬಳಸಬೇಕಾದ ಪದವಲ್ಲ ಎಂದು ಫಡ್ನವಿಸ್ ಹೇಳಿದರು.
ಎನ್‌ಸಿಪಿ ಮುಖ್ಯಸ್ಥರು ಮತ್ತು ಬಿಜೆಪಿ ನಡುವಿನ ಮಾತುಕತೆಗಳ ಯಾವುದೇ ಊಹಾಪೋಹಗಳನ್ನು ಫಡ್ನವಿಸ್ ತಳ್ಳಿಹಾಕಿದರು. ಅಜಿತ್ ಪವಾರ್ ಅವರು ಎನ್‌ಸಿಪಿಯಿಂದ ಬೇರ್ಪಟ್ಟ ನಂತರ ಚಿಕ್ಕಪ್ಪ-ಸೋದರಳಿಯ ಜೋಡಿಯ ನಡುವಿನ ಇತ್ತೀಚಿನ ಸಭೆಗಳ ಬಗ್ಗೆ ಕೇಳಿದಾಗ, ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.












Click it and Unblock the Notifications