ಉತ್ತರ ಪ್ರದೇಶದಲ್ಲಿ ಬಿಎಸ್ಪಿಗೆ ಮರ್ಮಾಘಾತ, ಸೇಡು ತೀರಿಸಿಕೊಂಡ ಬಿಜೆಪಿ
ಲಕ್ನೋ, ಮಾರ್ಚ್ 24: ಅಡ್ಡ ಮತದಾನ, 2 ಗಂಟೆಗಳ ಮಿಂಚಿನ ಬೆಳವಣಿಗೆಗಳಿಗೆ ಶುಕ್ರವಾರ ಉತ್ತರ ಪ್ರದೇಶದಲ್ಲಿ ನಡೆದ ರಾಜ್ಯಸಭೆ ಚುನಾವಣೆ ಸಾಕ್ಷಿಯಾಯಿತು.
ಗಂಟೆಯಿಂದ ಗಂಟೆಗೆ, ನಿಮಿಷದಿಂದ ನಿಮಿಷಕ್ಕೆ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದಾಗೆ ಬಿಜೆಪಿ ಅಚ್ಚರಿಯ ರೀತಿ 9 ಸ್ಥಾನ ಗೆದ್ದರೆ ಎಸ್ಪಿ 1 ಸ್ಥಾನ ಗೆದ್ದುಕೊಂಡಿತ್ತು. ಬಿಎಸ್ಪಿ ಒಂದೂ ಸ್ಥಾನ ಗೆಲ್ಲಲಾಗದೆ ಅವಮಾನ ಅನುಭವಿಸಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಜ್ಯಸಭೆ ಚುನಾವಣೆಯಲ್ಲಿ 10ನೇ ಸ್ಥಾನಕ್ಕೆ ಬಿಎಸ್ಪಿಯ ಭೀಮ್ ರಾವ್ ಅಂಬೇಡ್ಕರ್ ಮತ್ತು ಬಿಜೆಪಿಯ ಅನಿಲ್ ಅಗರ್ವಾಲ್ ನಡುವೆ ಪೈಪೋಟಿ ಇತ್ತು. ಈ ಸ್ಥಾನವನ್ನು ಬಿಎಸ್ಪಿ ಗೆಲ್ಲುತ್ತೆ ಎಂದು ಭಾವಿಸಲಾಗಿತ್ತು. ಆದರೆ ಮಿಂಚಿನ ತಂತ್ರಗಳನ್ನು ರೂಪಿಸಿದ ಬಿಜೆಪಿ ಅಂಬೇಡ್ಕರ್ ರನ್ನು ಸೋಲಿಸಿತು.
ಉತ್ತರ ಪ್ರದೇಶದಲ್ಲಿ ಗೆಲ್ಲಲು 37 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕಾಗಿತ್ತು. ಆದರೆ ಎಸ್ಪಿ ಮತ್ತು ಕಾಂಗ್ರೆಸ್ ಬೆಂಬಲದ ನಡುವೆಯೂ ಬಿಎಸ್ಪಿಯ ಅಂಬೇಡ್ಕರ್ ಕೇವಲ 33 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಸೋಲೊಪ್ಪಿಕೊಳ್ಳಬೇಕಾಯಿತು.

ಅಗರ್ವಾಲ್ ಇದೇ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಪಡೆದಿದ್ದರಿಂದ ಗೆಲುವು ಸಾಧಿಸಿದರು.
ಅಂದುಕೊಂಡಂತೆ ನಡೆದಿದ್ದರೆ ಬಿಎಸ್ಪಿ ಅಭ್ಯರ್ಥಿ ಗೆಲ್ಲಬೇಕಾಗಿತ್ತು. ಆದರೆ ಜೈಲಿನಲ್ಲಿರುವ ಓರ್ವ ಎಸ್ಪಿ ಮತ್ತು ಬಿಎಸ್ಪಿ ಅಭ್ಯರ್ಥಿಗೆ ಮತಚಲಾಯಿಸುವ ಹಕ್ಕು ಸಿಗಲಿಲ್ಲ. ಇನ್ನು ಎರಡೂ ಪಕ್ಷಗಳಲ್ಲಿ ಒಬ್ಬೊಬ್ಬರು ಅಡ್ಡಮತದಾನ ಮಾಡಿದರು. ಹೀಗೆ 4 ಮತಗಳನ್ನು ಬಿಎಸ್ಪಿ ಕಳೆದುಕೊಳ್ಳಬೇಕಾಯಿತು. ಮಾತ್ರವಲ್ಲದೇ ಸೋಲನ್ನೂ ಕಾಣಬೇಕಾಯಿತು.
ಇನ್ನು ನಿಶಾದ್ ಪಕ್ಷದ ಏಕೈಕ ಶಾಸಕ ಬಿಜೆಪಿ ಪರವಾಗಿ ಮತ ಚಲಾಯಿಸಿದರೆ, ಎಸ್ಪಿ ಮತ್ತು ಬಿಎಸ್ಪಿಯ ತಲಾ ಒಬ್ಬರು ಶಾಸಕರು ಬಿಜೆಪಿ ಪರ ಮತ ಹಾಕಿದರು. ಇನ್ನು ಪಕ್ಷೇತರ ಶಾಸಕ ರಾಜಾ ಭಯ್ಯಾ ಕೂಡ ಬಿಜೆಪಿ ಪರ ಮತ ಚಲಾಯಿಸಿದ ಅನುಮಾನಗಳಿವೆ.
ಮಧ್ಯಾಹ್ನ 3 ಗಂಟೆಗೆ ಮತದಾನ ಪೂರ್ಣಗೊಂಡಿತು. ಆ ನಂತರ ಹಲವು ರೋಚಕ ಘಟನೆಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಯಿತು. ಬಿಎಸ್ಪಿ ಮತ್ತು ಎಸ್ಪಿ ಅಡ್ಡ ಮತದಾನ ನಡೆದಿದೆ ಎಂದು ಚುನಾವನಾ ಆಯೋಗಕ್ಕೆ ದೂರನ್ನೂ ನೀಡಿದವು. ಶಾಸಕರು ತಮ್ಮ ಏಜೆಂಟ್ ಗಳಿಗೆ ಬ್ಯಾಲೆಟ್ ತೋರಿಸಿಲ್ಲ ಎಂದು ಇಬ್ಬರೂ ದೂರಿದರು. ಈ ಎಲ್ಲಾ ಬೆಳವಣಿಗೆಗಳ ನಂತರ ಮತಎಣಿಕೆ ನಡೆಯುವಾಗ ರಾತ್ರಿಯಾಗಿತ್ತು.
ಮೊನ್ನೆ ನಡೆದ ಉಪಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಸೇರಿಕೊಂಡು ಬಿಜೆಪಿಗೆ ಹೀನಾಯ ಸೋಲುಣಿಸಿತ್ತು. ಇದಕ್ಕೆ ಪ್ರತಿಯಾಗಿ ಇದೀಗ ಬಿಜೆಪಿ ಸೇಡು ತೀರಿಸಿಕೊಂಡಿದೆ.












Click it and Unblock the Notifications