ಸಚಿನ್, ರಾಹುಲ್ ಗಾಂಧಿ ಭೇಟಿ; ಕಾಂಗ್ರೆಸ್ ಪತ್ರಿಕಾ ಪ್ರಕಟಣೆ
ನವದೆಹಲಿ, ಆಗಸ್ಟ್ 10 : ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಭೇಟಿಯಾಗಿರುವುದನ್ನು ಕಾಂಗ್ರೆಸ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಹೊರಡಿಸಿರುವ ಪ್ರಕಟಣೆಯಲ್ಲಿ ಉಭಯ ನಾಯಕರು ಸೋಮವಾರ ಭೇಟಿಯಾಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಲು ಅವರು ಮುಕ್ತ ಮನಸ್ಸು ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷ ಮತ್ತು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಜೊತೆ ಕೆಲಸ ಮಾಡಲು ಬದ್ಧರಾಗಿದ್ದಾರೆ. ಸಚಿನ್ ಪೈಲೆಟ್ ಭೇಟಿಯ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಅಭಿಪ್ರಾಯವನ್ನು ವಿವರವಾಗಿ ತಿಳಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.

ಈ ಭೇಟಿ ಹಿನ್ನಲೆಯಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಚಿನ್ ಪೈಲೆಟ್ ಬಣ ಎತ್ತಿರುವ ವಿಚಾರಗಳ ಕುರಿತು ಪರಿಶೀಲಿಸಲು ಮೂವರು ಸದಸ್ಯರ ಸಮಿತಿಯನ್ನು ರಚನೆ ಮಾಡಲು ತೀರ್ಮಾನಿಸಿದ್ದಾರೆ.
ಸೋಮವಾರ ಸಚಿನ್ ಪೈಲೆಟ್ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಮತ್ತೊಂದು ಕಡೆ ಸಚಿನ್ ಪೈಲೆಟ್ ಬಣದ ಶಾಸಕರೊಬ್ಬರು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿಯಾಗಿದ್ದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬದಲಾವಣೆ ಮಾಡಬೇಕು ಎಂಬುದು ಸಚಿನ್ ಪೈಲೆಟ್ ಬಣದ ಪ್ರಮುಖ ಬೇಡಿಕೆಯಾಗಿತ್ತು. ರಾಜ್ಯದ ಮುಂದಿನ ರಾಜಕೀಯ ಚಿತ್ರಣ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications