Sachin Tendulkar: ಪ್ಯಾರಾ ಕ್ರಿಕೆಟಿಗ ಅಮೀರ್ ಲೋನ್ ಭೇಟಿಯಾದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್
ರೀನಗರ , ಫೆಬ್ರವರಿ.25: ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಕುಟುಂಬದೊಂದಿಗೆ ಬಿಡುವಿನ ಸಮಯ ಕಳೆಯುತ್ತಿದ್ದಾರೆ. ಕಾಶ್ಮೀರ ಪ್ರವಾಸದಲ್ಲಿರುವ ಕ್ರಿಕೆಟಿಗ ವಿಕಲಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ ಆಟೋಗ್ರಾಫ್ ಹಾಕಿರುವ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಅವರೊಂದಿಗಿನ ಖುಷಿಯ ಸಂವಾದದ ವೀಡಿಯೊವನ್ನು ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು "ಅಮೀರ್ ನಿಜವಾದ ನಾಯಕ. ಹೀಗೆ ಸ್ಪೂರ್ತಿಯಾಗಿರಿ! ನಿಮ್ಮನ್ನು ಭೇಟಿಯಾಗಲು ಸಂತೋಷವಾಯಿತು" ಎಂದು ಬರೆದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಅಮೀರ್ ಅವರನ್ನು ತಮ್ಮ ಹೋಟೆಲ್ ಕೋಣೆಗೆ ಆಹ್ವಾನಿಸಿ ಮಾತನಾಡಿದ್ದಾರೆ ಮತ್ತು ಅವರಿಗೆ ಸಹಿ ಮಾಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು. ಅಮೀರ್ ಅವರ ಜರ್ನಿ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಅಮೀರ್ ಅವರ ಜೀವನ ಕಥೆಯಿಂದ ಸಚಿನ್ ಭಾವುಕರಾಗಿದ್ದಾರೆ. ಜೊತೆಗೆ ಅವರ ಕುಟುಂಬದೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.
ವೀಡಿಯೊದ ಆರಂಭದಲ್ಲಿ, ಸಚಿನ್ ತೆಂಡೂಲ್ಕರ್ ಅವರು ಅಮೀರ್ ಹುಸೇನ್ ಲೋನ್ ಸಂವಹನ ನಡೆಸುವುದನ್ನು ಮತ್ತು ಅವರನ್ನು ತಬ್ಬಿಕೊಳ್ಳುವುದನ್ನು ಕಾಣಬಹುದು. ವೀಡಿಯೊದ ಉದ್ದಕ್ಕೂ, ಅಮೀರ್ ಕ್ರಿಕೆಟಿಗನಾಗಿ ತನ್ನ ಜರ್ನಿಯನ್ನು ಹಂಚಿಕೊಂಡಿದ್ದಾರೆ. ಸಚಿನ್ ಹೇಗೆ ತನ್ನ ಮನಸ್ಸಿನಲ್ಲಿ ದೀರ್ಘಕಾಲೀನ ಪ್ರಭಾವ ಬೀರಿದ್ದಾರೆ. ಅದು ಕ್ರಿಕೆಟ್‌ಗೆ ಸೇರಲು ಹೇಗೆ ಪ್ರೋತ್ಸಾಹಿಸಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಮೆಚ್ಚುಗೆಯ ಮಾತುಗಳನ್ನು ಕೇಳಿದ ಅಮೀರ್ ಕೂಡ ಭಾವುಕರಾಗಿದ್ದಾರೆ. ವಿಡಿಯೋದಲ್ಲಿ ಅವರು ಕಣ್ಣೀರು ಒರೆಸುತ್ತಿರುವುದನ್ನು ಕಾಣಬಹುದು.
ಬಿಜ್‌ಬೆಹರಾದಲ್ಲಿನ ವಾಘಮಾ ಎಂಬ ಕುಗ್ರಾಮದಿಂದ ಬಂದ ಅಮೀರ್ 8 ನೇ ವಯಸ್ಸಿನಲ್ಲಿದ್ದಾಗ ತನ್ನ ತಂದೆಯ ಗಿರಣಿಯಲ್ಲಿ ಸಂಭವಿಸಿದ ದುರಂತ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಹತಾಶೆಗೆ ಒಳಗಾಗುವ ಬದಲು, ಅಮೀರ್ ಎಲ್ಲಾ ಅಂಗ ವಿಕಲತೆಯನ್ನು ಪಕ್ಕಕ್ಕೆ ಇಟ್ಟು ವೃತ್ತಿಪರ ಕ್ರಿಕೆಟಿಗನಾಗಿ ಗಮನಾರ್ಹ ಪ್ರಯಾಣವನ್ನು ಆರಂಭಿಸಿದರು, 2013 ರಿಂದ ಕ್ರಿಕೆಟ್ ಮೈದಾನದಲ್ಲಿ ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅಮೀರ್ ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.
To Amir, the real hero. Keep inspiring!
— Sachin Tendulkar (@sachin_rt) February 24, 2024
It was a pleasure meeting you. pic.twitter.com/oouk55lDkw
"ಬಿಜ್‌ಬೆಹರಾದ ವಾಘಮಾ ಗ್ರಾಮದ 34 ವರ್ಷದ ವಿಕಲಚೇತನ ಕ್ರಿಕೆಟಿಗ. ಅಮೀರ್ ಹುಸೇನ್ ಲೋನ್ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಅಮೀರ್ 2013 ರಿಂದ ವೃತ್ತಿಪರವಾಗಿ ಕ್ರಿಕೆಟ್ ಆಡುತ್ತಿದ್ದಾರೆ, ಶಿಕ್ಷಕರೊಬ್ಬರು ಅವರ ಕ್ರಿಕೆಟ್ ಪ್ರತಿಭೆಯನ್ನು ಕಂಡುಹಿಡಿದು ಪ್ಯಾರಾ ಕ್ರಿಕೆಟ್‌ಗೆ ಪರಿಚಯಿಸಿದರು. ಅವನು ತನ್ನ ಭುಜ ಮತ್ತು ಕತ್ತಿನ ನಡುವೆ ಬ್ಯಾಟ್ ಹಿಡಿದುಕೊಂಡು ಬ್ಯಾಟಿಂಗ್ ಮತ್ತು ತನ್ನ ಪಾದಗಳನ್ನು ಮತ್ತು ಬ್ಯಾಟ್‌ಗಳನ್ನು ಬಳಸಿ ಬೌಲಿಂಗ್ ಮಾಡುತ್ತಾರೆ. ಅಮೀರ್ ಎಂಟು ವರ್ಷ ವಯಸ್ಸಿನವನಾಗಿದ್ದಾಗ ತನ್ನ ತಂದೆಯ ಮಿಲ್‌ನಲ್ಲಿ ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು" ಎಂದು ಎಎನ್‌ಐ ಜನವರಿ 12 ರಂದು ಟ್ವೀಟ್ ಮಾಡಿತ್ತು.
ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದ ಸಚಿನ್ ತೆಂಡೂಲ್ಕರ್, "ಅಮೀರ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಇದನ್ನು ನೋಡುವಾಗ ನಾನು ತುಂಬಾ ಭಾವುಕನಾಗಿದ್ದೇನೆ. ಇದು ಆಟದ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಮತ್ತು ಸಮರ್ಪಣೆ ಇದೆ ಎಂಬುದನ್ನು ತೋರಿಸುತ್ತದೆ. ನಾನು ಒಂದು ದಿನ ಅವರನ್ನು ಭೇಟಿಯಾಗುತ್ತೇನೆ. ಅವರ ಹೆಸರಿನ ಜೆರ್ಸಿಯನ್ನು ಪಡೆಯುತ್ತೇನೆ ಎಂದು ಭಾವಿಸುತ್ತೇನೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ" ಎಂದು ಹೇಳಿದ್ದರು. ಈಗ ಅವರ ಮಾತು ನಡೆಸಿಕೊಟ್ಟಿದ್ದಾರೆ.












Click it and Unblock the Notifications