Sadhguru: ಮಗಳಿಗೆ ಮದುವೆ ಮಾಡಿದ ಸದ್ಗುರು ಇತರ ಮಹಿಳೆಯರನ್ನು ಸನ್ಯಾಸಿಯಾಗಲು ಏಕೆ ಪ್ರೋತ್ಸಾಹಿಸುತ್ತಾರೆ? ಮದ್ರಾಸ್ ಹೈಕೋರ್ಟ್
ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಹೆಣ್ಣುಮಕ್ಕಳಿಗೆ ಬ್ರೈನ್ ವಾಶ್ ಮಾಡಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಾಧ್ಯಾಪಕ ಎಸ್ ಕಾಮರಾಜ್ ಮದ್ರಾಸ್ ಹೈಕೋರ್ಟ್‌ನಲ್ಲಿ ದೂರು ನೀಡಿದ್ದರು. ವಿಚಾರಣೆ ವೇಳೆ ಕೋರ್ಟ್ ಮಹತ್ವದ ಪ್ರಶ್ನೆಯನ್ನು ಎತ್ತಿದೆ.
ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ತಮ್ಮ ಇಬ್ಬರು ವಿದ್ಯಾವಂತ ಹೆಣ್ಣುಮಕ್ಕಳನ್ನು ಬ್ರೈನ್ ವಾಶ್ ಮಾಡಲಾಗಿದೆ ಮತ್ತು ಈಶಾ ಯೋಗ ಕೇಂದ್ರದಲ್ಲಿ ಒತ್ತಾಯಪೂರ್ವಕವಾಗಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅವರು ತಮ್ಮ ಇಬ್ಬರು ಮಕ್ಕಳನ್ನು ಖುದ್ದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ 'ತನ್ನ ಮಗಳನ್ನು ಮದುವೆ ಮಾಡಿಸಿ ಆಕೆಯನ್ನು ಜೀವನದಲ್ಲಿ ಉತ್ತಮವಾಗಿರಿಸಿದ ಸದ್ಗುರುಗಳು, ಇತರರ ಹೆಣ್ಣುಮಕ್ಕಳನ್ನು ಏಕಾಂತ ಜೀವನ ನಡೆಸುವಂತೆ ಏಕೆ ಪ್ರೋತ್ಸಾಹಿಸುತ್ತಿದ್ದಾರೆ' ಎಂದು ತರಾಟೆಗೆ ತೆಗೆದುಕೊಂಡಿದೆ.

ನೊಂದ ತಂದೆಯಿಂದ ಅರ್ಜಿ ಸಲ್ಲಿಕೆ
ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮಾಡುತ್ತಿರುವ ಎಸ್ ಕಾಮರಾಜ್ ಅವರು ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಹೆಣ್ಣು ಮಕ್ಕಳ ತಲೆ ಕೆಡಿಸಿ ಅವರನ್ನು ಒತ್ತಾಯಪೂರ್ವಕವಾಗಿ ಈಶಾ ಯೋಗ ಕೇಂದ್ರದಲ್ಲಿ ಇರಿಸಿದ್ದಾರೆ. ತಮ್ಮ ಮಕ್ಕಳು ವಿಚಾರಣೆಗೆ ಖುದ್ದು ಹಾಜರುಪಡಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಆದರೆ ಸೋಮವಾರ ಪ್ರಾಧ್ಯಾಪಕರ 42 ಮತ್ತು 39 ವರ್ಷದ ಪುತ್ರಿಯರು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಸ್ವಂತ ಇಚ್ಛೆಯ ಮೇರೆಗೆ ಇಶಾ ಫೌಂಡೇಶನ್‌ನಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮನ್ನು ಬಲವಂತವಾಗಿ ಯಾರೂ ಕೂಡ ಇಟ್ಟುಕೊಂಡಿಲ್ಲ. ಈ ಹೇಳಿಕೆಯನ್ನು ಆಲಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಗಣಂ ಅವರ ಪೀಠವು ಇಶಾ ಫೌಂಡೇಶನ್ ಸಂಸ್ಥಾಪಕರನ್ನು ಪ್ರಶ್ನೆ ಮಾಡಿದೆ, 'ತನ್ನ ಮಗಳಿಗೆ ಮದುವೆ ಮಾಡಿಸಿ ಜೀವನದಲ್ಲಿ ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿ ವ್ಯಕ್ತಿಯು ಇತರರನ್ನು ಏಕಾಂಗಿಯಾಗಿ ಇರಲು ಏಕೆ ಪ್ರೋತ್ಸಾಹಿಸುತ್ತಿದ್ದಾನೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಇಂತವರ ಮಾತು ಕೇಳಿ ಹೆಣ್ಣುಮಕ್ಕಳು ಏಕಾಂತದ ಜೀವನ ನಡೆಸಬೇಕೆ?' ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.

ಈಶಾ ಫೌಂಡೇಶನ್ ವಿರುದ್ಧ ಹಿಂದೊಮ್ಮೆ ದೂರು
ಈ ಹಿಂದೆ ಒಂದು ದಶಕದ ಹಳೆಯ ಪ್ರಕರಣದಲ್ಲಿ ಮಹಿಳೆಯರು ಇದೇ ರೀತಿಯ ಸಾಕ್ಷ್ಯವನ್ನು ನೀಡಿದ್ದರು. ಇಬ್ಬರು ಮಹಿಳೆಯರ ಪೋಷಕರು ತಮ್ಮ ಹೆಣ್ಣುಮಕ್ಕಳು ತಮ್ಮನ್ನು ತೊರೆದಿದ್ದಾರೆ, ನಂತರ ಅವರ ಜೀವನ 'ನರಕ'ವಾಗಿದೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ನ್ಯಾಯಾಧೀಶರು ಪ್ರಕರಣದ ಮುಂದಿನ ತನಿಖೆಗೆ ಆದೇಶಿಸಿದ್ದಾರೆ ಮತ್ತು ಇಶಾ ಫೌಂಡೇಶನ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಆದರೂ ಮಹಿಳೆಯರು ಸ್ವಯಂಪ್ರೇರಣೆಯಿಂದ ಅವರೊಂದಿಗೆ ವಾಸಿಸಲು ಇಚ್ಚಿಸಿದ್ದಾರೆ ಎಂದು ಇಶಾ ಫೌಂಡೇಶನ್ ಹೇಳಿಕೊಂಡಿದೆ.
ಈಶಾ ಫೌಂಡೇಶನ್ ಪ್ರತಿಕ್ರಿಯೆ
ಈಶಾ ಫೌಂಡೇಶನ್ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. 'ಈ ಹೆಣ್ಣುಮಕ್ಕಳು ತಮ್ಮದೇ ಆದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ವಿವೇಚನೆಯನ್ನು ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ನಾವು ಮದುವೆಯಾಗಬಾರದು ಅಥವಾ ಸನ್ಯಾಸಿಯಾಗಬೇಕು ಎಂದು ಒತ್ತಾಯಿಸುವುದಿಲ್ಲ, ಏಕೆಂದರೆ ಇವು ವೈಯಕ್ತಿಕ ನಿರ್ಧಾರಗಳಾಗಿವೆ. ಈಶಾ ಯೋಗ ಕೇಂದ್ರವು ಸನ್ಯಾಸಿಗಳಲ್ಲದ ಸಾವಿರಾರು ಜನರನ್ನು ಹೊಂದಿದೆ, ಅದರಲ್ಲಿ ಕೆಲವರು ಬ್ರಹ್ಮಚಾರಿಗಳು ಅಥವಾ ಸನ್ಯಾಸಿಗಳಾಗಲು ನಿರ್ಧರಿಸುತ್ತಾರೆ. ಇದು ಅವರ ನಿರ್ಧಾರ ಹಾಗೂ ಅವರ ವಿವೇಚನೆಗೆ ಬಿಟ್ಟ ವಿಚಾರ' ಎಂದು ಈಶಾ ಫೌಂಡೇಶನ್ ಪ್ರತಿಕ್ರಿಯೆ ನೀಡಿದೆ.












Click it and Unblock the Notifications