Sachin Tendulkar: ನೀಟ್ ಪರೀಕ್ಷೆ ಅಕ್ರಮ, ಪ್ರತಿಭಟನೆ ಕುರಿತು ಸಚಿನ್ ತೆಂಡೂಲ್ಕರ್ ಮಹತ್ವದ ಹೇಳಿಕೆ
Sachin Tendulkar: ನೀಟ್ (NEET) ಪರಿಕ್ಷೆ ಅಕ್ರಮ ಪ್ರಕರಣ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಈ ವಿಚಾರ ವಿದೇಶಗಳವರೆಗೂ ತಲುಪಿದ್ದು, ಅಲ್ಲಿನ ವಿದ್ಯಾರ್ಥಿ ಸಂಘಟನೆಗಳು ಇದನ್ನ ಖಂಡಿಸಿ ಪ್ರತಿಭಟನೆಗಿಳಿದಿದ್ದಾರೆ. ಇದೀಗ ಈ ಕುರಿತು ಭಾರತೀಯ ಕ್ರಿಕೆಟ್ ದಂತಕಥೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಪ್ರತಿಕ್ರಿಯಿಸಿ ತನ್ನ ತಂದೆ ಹೇಳಿಕ ಮಾತುಗಳನ್ನು ಸ್ಮರಿಸಿದ್ದಾರೆ.
ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ. 'ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ಕಠಿಣ ಶ್ರಮ ಹಾಗೂ ಭವಿಷ್ಯವನ್ನು ಹಾಳುಮಾಡುತ್ತವೆ. ಜೀವನದಲ್ಲಿ ಸೋಲುವುದು ತಪ್ಪಲ್ಲ, ಆದರೆ ಅಡ್ಡದಾರಿಯಲ್ಲಿ ಅಕ್ರಮ ಅಥವಾ ವಂಚನೆ ಮಾಡುವುದು ದೊಡ್ಡ ಅಪರಾದ,' ಎಂದು ಹೇಳಿದ್ದಾರೆ.

'ಪರಿಶ್ರಮ ಹಾಕುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು'
'ಪ್ರತಿ ವರ್ಷ ಲಕ್ಷಾಂತರ ಯುವಕ-ಯುವತಿಯರು ಹಗಲು-ರಾತ್ರಿ ಎನ್ನದೆ ಅತ್ಯಂತ ಕಷ್ಟಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಅವರ ಶ್ರಮ ಹಾಗೂ ಕನಸುಗಳಿಗೆ ಅಡ್ಡಿಯಾಗಬಾರದು. ಪ್ರಾಮಾಣಿಕವಾಗಿ ಪರಿಶ್ರಮ ಹಾಕುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು,' ಎಂದು ಸಚಿನ್ ತೆಂಡೂಲ್ಕರ್ ಅವರು ತಿಳಿಸಿದ್ದಾರೆ.
'ಅಕ್ರಮದ ಯಶಸ್ಸು ನಿಜವಾದ ಯಶಸ್ಸಲ್ಲ'
ತಮ್ಮ ಕ್ರೀಡಾ ಜೀವನದ ಉದಾಹರಣೆ ನೀಡಿದ ಸಚಿನ್ ಅವರು, 'ಕ್ರೀಡೆಯಾಗಲಿ ಅಥವಾ ಯಾವುದೇ ಕ್ಷೇತ್ರದಲ್ಲಾಗಲಿ ಗೆಲುವು, ಸೋಲು ಇದ್ದೇ ಇರುತ್ತದೆ. ಸೋಲು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ತಪ್ಪುಗಳಿಂದ ಕಲಿಯಲು ಅವಕಾಶ ನೀಡುತ್ತದೆ. ಆದರೆ, ಅಕ್ರಮ ಮಾರ್ಗದ ಮೂಲಕ ಪಡೆಯುವ ಯಶಸ್ಸು ನಿಜವಾದ ಯಶಸ್ಸಲ್ಲ. ಅದು ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನೇ ಹುಸಿಗೊಳಿಸುತ್ತದೆ,' ಎಂದು ಹೇಳಿದರು.
ತಪ್ಪು ದಾರಿ ತುಳಿಯದಂತೆ ಮನವಿ
ವಿದ್ಯಾರ್ಥಿಗಳು ಧೈರ್ಯಗೆಡಬಾರದು, ಯಾವುದೇ ಕಾರಣಕ್ಕೂ ತಪ್ಪು ದಾರಿ ತುಳಿಯಬಾರದು. ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗುವಂತೆ ಕರೆ ನೀಡಿದ್ದಾರೆ. ಅಲ್ಲದೆ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಸರ್ಕಾರದ ಮತ್ತು ಆಡಳಿತ ಮಂಡಳಿಗಳ ಜವಾಬ್ದಾರಿ ಆಗಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ನಡೆದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಗ್ರೇಸ್ ಅಂಕಗಳ ಹಂಚಿಕೆಯಲ್ಲಿ ಗೊಂದಲ ಹಾಗೂ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರು. ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು, ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ನಡುವೆಯೇ ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಪಾರದರ್ಶಕತೆಗೆ ಒತ್ತಾಯಿಸಿರುವುದು ಗಮನ ಸೆಳೆದಿದೆ.
ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣ ಆಗಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ಲೋಪದೋಷಗಳ ಸರಣಿಗೆ ತಕ್ಷಣವೇ ಬ್ರೇಕ್ ಹಾಕುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ವ್ಯವಸ್ಥೆಯತ್ತ ಕೊಂಡೊಯ್ಯುವ ಬಗ್ಗೆ ಸರ್ಕಾರದ ಯೋಜನೆಗಳೇನು ಎಂಬುದರ ಕುರಿತು ವರದಿ ನೀಡುವಂತೆ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ನೀಟ್ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ಧಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.


Click it and Unblock the Notifications
