Breaking News: ಶಬರಿಮಲೆಗೆ ತೆರಳುತ್ತಿದ್ದ 5000 ಕರ್ನಾಟಕ ಭಕ್ತರಿಗೆ ಕೇರಳ ಪೊಲೀಸ್ ತಡೆ, ಪ್ರತಿಭಟನೆ
ಕೇರಳ: ಶಬರಿಮಲೆನಲ್ಲಿ ನಾಳೆ ಮಕರ ಸಂಕ್ರಾಂತಿಗೆ ಜ್ಯೋತಿ ದರ್ಶನಕ್ಕೆ ತೆರಳುತ್ತಿದ್ದ ಕರ್ನಾಟಕದ ಸಾವಿರಾರು ಭಕ್ತರಿಗೆ ಕೇರಳ ಪೊಲೀಸರು ತಡೆ ನೀಡಿದ್ದಾರೆ. ಶಬರಿಮಲೆಗೂ ದೂರದ 60 ಕಿಲೋ ಮೀಟರ್ ಪ್ರದೇಶದಲ್ಲಿ ದಾರಿ ಮಧ್ಯೆ ಭಕ್ತರ ವಾಹನಗಳಿಗೆ ತಡೆ ನೀಡಿ, ಕೇರಳದ ಬಸ್‌ಗಳಲ್ಲಿ ತೆರಳುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಅನೇಕ ಭಕ್ತರಿಗೆ ತೊಂದರೆ ಆಗಿದ್ದು, ಪೊಲೀಸರ ತಾರತಮ್ಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಮಧ್ಯೆ ಕೂತು ಪ್ರತಿಭಟಿಸಿದ ಘಟನೆ ಮಂಗಳವಾರ (ಜ.13) ರಂದು ಮಧ್ಯಾಹ್ನ ನಡೆದಿದೆ.
ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ಶಬರಿಮಲೆ ವ್ಯಾಪ್ತಿಯಲ್ಲಿ ಸೂಕ್ತ ಭದ್ರತೆ, ಸೀಮಿತ ಜನರಿಗೆ ಜ್ಯೋತಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಕ್ರಮವೇ ಇದೀಗ ಭಕ್ತರಿಗೆ ಸಮಸ್ಯೆ ತಂಡೊದ್ದಿದೆ ಎನ್ನಲಾಗಿದೆ. ಅಲ್ಲದೇ ಕೇರಳ ಪೊಲೀಸರು ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಕರ್ನಾಟಕದ ಭಕ್ತರು ಆರೋಪಿಸಿದ್ದಾರೆ.

ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಶಬರಿಮಲೆಗೆ ಜ್ಯೂತಿ ದರ್ಶನಕ್ಕೆಂದು ಸುಮಾರು 5000 ಪ್ರಯಾಣಿಕರು ತೆರಳುತ್ತಿದ್ದರು. ಇವರನ್ನು ಶಬರಿಮಲೆಗೂ ಮುನ್ನ 60 ಕಿಲೋ ಮೀಟರ್ ದೂರದ ಎರುಮಲೈನಲ್ಲಿ ಕೇರಳ ಪೊಲೀಸರು ತಡೆದಿದ್ದಾರೆ. ಇಲ್ಲಿಂದ ನೀವು ಖಾಸಗಿ ವಾಹನ ಬಳಸುವಂತಿಲ್ಲ. ಬದಲಾಗಿ ಕೇರಳದ ಬಸ್ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿಂದ ನೀವು ಬಸ್‌ನಲ್ಲಿ ತೆರಳಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕೇರಳದ ಪೊಲೀಸರ ಈ ನಡೆಯಿಂದ ಅಲ್ಲಿಗೆ ಬರುತ್ತಿರುವ ಮಾಲಾಧಾರಿಗಳಿಗೆ ಸಮಸ್ಯೆ ಆಗಿದೆ. ಅನ್ಯ ರಾಜ್ಯದ ವಾಹನಗಳಿಗೆ ತಡೆ ನೀಡಿದ್ದು, ಅಲ್ಲಿನ ಸ್ಥಳೀಯ ವಾಹನಗಳಿಗೆ ಮಾತ್ರವೇ ಶಬರಿಮಲೆಗೆ ತೆರಳಲು ಅವಕಾಶ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ಪೊಲೀಸರು ಹಾಗೂ ಅಲ್ಲಿನ ಸರ್ಕಾರದ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಭಕ್ತರ ಮಧ್ಯ ಮಾತಿನ ಚಕಮಕಿ ನಡೆದಿದ್ದು, ಮಾಲಾಧಾರಿಗಳು ರಸ್ತೆ ಮಧ್ಯ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
60 ಕಿಮೀ. ಬಸ್ ಟಿಕೆಟ್ ದರ 250 ರೂ, ಆಕ್ರೋಶ
ಕೇರಳ ಪೊಲೀಸರಿಂದ ಬೇರೆ ರಾಜ್ಯದ ವಾಹನಗಳನ್ನು ಬಿಡದೇ ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಭಕ್ತರು ದೂರಿದರು. ಸ್ಥಳೀಯ ವಾಹನಗಳನ್ನು ಬೇಗ ಬೇಗ ಬಿಡಲು ಆಂಬ್ಯುಲೆನ್ಸ್ ಕಳುಹಿಸಿದ್ದಾರೆ ಅಂತಲೂ ಭಕ್ತರು ಆರೋಪಿಸಿದ್ದಾರೆ. ಅಲ್ಲದೇ ವಾಹನಗಳನ್ನು 60 ಕಿಲೋ ಮೀಟರ್ ದೂರದ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು. ಅಲ್ಲಿಂದ ಶಬರಿಮಲೆಗೆ ಬಸ್ ಪ್ರಯಾಣಕ್ಕಾಗಿ ಒಬ್ಬರಿಗೆ 250 ರೂಪಾಯಿ ಟಿಕೆಟ್ ದರ ಪಾವತಿಸಬೇಕು. ಇದು ಯಾವ ನ್ಯಾಯ?. ಸಣ್ಣ ಮಕ್ಕಳು ಹಿರಿಯರು ಇರುವ ಕಾರಣ ನಮ್ಮ ನಮ್ಮ ವೈಯಕ್ತಿಕ ವಾಹನಗಳಲ್ಲಿ ತೆರಳಿದರೆ ವಿಶ್ರಾಂತಿಗೂ ಅನುಕೂಲವಾಗಲಿದೆ ಎಂದು ಭಕ್ತರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಮಧ್ಯಸ್ತಿಕೆಗೆ ಆಗ್ರಹ
ಸಾಮಾನ್ಯವಾಗಿ 60 ಕಿಲೋ ಮೀಟರ್ ದೂರಕ್ಕೆ 80 ರೂಪಾಯಿ ದರ ಇರುತ್ತದೆ. ಆದರೆ ಕೇರಳ ಸರ್ಕಾರವು 250 ರೂಪಾಯಿ ನಿರ್ದಿಷ್ಟ ಮೊತ್ತ ನಿಗದಿ ಮಾಡಿ ಸುಲಿಗೆ ಮಾಡುತ್ತಿದೆ. ಕರ್ನಾಟಕದ ಭಕ್ತಾಧಿಗಳಿಗೆ ಅನಾನುಕೂಲವಾಗುತ್ತಿದ್ದು, ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.












Click it and Unblock the Notifications