India weather update: ಇನ್ನು ಐದು ದಿನ ಉತ್ತರದಲ್ಲಿ ಬಿಸಿಗಾಳಿಯ ಆರ್ಭಟ.. ದಕ್ಷಿಣದಲ್ಲಿ ಮಳೆರಾಯನ ನರ್ತನ..!
ನವದೆಹಲಿ, ಜೂನ್. 15: ಉತ್ತರ ಮತ್ತು ಮಧ್ಯ ಭಾರತದ ಹಲವಾರು ಭಾಗಗಳಲ್ಲಿ ಜೂನ್ 19 ರವರೆಗೆ ಬಿಸಿಗಾಳಿ ಮತ್ತು ಉಸಿರುಗಟ್ಟಿಸುವ ಉಷ್ಣಾಂಶ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದೆ ವೇಳೆ ಶನಿವಾರದಿಂದ ಐದು ದಿನಗಳ ಕಾಲ ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಈಶಾನ್ಯ ಭಾರತದಾದ್ಯಂತ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ, ಗರಿಷ್ಠ ತಾಪಮಾನವು 44 ರಿಂದ 46 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರುವುದರಿಂದ ಮುಂದಿನ ಐದು ದಿನಗಳವರೆಗೆ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗಿದೆ. ಈ ತಾಪಮಾನದ ವ್ಯಾಪ್ತಿಯು ಮಧ್ಯಪ್ರದೇಶ, ಬಿಹಾರ, ಹರಿಯಾಣ ಮತ್ತು ಚಂಡೀಗಢದ ಭಾಗಗಳಲ್ಲಿಯೂ ಹರಡಿದೆ ಎಂದು ಐಎಂಡಿ ಹೇಳಿದೆ.

ಹವಾಮಾನ ಇಲಾಖೆಯ ಪ್ರಕಾರ, ಜೂನ್ 15 ಮತ್ತು 19 ರ ನಡುವೆ ಉತ್ತರ ಪ್ರದೇಶದ ಹೆಚ್ಚಿನ ಭಾಗಗಳು, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿಯ ಕೆಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿ ಇರಲಿದೆ. ಜೂನ್ 15 ರಂದು ಜಾರ್ಖಂಡ್ ಮತ್ತು ಉತ್ತರಾಖಂಡ್‌ನ ಕೆಲವು ಭಾಗಗಳಲ್ಲಿ ಬಿಸಿಗಾಳಿಯಿಂದ ತೀವ್ರತರವಾದ ಶಾಖದ ಅಲೆಯ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆಯಿದೆ.
ಜೂನ್ 15 ರಂದು ಪಶ್ಚಿಮ ಬಂಗಾಳ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ, ಜೂನ್ 16 ರಂದು ಉತ್ತರಾಖಂಡದಲ್ಲಿ, ಜೂನ್ 15 ಮತ್ತು 17 ರ ನಡುವೆ ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ, ಜೂನ್ 15 ಮತ್ತು ಜೂನ್ 16 ರಂದು ಈಶಾನ್ಯ ಮಧ್ಯಪ್ರದೇಶ ಮತ್ತು ಜೂನ್ 15 ರಂದು ಉತ್ತರ ಛತ್ತೀಸ್‌ಗಢದಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಇರಬಹುದೆಂದು ಐಎಂಡಿ ತಿಳಿಸಿದೆ.
ಐದು ದಿನ ಭಾರಿ ಮಳೆ ಮುನ್ಸೂಚನೆ
ಮತ್ತೊಂದೆಡೆ, ಹವಾಮಾನ ಇಲಾಖೆಯು ಜೂನ್ 15 ರಿಂದ 19 ರವರೆಗೆ ಅಸ್ಸಾಂನಲ್ಲಿ ಜೂನ್ 17 ಮತ್ತು 19 ರ ನಡುವೆ ಭಾರೀ ಮಳೆ ಮುನ್ಸೂಚನೆ ನೀಡಿದೆ. ಗುಡುಗು, ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಮುಂದಿನ ಐದು ದಿನಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.

ಜೂನ್ 17 ಮತ್ತು 19 ರ ನಡುವೆ ಒಡಿಶಾದಲ್ಲಿ ಮತ್ತು ಜೂನ್ 18 ಮತ್ತು 19 ರಂದು ಪೂರ್ವ ಬಿಹಾರದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಕರ್ನಾಟಕ, ಕೇರಳ, ಮಾಹೆ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಸಾಧಾರಣ ಮಳೆಯಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಐದು ದಿನಗಳಲ್ಲಿ ಕರಾವಳಿ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ, ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 16 ಮತ್ತು 17 ರಂದು ಮರಾಠವಾಡ, ಜೂನ್ 17 ರಿಂದ 19 ರವರೆಗೆ ಕೊಂಕಣ, ಗೋವಾ, ಕೇರಳ ಮತ್ತು ಮಾಹೆಯಲ್ಲಿ, ಜೂನ್ 17 ರಂದು ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಉತ್ತರ ಒಳನಾಡಿನಲ್ಲಿ ಮತ್ತು ಜೂನ್ 18 ಮತ್ತು 19 ರಂದು ಮಧ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಯವ್ಯ ಭಾರತದಲ್ಲಿ ಸಾಮಾನ್ಯ ಮಳೆಗಿಂತ ಶೇಕಡಾ 53 ರಷ್ಟು ಕಡಿಮೆ ಮಳೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಜೂನ್ 1 ರಿಂದ 12 ರ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಶೇ.60 ರಷ್ಟು ಹೆಚ್ಚು ಮಳೆಯಾಗಿದೆ. ಮಾನ್ಸೂನ್ ತಿಂಗಳ ಅಂತ್ಯದ ವೇಳೆಗೆ ಅಂದರೆ ಜೂನ್ 27 ರ ಸುಮಾರಿಗೆ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ.












Click it and Unblock the Notifications