ವಿಜಯ್ ಮಲ್ಯ, ನೀರವ್ ಮೋದಿ ಸೇರಿ ಹಲವರಿಂದ 15 ಸಾವಿರ ಕೋಟಿ ಸಾಲ ವಸೂಲಿ ಮಾಡಿದ ಸರ್ಕಾರ
ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ಪರಾರಿಯಾಗಿರುವ ಹಲವರಿಂದ ಸರ್ಕಾರ ಸಾಲ ವಸೂಲಿ ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಜಯ್ ಮಲ್ಯ, ನೀರವ್ ಮೋದಿ ಸೇರಿ ಹಲವರು ಸಾವಿರಾರು ಕೋಟಿ ಸಾಲ ಮಾಡಿ ದೇಶ ತೊರೆದಿದ್ದಾರೆ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರ, ಸಾಲ ವಸೂಲಾತಿ ಪ್ರಕ್ರಿಯೆ ನಡೆಸುತ್ತಿದೆ.
ಸದ್ಯ ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಆರೋಪಿಗಳಿಂದ 15,113 ಕೋಟಿ ರೂ.ಗಳನ್ನು ಸರ್ಕಾರ ವಸೂಲಿ ಮಾಡಿದೆ ಮತ್ತು ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ನೀಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

ಆದರೆ ಪ್ರತಿಯೊಬ್ಬರಿಂದ ಎಷ್ಟು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ನಿಖರ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. 15 ಸಾವಿರ ಕೋಟಿಗಳನ್ನು ವಸೂಲಿ ಮಾಡಿದ್ದರೂ, ಇನ್ನೂ ಸಾವಿರಾರು ಕೋಟಿ ರೂಪಾಯಿ ಸಾಲ ವಸೂಲಿ ಮಾಡಬೇಕಾಗಿದೆ.
19 ಮಂದಿಯ ಪೈಕಿ ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಸೇರಿ ಹತ್ತು ಮಂದಿಯನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿಗಳು (Fugitive Economic Offenders) ಎಂದು ಘೋಷಿಸಲಾಗಿದೆ. ಈ ಆರೋಪಿಗಳು ಸುಮಾರು 40000 ಕೋಟಿ ರೂ.ಗಳಷ್ಟು ವಂಚನೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಜಾರಿ ನಿರ್ದೇಶನಾಲಯವು ಇತರ ಒಂಬತ್ತು ಮಂದಿಯ ವಿರುದ್ಧ ಆರ್ಥಿಕ ಅಪರಾಧಿಗಳ ಕಾಯ್ದೆ, 2018 (FEOA) ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದೆ. ಸಂದೇಸರಸ್ ಮತ್ತು ಹಿತೇಶ್ ಕುಮಾರ್ ಪಟೇಲ್ ಗುಜರಾತ್ ಮೂಲದ ಫಾರ್ಮಾ ದೈತ್ಯ ಸ್ಟರ್ಲಿಂಗ್ ಬಯೋಟೆಕ್ ಕಂಪನಿಯನ್ನು ನಡೆಸುತ್ತಿದ್ದರು, ಒಂದು ಕಾಲದಲ್ಲಿ ವಿಶ್ವದ ಆರನೇ ಅತಿದೊಡ್ಡ ಜೆಲಾಟಿನ್ ಉತ್ಪಾದಕರಾಗಿದ್ದರು. ಮಾಲೀಕರು ಸಂಪತ್ತನ್ನು ಬೆನ್ನಟ್ಟಿ ಹೋದ ನಂತರ ಕಂಪನಿ ದಿವಾಳಿಯಾಯಿತು ಮತ್ತು ಯುಎಸ್ ಮೂಲದ ಆಹಾರ ಸ್ಟಾರ್ಟಪ್ ಕಂಪನಿ ಪರ್ಫೆಕ್ಟ್ ಡೇ ಇದನ್ನು ಸ್ವಾಧೀನಪಡಿಸಿಕೊಂಡಿತು.
ಜುನೈದ್ ಮೆಮೊನ್, ಹಜ್ರಾ ಮೆಮನ್ ಮತ್ತು ಆಸಿಫ್ ಮೆಮನ್ ಮೂವರು ಗ್ಯಾಂಗ್‌ಸ್ಟರ್, ಡ್ರಗ್ ಮಾಫಿಯಾದ ಪ್ರಮುಖ ಮುಖ್ಯಸ್ಥ ಇಕ್ಬಾಲ್ ಮಿರ್ಚಿಯ ಕುಟುಂಬ ಸದಸ್ಯರಾಗಿದ್ದಾರೆ. ಈತ ಭೂಗತ ಮಾಫಿಯಾ ಪಾತಕಿ, ದಾವೂದ್ ಇಬ್ರಾಹಿಂ ಬಲಗೈ ಬಂಟನಾಗಿದ್ದ.
ಈ ಪಟ್ಟಿಯಲ್ಲಿ ದೇವಾಸ್ ಮಲ್ಟಿಮೀಡಿಯಾದ ರಾಮಚಂದ್ರನ್ ವಿಶ್ವನಾಥನ್, ಮಾಜಿ ಮದ್ಯದ ಉದ್ಯಮಿ ವಿಜಯ್ ಮಲ್ಯ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿ ಅವರೂ ಸೇರಿದ್ದಾರೆ. ಆದರೂ, ಈ 19 ಆರೋಪಿಗಳಲ್ಲಿ ಕೇವಲ ನಾಲ್ವರನ್ನು ಮಾತ್ರ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಚಿವರು ಹೇಳಿದರು.












Click it and Unblock the Notifications