Sabarimala: ಸಂಜೆ 6.43ಕ್ಕೆ ಮಕರ ಜ್ಯೋತಿ ಕಣ್ತುಂಬಿಕೊಂಡ ಅಯ್ಯಪ್ಪನ ಭಕ್ತರು, ಇಲ್ಲಿದೆ ವಿಡಿಯೊ
ಶಬರಿಮಲೆ: ಕೇರಳದ ಶಬರಿಮಲೆಯಲ್ಲಿ ಕಳೆದೊಂದು ದಿನದಿಂದ ಕಾದು ಕುಳಿತಿದ್ದ ಲಕ್ಷಾಂತರ ಭಕ್ತರಿಗೆ ಇಂದು ಮಕರ ಸಂಕ್ರಾಂತಿಯಂದು (ಜನವರಿ 14) ಶಬರಿಮಲೆ ಮಕರ ಜ್ಯೋತಿ (Sabaraimale Makara Jyothi 2026) ದರ್ಶನವಾಯಿತು. ಸಂಜೆ 6.43 ರಿಂದ 6.46ರವರೆಗೆ ಜ್ಯೋತಿ ರೂಪದಲ್ಲಿ ಅಯ್ಯಪ್ಪನನ್ನು ಕಂಡು ದೇವಸ್ಥಾನ ಬಳಿ ನೆರೆದಿದ್ದ ಮಾಲಾಧಾರಿಗಳು ಪುನೀತರಾದರು.
2026 ವರ್ಷದ ಮೊದಲ ಹಬ್ಬ ಈ ಮಕರ ಸಂಕ್ರಾಂತಿ. ಕರ್ನಾಟಕ ಸೇರಿದಂತೆ ಬೇರೆ ಬೇರೆ ಭಾಗದ ಮಾಲಾಧಾರಿಗಳು ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳಿದ್ದರು. ಬುಧವಾರ ಬೆಳಗ್ಗೆಯಿಂದ ವಿಶೇಷ ಪೂಜೆಯಲ್ಲಿ ನಿರತರಾಗಿದ್ದರು. ಇಂದು ಸಂಕ್ರಾಂತಿ ದಿವಸ ಅಯ್ಯಪ್ಪನ ದೇಗುಲದ ಮುಂದೆ ಪೊನ್ನಮೇಡುವಿನಲ್ಲಿ ಜ್ಯೋತಿಯ ದಿವ್ಯ ದರ್ಶನವಾಯಿತು. ಅಯ್ಯಪ್ಪ ಸ್ವಾಮೀಯ ಗೀತೆಯೊಂದಿಗೆ ಭಕ್ತರು ದೇವರ ಗುಣಗಾನ ಮಾಡಿದರು.

ಮಕರ ಸಂಕ್ರಾಂತಿ ಪ್ರಯುಕ್ತ ಬುಧವಾರ ಶಬರಿಮಲೆ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಪುನಃಸ್ಕಾರಗಳು ಜರುಗಿದವು. ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಿಂದಿನಿಂದಲೂ ಪಂದಳ ರಾಜಮನೆತನದ ಆಭರಣಗಳನ್ನು ತಂದು ಸ್ವಾಮಿಗೆ ಹಾಕಿ ಅಲಂಕಾರ ಮಾಡಲಾಗುತ್ತದೆ. ಅದನ್ನು ಈ ವರ್ಷವು ಮಾಡಿ, ಲಕ್ಷಾಂತರ ಭಕ್ತ ಗಣ ಸಮೂಹದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಹಾಮಂಗಳಾರತಿ ಮಾಡಲಾಯಿತು. ನಂತರ ಸಂಜೆಯು ವಿಶೇಷ ಪೂಜೆ ನಡೆದ ಬೆನ್ನಲ್ಲೆ ಪೊನ್ನಮೇಡುವಿನಲ್ಲಿ ಜ್ಯೋತಿ ಕಾಣಿಸಿತು.
ಶಬರಿಮಲೆ ದೇವಸ್ಥಾನದಲ್ಲಿ ಈ ವರ್ಷ ಜನದಟ್ಟಣೆ ಹೆಚ್ಚಾಗುವ ನಿರೀಕ್ಷೆ ಇತ್ತು. ಹೀಗಾಗಿ 1000 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಿಂದ 60 ಕಿಲೋ ಮೀಟರ್ ದೂರದಲ್ಲಿ ಎರುಮಲೈ ಪ್ರದೇಶದಲ್ಲಿ ಭಕ್ತರ ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಭಕ್ತರು ಕೇರಳ ಸರ್ಕಾರ ನಿಯೋಜಿಸಿದ್ದ ಬಸ್‌ಗಳಲ್ಲಿ ಗಿರಿಗೆ ತೆರಳಬೇಕಿತ್ತು. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಭಕ್ತರಿಗೆ ಅನಾನುಕೂಲವಾಗದಂತೆ ಅಗತ್ಯ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇದರ ನಡುವೆ ದೂರದ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡುವಂತೆ ಪೊಲೀಸರು ತಡೆ ನೀಡಿದ್ದಕ್ಕೆ ಕರ್ನಾಟಕದ ಚಿಕ್ಕಮಗಳೂರಿನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಮಕರ ಸಂಕ್ರಾಂತಿ ಜ್ಯೋತಿ ದರ್ಶನಕ್ಕೆಂದೆ ಮಂಗಳವಾರ (ಜನವರಿ 13) ಸಂಜೆ ಹೊತ್ತಿಗೆ ಕರ್ನಾಟಕದ 5000 ಸಾವಿರ ಭಕ್ತರು ಶಬರಿಮಲೆ ತಲುಪಿದ್ದರು.












Click it and Unblock the Notifications