ತಮಿಳುನಾಡಿನ 35 ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಮೆರವಣಿಗೆಗೆ ಅನುಮತಿ; ಮದ್ರಾಸ್ ಹೈಕೋರ್ಟ್ ತೀರ್ಪು
ತಮಿಳುನಾಡಿನ 35 ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಮೆರವಣಿಗೆಗೆ ಅನುಮತಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಅಕ್ಟೋಬರ್ 22 ಮತ್ತು 29 ರಂದು ತಮಿಳುನಾಡಿನಲ್ಲಿ ರೂಟ್ ಮಾರ್ಚ್ ಆಯೋಜಿಸಲು ಮದ್ರಾಸ್ ಹೈಕೋರ್ಟ್ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಗೆ ಅನುಮತಿ ನೀಡಿದೆ.
ಆರ್‌ಎಸ್‌ಎಸ್ ಸಲ್ಲಿಸಿದ ರಿಟ್ ಅರ್ಜಿಯ ಮೇರೆಗೆ ನ್ಯಾಯಾಲಯವು ಆರ್‌ಎಸ್‌ಎಸ್ ಮೆರವಣಿಗೆಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ನ್ಯಾಯಮೂರ್ತಿ ಜಿ. ಜಯಚಂದ್ರ ಅವರು ಕಾರ್ಯಕ್ರಮಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಸೋಮವಾರ ಆದೇಶ ಹೊರಡಿಸಿದ್ದಾರೆ. ಕನಿಷ್ಠ ಮೂರರಿಂದ ಐದು ದಿನ ಮುಂಚಿತವಾಗಿ ಪೊಲೀಸರು ಅನುಮತಿ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೆರವಣಿಗೆಯ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಹೇಳಿದ ನ್ಯಾಯಾಧೀಶರು, ಅನುಮತಿ ನೀಡುವ ಬಗ್ಗೆ ಪೊಲೀಸರು ಎತ್ತಿದ್ದ ಎಲ್ಲ ಆಕ್ಷೇಪಣೆಗಳನ್ನು ತಿರಸ್ಕರಿಸಿದರು. ಆದಾಗ್ಯೂ ನ್ಯಾಯಾಧೀಶರು ಸಮಂಜಸವಾದ ನಿರ್ಬಂಧಗಳನ್ನು ವಿಧಿಸಲು ಅವಕಾಶ ನೀಡಿದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಿ ಕಾರ್ತಿಕೇಯನ್ ಮತ್ತು ವಕೀಲ ರಾಬು ಮನೋಹರ್ ಅವರ ವಾದವನ್ನು ಆಲಿಸಿದ ಬಳಿಕ ಈ ಆದೇಶ ಹೊರಡಿಸಲಾಗಿದೆ.
ಕಳೆದ ಏಪ್ರಿಲ್‌ನಲ್ಲಿ ಇದನ್ನು ಡಿಎಂಕೆ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ರಾಜ್ಯದಲ್ಲಿ ಹಿಂದಿ ಭಾಷಿಕ ಜನರ ಮೇಲೆ ದಾಳಿಗಳು ನಡೆಯುತ್ತಿವೆ ಎಂಬ ವದಂತಿ ಹರಡಿರುವುದರಿಂದ ಅವರಲ್ಲಿ ಆತಂಕ ಉಂಟಾಗಿದೆ ಎಂಬುದನ್ನು ಅದು ಉಲ್ಲೇಖಿಸಿತ್ತು.
ತಮಿಳುನಾಡಿನಲ್ಲಿ ಆರೆಸ್ಸೆಸ್ ಮುಖಂಡರು, ಕಾರ್ಯಕರ್ತರ ಮೇಲೆ ಇತ್ತೀಚಿನ ದಿನಗಳಲ್ಲಿ ನಿರಂತರ ದಾಳಿಗಳು ನಡೆಯುತ್ತಿವೆ. ಸಂಘಟನೆಯ ಕಚೇರಿ, ನಾಯಕರ ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಅನೇಕ ಘಟನೆಗಳು ವರದಿಯಾಗಿದ್ದವು. ಇವುಗಳ ನಡುವೆ ಆರೆಸ್ಸೆಸ್ ತನ್ನ ಬಲಪ್ರದರ್ಶನಕ್ಕೆ ಮುಂದಾಗಿದೆ. ಹೀಗಾಗಿ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿಯುತ ಮೆರವಣಿಗೆ ಮಾಡಲು ರಾಜ್ಯ ಸರ್ಕಾರ ತಮ್ಮದೇನು ತಕಾರರು ಇಲ್ಲ ಎಂದು ಹೇಳಿದೆ.












Click it and Unblock the Notifications