ನಿಷೇಧದ ಎಫೆಕ್ಟ್: ಭಾರತದಿಂದ ವೈದ್ಯಕೀಯ ಸಲಕರಣೆ ಯಾಚಿಸುತ್ತಿರುವ ರಷ್ಯಾ
ನವದೆಹಲಿ, ಏ. 19: ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧಗಳು (Sanctions against Russia) ತೀವ್ರಗೊಂಡಿವೆ. ರಷ್ಯಾಗೆ ಆಮದಾಗುವ ವಿವಿಧ ಅತ್ಯಗತ್ಯ ವಸ್ತುಗಳ ಪ್ರಮಾಣ ಬಹಳ ಕಡಿಮೆ ಆಗಿದೆ. ಯೂರೋಪ್‌ನಿಂದ ಬಹುತೇಕ ಆಮದು ನಿಂತುಹೋಗಿದೆ. ಚೀನಾದಿಂದಲೂ ರಷ್ಯಾಗೆ ಬರುವ ಸರಕುಗಳು ಕಡಿಮೆ ಆಗಿದೆ. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾಗೆ ವೈದ್ಯಕೀಯ ಸಾಮಗ್ರಿಗಳ (Medical Equipment) ಕೊರತೆ ಬಹಳ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ನೆರವನ್ನು ರಷ್ಯಾ ಯಾಚಿಸುತ್ತಿದೆ.
ಭಾರತ ಮತ್ತು ರಷ್ಯಾದ ವೈದ್ಯಕೀಯ ಉಪಕರಣಗಳ ಕಂಪನಿಗಳು ಏಪ್ರಿಲ್ 22ರಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ಸೇರಲಿದ್ದು, ವೈದ್ಯಕೀಯ ಉಪಕರಣಗಳನ್ನು ಭಾರತದಿಂದ ರಷ್ಯಾಗೆ ಹೇಗೆ ಸರಬರಾಜು ವ್ಯವಸ್ಥೆ ಮಾಡಬಹುದು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಿವೆ. ಭಾರತೀಯ ವೈದ್ಯಕೀಯ ಉಪಕರಣ ಉದ್ಯಮ ಸಂಸ್ಥೆಯ ಅಧಿಕಾರಿ ರಾಜೀವ್ ನಾಥ್ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಭಾರತ ಮತ್ತು ರಷ್ಯಾ ನಡುವೆ ದ್ವಿಪಕ್ಷೀಯ ವ್ಯವಹಾರ ಸಂಬಂಧವನ್ನು ಪುಷ್ಟೀಕರಿಸುವ ಬ್ಯುಸಿನೆಸ್ ರಷ್ಯಾ ಸಂಸ್ಥೆ ಈ ಬೆಳವಣಿಗೆಯನ್ನ ಖಚಿಪಡಿಸಿರುವುದು ಎನ್‌ಡಿಟಿವಿ ವರದಿಯಿಂದ ತಿಳಿದುಬಂದಿದೆ.
ಭಾರತಕ್ಕೆ ರಫ್ತು ಹೆಚ್ಚಿಸಲು ಒಳ್ಳೆಯ ಸಂದರ್ಭ:
ರಷ್ಯಾ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಷ್ಯಾಗೆ ಭಾರತ ರಫ್ತು ಪ್ರಮಾಣದಲ್ಲಿ ಬಹಳ ಹೆಚ್ಚಾಗುವ ನಿರೀಕ್ಷೆ ಇದೆ. ರಷ್ಯಾದ ಮಾರುಕಟ್ಟೆಯಲ್ಲಿ ಭಾರತದ ಪಾತ್ರ ಸದ್ಯದ ಮಟ್ಟಿಗೆ ಬಹಳ ಚಿಕ್ಕದು. ರಷ್ಯಾದಿಂದ ಭಾರತ ಮಿಲಿಟರಿ ಉಪಕರಣಗಳನ್ನ ಆಮದು ಮಾಡಿಕೊಳ್ಳುತ್ತದೆಯೇ ಹೊರತು ಇಲ್ಲಿಂದ ರಷ್ಯಾಗೆ ರಫ್ತಾಗುವ ಪ್ರಮಾಣ ನಗಣ್ಯವೇ ಇದೆ. ಈ ವರ್ಷ ರಷ್ಯಾಗೆ ಭಾರತ ಮಾಡುವ ರಫ್ತು ಮೌಲ್ಯ 200 ಕೋಟಿ ರೂಗೆ ಏರುವ ನಿರೀಕ್ಷೆ ಇದೆ.

ಇನ್ನು, ಭಾರತ ಮತ್ತು ರಷ್ಯಾ ನಡುವಿನ ವ್ಯವಹಾರಕ್ಕೆ ಸ್ಥಳೀಯ ಕರೆನ್ಸಿಗಳನ್ನು ಬಳಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ಕೋಲ್ಡ್ ವಾರ್ ಸಂದರ್ಭದಲ್ಲೂ ಆಗಿನ ಸೋವಿಯತ್ ರಷ್ಯಾ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳು ಇದ್ದಾಗ ಭಾರತ ಮತ್ತು ರಷ್ಯಾ ದೇಶಗಳ ಮಧ್ಯೆ ಡಾಲರ್ ಬಿಟ್ಟು ಸ್ಥಳೀಯ ಕರೆನ್ಸಿಗಳನ್ನ ಬಳಸಲಾಗುತ್ತಿತ್ತು. ಈಗಲೂ ಅಂಥದ್ದೇ ದಾರಿ ಅನುಸರಿಸುವ ಸಾಧ್ಯತೆ ಇದೆ.
ಭಾರತದ ಮೇಲೆ ಪಶ್ಚಿಮ ದೇಶಗಳ ಕಣ್ಣು:
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಅನೇಕ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿವೆ. ಅಂತಾರಾಷ್ಟ್ರೀಯವಾಗಿ ರಷ್ಯಾವನ್ನು ಏಕಾಂಗಿಯಾಗಿಸುವ ಪ್ರಯತ್ನಗಳಾಗುತ್ತಿವೆ. ಹೀಗಿದ್ದರೂ ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುವ ತೈಲವನ್ನು ಭಾರತ ಖರೀದಿ ಮಾಡಲು ಹೊರಟಿರುವುದು ಅಮೆರಿಕ ಹಾಗು ಅದರ ಮಿತ್ರ ರಾಷ್ಟ್ರಗಳಿಗೆ ಇರಿಸುಮುರುಸು ತಂದಿದೆ. ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆಯನ್ನೂ ನೀಡುತ್ತಿವೆ.

ಸ್ವಾತಂತ್ರ್ಯೋತ್ತರ ಭಾರತ ಸಾಂಪ್ರದಾಯಿಕವಾಗಿ ರಷ್ಯಾ ಜೊತೆ ನಿಕಟ ಸಂಬಂಧ ಇರಿಸಿಕೊಂಡಿದೆ. ಭಾರತಕ್ಕೆ ಸದಾಕಾಲ ನೆರವು ನೀಡಲು ಮುಂದಾಗುವ ಕೆಲ ದೇಶಗಳಲ್ಲಿ ರಷ್ಯಾ ಕೂಡ ಒಂದು. ಭಾರತದ ಬಳಿ ಇರುವ ಬಹುತೇಕ ಶಸ್ತ್ರಾಸ್ತ್ರಗಳು ರಷ್ಯಾದಿಂದಲೇ ಆಮದಾಗಿರುವಂಥವು. ದಶಕಗಳಿಂದ ಬೆಳದಿರುವ ರಷ್ಯಾದ ಸ್ನೇಹವನ್ನು ಭಾರತ ಸುಲಭಕ್ಕೆ ಬಿಡುವ ಸಾಧ್ಯತೆ ಇಲ್ಲ. ಹಾಗೆಯೇ, ಅತಿಕ್ರಮಣ ಬುದ್ಧಿಯ ಚೀನಾವನ್ನು ನಿಗ್ರಹಿಸಲು ಭಾರತಕ್ಕೆ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳ ನೆರವು ಅಗತ್ಯ. ಅಮೆರಿಕಕ್ಕೂ ಕೂಡ ಚೀನಾವನ್ನು ಎದುರಿಸಲು ಭಾರತ ಅಗತ್ಯ. ಹೀಗಾಗಿ, ಅಮೆರಿಕ ಮತ್ತು ರಷ್ಯಾ ನಡುವೆ ಭಾರತ ಬಹಳ ಸಮತೋಲನದಿಂದ ಸ್ನೇಹ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications