Get Updates
Get notified of breaking news, exclusive insights, and must-see stories!

FAQ : ಹಳೇ 500, 1,000 ರುಪಾಯಿ ನೋಟು ಏನು ಮಾಡೋದು?

ಬೆಂಗಳೂರು, ನವೆಂಬರ್ 9: 500 ಹಾಗೂ 1,000 ರುಪಾಯಿ ನೋಟುಗಳ ಬಳಕೆ ಅಧಿಕೃತವಾಗಿ ನಿಂತಿದ್ದು, ಇನ್ನೇನಿದ್ದರೂ 500, 2000 ರುಪಾಯಿ ನೋಟು ಸದ್ಯದಲ್ಲೇ ಚಾಲನೆಗೆ ಬರಲಿದೆ. ನಕಲಿ ನೋಟುಗಳನ್ನು ದೇಶದೊಳಗೆ ಚಲಾವಣೆ ಆಗುವಂತೆ ಮಾಡಿದ್ದ ಪಾಕಿಸ್ತಾನದ ಕುತಂತ್ರಕ್ಕೆ ಇದು ಬಲವಾದ ಹೊಡೆತ.

ಈ ನೋಟು ಚಲಾವಣೆ ಹಿನ್ನೆಲೆಯಲ್ಲಿ ಕೆಲ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ. ಅದರ ಜತೆಗೆ ಕೆಲವು ಸಹಜವಾದ ಪ್ರಶ್ನೆಗಳಿಗೆ ಉತ್ತರ ಕೂಡ ನೀಡಲಾಗಿದೆ.[500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ]

-ನವೆಂಬರ್ 8ರ ಮಧ್ಯರಾತ್ರಿಯಿಂದ 500 ಹಾಗೂ 1,000 ರುಪಾಯಿ ನೋಟುಗಳ ಅಧಿಕೃತವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತದೆ.
-ಈಗ ಇರುವ 500 ಹಾಗೂ 1,000 ರುಪಾಯಿ ನೋಟುಗಳನ್ನು ನವೆಂಬರ್ 10 ಹಾಗೂ ಡಿಸೆಂಬರ್ 30ರ ಮಧ್ಯೆ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ ಬದಲಿಸಿಕೊಳ್ಳಬಹುದು.
-ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸದಾದ 500 ಹಾಗೂ 2000 ರುಪಾಯಿ ನೋಟು ವಿತರಿಸುತ್ತದೆ.
-ನಿಗದಿತ ದಿನಾಂಕದೊಳಗೆ ಹಳೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಘೋಷಣಾ ಪತ್ರ ನೀಡಿ, ಆ ನಂತರ ಬದಲಾವಣೆ ಮಾಡಿಕೊಳ್ಳಬಹುದು.
-ಮುಂದಿನ 72 ಗಂಟೆಗಳ ಕಾಲ ವಿಶೇಷ ಅನುಕೂಲ ಮಾಡಲಾಗಿದೆ. ಆಸ್ಪತ್ರೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಪೆಟ್ರೋಲ್ ಬ್ಯಾಂಕ್ ಗಳಲ್ಲಿ 500 ಹಾಗೂ 1,000 ರುಪಾಯಿ ನೋಟುಗಳನ್ನು ಸ್ವೀಕರಿಸಲಾಗುತ್ತದೆ.
-ನವೆಂಬರ್ 9ರಂದು ಬ್ಯಾಂಕ್ ಗಳು ಸಾರ್ವಜನಿಕ ಸೇವೆಗೆ ಲಭ್ಯವಿರುವುದಿಲ್ಲ.

Note 500

ನಿಮಗೆ ಗೊತ್ತಿರಬೇಕಾದ ಸಂಗತಿಗಳು
500 ಹಾಗೂ 1,000 ರುಪಾಯಿ ನೋಟುಗಳಿಗೆ ಎಲ್ಲಿಯವರೆಗೆ ಬೆಲೆ ಇರುತ್ತದೆ?
ಈ ನೋಟುಗಳಿಗೆ ಡಿಸೆಂಬರ್ 30ರವರೆಗೆ ಬೆಲೆ ಇರುತ್ತದೆ. ಅಲ್ಲಿಯವರೆಗೆ ಬ್ಯಾಂಕ್ ಗೆ ಡೆಪಾಸಿಟ್ ಮಾಡಬಹುದು.

ಎಷ್ಟು ಮೊತ್ತದ ಹಣವನ್ನು ನಗದು ರೂಪದಲ್ಲಿ ಸದ್ಯಕ್ಕೆ ಪಡೆಯಬಹುದು?
4 ಸಾವಿರ ರುಪಾಯಿ ನಗದು ರೂಪದಲ್ಲಿ ಪಡೆಯಬಹುದು. ಮಿಕ್ಕ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡ್ತಾರೆ.

ನನ್ನ ಹತ್ತಿರ ಅಷ್ಟೊಂದು ನಗದು ಇಲ್ಲ, ಏನು ಮಾಡೋದು?
ಇಂಟರ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್-ಡೆಬಿಟ್ ಕಾರ್ಡ್, ಚೆಕ್ ಬಳಸಬಹುದು.

ಬ್ಯಾಂಕ್ ಅಕೌಂಟ್ ಇಲ್ಲದ ಪಕ್ಷದಲ್ಲಿ ಏನು ಮಾಡಬಹುದು?
ಒಂದು ಬ್ಯಾಂಕ್ ಖಾತೆ ತೆರೆಯಬೇಕು ಅಥವಾ ಹಣವನ್ನು ಪೋಸ್ಟ್ ಆಫೀಸ್ ನಲ್ಲಿ, ಆರ್ ಬಿಐನಲ್ಲಿ. ವಾಣಿಜ್ಯ ಬ್ಯಾಂಕ್ ಗಳಲ್ಲಿ, ಕೋ ಆಪರೇಟಿವ್ ಬ್ಯಾಂಕ್ ಗಳು ಮತ್ತು ಇತರೆಡೆ ಖಾತೆ ತೆರೆಯಬಹುದು.

Note 1000

ನಮ್ಮ ಖಾತೆ ಇರುವ ಬ್ಯಾಂಕ್ ಗೆ ಹೋಗಬೇಕಾ?
ನಾಲ್ಕು ಸಾವಿರದವರೆಗಿನ ನೋಟು ಬದಲಾವಣೆಗೆ ಯಾವುದೇ ಬ್ಯಾಂಕ್ ಗೆ ಹೋಗಬಹುದು. ಅದಕ್ಕಿಂತ ಹೆಚ್ಚಿನ ಮೊತ್ತವಾದರೆ ಈಗಾಗಲೇ ಖಾತೆ ಇರುವ ಬ್ಯಾಂಕ್ ಗೆ ಹೋಗಬೇಕು. ನಾಲ್ಕು ಸಾವಿರ ಮೇಲ್ಪಟ್ಟ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತದೆ. ಒಂದು ವೇಳೆ ಬೇರೆ ಬ್ಯಾಂಕ್ ಗೆ ಹೋಗೋದಾದರೆ ಅಧಿಕೃತ ಗುರುತಿನ ಚೀಟಿ ಹಾಗೂ ಬ್ಯಾಂಕ್ ಮಾಹಿತಿ ನೀಡಿದರೆ ಹೆಚ್ಚಿನ ಹಣವನ್ನು ಖಾತೆಗೆ ಹಾಕಲಾಗುತ್ತದೆ.

ನನ್ನ ಖಾತೆ ಇರುವ ಬ್ಯಾಂಕ್ ನ ಯಾವುದೇ ಶಾಖೆಗೆ ಹೋಗಬಹುದಾ?
ಹೌದು, ಹೋಗಬಹುದು.

ನನ್ನ ಸ್ನೇಹಿತರು ಅಥವಾ ಸಂಬಂಧಿಕರು ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಬಹುದಾ?
ಹೋಗಬಹುದು. ಅವರು ಲಿಖಿತ ರೂಪದಲ್ಲಿ ಅನುಮತಿ ನೀಡಬೇಕು. ಜತೆಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು.

ನಾವೇ ವೈಯಕ್ತಿಕವಾಗಿ ಬ್ಯಾಂಕ್ ಗೆ ಹೋಗಬೇಕಾ?
ನೀವೇ ಹೋದರೆ ಇಡೀ ಪ್ರಕ್ರಿಯೆ ತುಂಬ ಸಲೀಸು. ನಿಮ್ಮ ಪರವಾಗಿ ಯಾರನ್ನಾದರೂ ಕಳಿಸಿದರೆ ಲಿಖಿತವಾಗಿ ಬರೆದು, ಅವರು ನಿಮ್ಮ ಪ್ರತಿನಿಧಿ ಅಂತ ತಿಳಿಸಬೇಕು. ಅದರ ಜತೆಗೆ ಅವರ ಅಧಿಕೃತ ಗುರುತಿನ ಚೀಟಿಯನ್ನೂ ಜತೆಗೆ ತೆಗೆದುಕೊಂಡು ಹೋಗಬೇಕು.

ಗುರುತಿನ ಚೀಟಿ ಅನ್ನೋ ಹಾಗೆ ಯಾವ ದಾಖಲೆಗಳನ್ನು ನೀಡಬಹುದು?
ಆಧಾರ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ನರೇಗಾ ಕಾರ್ಡ್, ಪಾನ್ ಕಾರ್ಡ್, ಸರಕಾರದ ಯಾವುದೇ ಇಲಾಖೆ ವಿತರಿಸಿದ ಗುರುತಿನ ಚೀಟಿ, ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿದ ಗುರುತಿನ ಚೀಟಿ.

ಎಟಿಎಂನಲ್ಲಿ ಹಣ ಡಿಪಾಸಿಟ್ ಮಾಡಬಹುದಾ?
ಹೌದು ಮಾಡಬಹುದು. ಆದರೆ ನವೆಂಬರ್ 9ರಂದು ಎಟಿಎಂ ಬಂದ್ ಆಗಿರುತ್ತವೆ.

ಎಟಿಎಂನಿಂದ ಎಷ್ಟು ಹಣ ವಿಥ್ ಡ್ರಾ ಮಾಡಬಹುದು?
ನವೆಂಬರ್ 18ರವರೆಗೆ ಎರಡು ಸಾವಿರ ರುಪಾಯಿ, ಆ ನಂತರ ಅದನ್ನು 4 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಹಣ ಡ್ರಾ ಮಾಡುವುದಕ್ಕೆ ಚೆಕ್ ಬಳಸಬಹುದಾ?
ಹೌದು ಚೆಕ್ ಬಳಸಬಹುದು. ಆದರೆ ಚೆಕ್ ಅಥವಾ ವಿಥ್ ಡ್ರಾ ಸ್ಲಿಪ್ ಬಳಸಿ ದಿನಕ್ಕೆ ಹತ್ತು ಸಾವಿರ ಮಾತ್ರ ಡ್ರಾ ಮಾಡಲು ಸಾಧ್ಯ. ಒಂದು ವಾರಕ್ಕೆ ಗರಿಷ್ಠ ಅಂದರೆ ಎಟಿಎಂನ ವ್ಯವಹಾರವೂ ಸೇರಿ ಇಪ್ಪತ್ತು ಸಾವಿರ ಮಿತಿ ನಿಗದಿಯಾಗಿದೆ. ಇದು ನವೆಂಬರ್ 24ರವರೆಗೆ ಈ ರೀತಿ ಇರುತ್ತದೆ.

ನಾನು ದೇಶದಿಂದ ಹೊರಗೆ ಇದ್ದರೆ ಏನು ಮಾಡೋದು?
ನಿಮ್ಮ ಪರವಾಗಿ ಯಾರಿಗಾದರೂ ನೋಟು ಡಿಪಾಸಿಟ್ ಮಾಡುವಂತೆ ಹೇಳಬಹುದು. ಅದಕ್ಕಿರುವ ನಿಯಮ ಪಾಲಿಸಬೇಕು ಅಷ್ಟೇ.

ನಾನು ಅನಿವಾಸಿ ಭಾರತೀಯ, ಏನು ಮಾಡೋದು?
ಎನ್ ಆರ್ ಒ ಖಾತೆಯಲ್ಲಿ ಹಣ ಜಮೆ ಮಾಡಬಹುದು.

ನಾನು ವಿದೇಶಿ ಪ್ರವಾಸಿ, ಏನು ಮಾಡಬಹುದು?
72 ಗಂಟೆಯೊಳಗಾಗಿ ಐದು ಸಾವಿರ ಮೊತ್ತಕ್ಕೆ ಸಮನಾದ ವಿದೇಶಿ ಕರೆನ್ಸಿ ಪಡೆಯಬಹುದು. ಅದಕ್ಕೆ ಗುರುತಿನ ಚೀಟಿ ತೋರಿಸಬೇಕಾಗುತ್ತದೆ.

ನಮಗೆ ಸಮಸ್ಯೆ ಎದುರಾದರೆ ಏನು ಮಾಡಬಹುದು?
www.rbi.org.in ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. ನಿಮ್ಮ ದೂರುಗಳನ್ನು [email protected]ಗೆ ಮೇಲ್ ಮಾಡಬಹುದು. ಅಥವಾ 022-22602201/02222602944 ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+