ಕುಟುಕಿದ ಚಾನೆಲ್ ನಿಂದ ಕ್ಷಮೆಯಾಚನೆ, 9 ಜನರ ಮೇಲೆ ಕೇಸ್
ಮಹಿಳೆಯೊಂದಿಗೆ ಅಶ್ಲೀಲ ಮಾತುಕತೆ ನಡೆಸಿದ ಆರೋಪದ ಮೇಲೆ ರಾಜೀನಾಮೆ ನೀಡಿರುವ ಕೇರಳದ ಮಾಜಿ ಸಚಿವ ಶಶೀಂದ್ರನ್ ಅವರ ಪ್ರಕರಣವು ಚಾನೆಲ್ ನ ಕುಟುಕು ಕಾರ್ಯಾಚರಣೆ ಎಂಬ ಸತ್ಯ ಹೊರ ಬೀಳುತ್ತಿದ್ದಂತೆ ಚಾನೆಲ್ ಕ್ಷಮೆಯಾಚಿಸಿದೆ
ತಿರುವನಂತಪುರಂ, ಮಾರ್ಚ್ 31: ಮಹಿಳೆಯೊಂದಿಗೆ ಅಶ್ಲೀಲ ಮಾತುಕತೆ ನಡೆಸಿದ ಆರೋಪದ ಮೇಲೆ ರಾಜೀನಾಮೆ ನೀಡಿರುವ ಕೇರಳದ ಮಾಜಿ ಸಚಿವ ಶಶೀಂದ್ರನ್ ಅವರ ಪ್ರಕರಣವು ಚಾನೆಲ್ ನ ಕುಟುಕು ಕಾರ್ಯಾಚರಣೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸತ್ಯ ಹೊರ ಬೀಳುತ್ತಿದ್ದಂತೆ ಚಾನೆಲ್ ಕ್ಷಮೆಯಾಚಿಸಿದೆ. ಸುದ್ದಿ ವಾಹಿನಿಯ ಸಿಇಒ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈಗಷ್ಟೇ ಆರಂಭವಾದ ಸುದ್ದಿ ವಾಹಿನಿ ಮಂಗಳಂ ಟಿವಿಯ ಮಾಜಿ ವರದಿಗಾರ್ತಿ ಎಂಬುವರು, ಈ ಇಡೀ ಪ್ರಸಂಗದ ಬಗ್ಗೆ ವಿವರಣೆ ನೀಡಿ, ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಇದೊಂದು ಹನಿ ಟ್ರ್ಯಾಪ್ ಪ್ರಕರಣ ಎಂದಿದ್ದರು. ಮಂಗಳಂ ಸುದ್ದಿವಾಹಿನಿಯ ಮಾಜಿ ಉದ್ಯೋಗಿ ಅಲ್ ನೀಮಾ ಅಶ್ರಫ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.[ಮಾಜಿ ಸಚಿವ ಶಶೀಂದ್ರನ್ ಹನಿ ಟ್ರ್ಯಾಪಿಗೆ ಬಲಿಯಾದರೆ?]

ಕೇರಳದ ಎಲ್ ಡಿಎಫ್ ಸರ್ಕಾರ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಫೋನ್ ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿ ಕಿರುಕುಳ ನೀಡಿದ ಆರೋಪವನ್ನು ಸಚಿವ ಸಸೀಂದ್ರನ್ ಹೊತ್ತಿದ್ದಾರೆ. ಈ ಕುರಿತಂತೆ ಮಂಗಳ ಟಿವಿ, ಆಡಿಯೋ ಕ್ಲಿಪ್ ಪ್ರಸಾರ ಮಾಡಿತ್ತು.
ಈಗ ಚಾನೆಲ್ ನ ಸಿಇಒ ಅಜಿತ್ ಕುಮಾರ್ ಅವರು ಕ್ಷಮೆಯಾಚಿಸಿ, ಇನ್ಮುಂದೆ ತಪ್ಪುಗಳಾಗುವುದಿಲ್ಲ ಎಂದಿರುವ ವಿಡಿಯೋವೊಂದು ಗುರುವಾರದಂದು ಪ್ರಸಾರ ಮಾಡಲಾಗಿದೆ. ಇದಾದ ಬಳಿಕ, ಸಾರಿಗೆ ಸಚಿವರಾಗಿ ಶಶೀಂದ್ರನ್ ರನ್ನು ಮರು ನೇಮಕ ಮಾಡಬೇಕು ಎಂದು ಸಿಎಂ ಪಿಣರಾಯಿ ವಿಜಯನ್ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.











Click it and Unblock the Notifications